
ಭಾರತದ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡವನ್ನು ಘೋಷಿಸಲಾಗಿದೆ. ಲಾರ್ಡ್ಸ್ ಟೆಸ್ಟ್ನಲ್ಲಿ ಕಣಕ್ಕಿಳಿದಿದ್ದ ಶೊಯೆಬ್ ಬಶೀರ್ ಅವರನ್ನು ಗಾಯದ ಕಾರಣ ತಂಡದಿಂದ ಕೈ ಬಿಡಲಾಗಿದೆ. ಮೂರನೇ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ಬಶೀರ್ ಅವರ ಕೈಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದು, ಹೀಗಾಗಿ ಅವರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಇನ್ನು ಅವರ ಬದಲಿಗೆ 36 ವರ್ಷದ ಸ್ಪಿನ್-ಆಲ್ರೌಂಡರ್ ಲಿಯಾಮ್ ಡಾಸನ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಹಿಂದೆ ಇಂಗ್ಲೆಂಡ್ ಪರ 3 ಟೆಸ್ಟ್ ಪಂದ್ಯಗಳನ್ನಾಡಿದ್ದ ಲಿಯಾಮ್ ಡಾಸನ್ 5 ಇನಿಂಗ್ಸ್ಗಳಿಂದ 7 ವಿಕೆಟ್ ಕಬಳಿಸಿದ್ದರು. ಹಾಗೆಯೇ 84 ರನ್ ಕಲೆಹಾಕಿದ್ದರು. ಇದೀಗ ಬರೋಬ್ಬರಿ 8 ವರ್ಷಗಳ ಬಳಿಕ ಮತ್ತೆ ಅವರಿಗೆ ತಂಡದಲ್ಲಿ ಚಾನ್ಸ್ ಲಭಿಸಿದೆ. ಅಂದರೆ ಡಾಸನ್ ಕೊನೆಯ ಬಾರಿ ಇಂಗ್ಲೆಂಡ್ ಪರ ಟೆಸ್ಟ್ ಪಂದ್ಯವಾಡಿದ್ದು 2017 ರಲ್ಲಿ. ಇದೀಗ ನಾಲ್ಕನೇ ಟೆಸ್ಟ್ ಪಂದ್ಯದ ಮೂಲಕ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.
ಲಿಯಾಮ್ ಡಾಸನ್ ಅವರ ಆಯ್ಕೆಯನ್ನು ಹೊರತುಪಡಿಸಿ, ಲಾರ್ಡ್ಸ್ ಟೆಸ್ಟ್ ವೇಳೆ ಕಾಣಿಸಿಕೊಂಡ ಬಳಗವನ್ನೇ ಮ್ಯಾಂಚೆಸ್ಟರ್ ಟೆಸ್ಟ್ಗೂ ಮುಂದುವರೆಸಲಾಗಿದೆ. ಹೀಗಾಗಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಲೈನಪ್ನಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿಲ್ಲ ಎನ್ನಬಹುದು.
ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯವು ಜುಲೈ 23 ರಿಂದ ಶುರುವಾಗಲಿದೆ. ಅಂದರೆ ಮೂರನೇ ಮತ್ತು ನಾಲ್ಕನೇ ಟೆಸ್ಟ್ ನಡುವಣ 8 ದಿನಗಳ ಅಂತರವಿದೆ. ಈ ಎಂಟು ದಿನಗಳ ಬ್ರೇಕ್ ಬಳಿಕ ಉಭಯ ತಂಡಗಳು ಜುಲೈ 23 ರಿಂದ ಮ್ಯಾಚೆಂಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಕಣಕ್ಕಿಳಿಯಲಿದೆ.
ಇಂಗ್ಲೆಂಡ್ ಟೆಸ್ಟ್ ತಂಡ: ಝಾಕ್ ಕ್ರಾಲಿ , ಬೆನ್ ಡಕೆಟ್ , ಒಲೀ ಪೋಪ್ , ಜೋ ರೂಟ್ , ಹ್ಯಾರಿ ಬ್ರೂಕ್ , ಬೆನ್ ಸ್ಟೋಕ್ಸ್ (ನಾಯಕ) , ಜೇಮಿ ಸ್ಮಿತ್ (ವಿಕೆಟ್ ಕೀಪರ್) , ಕ್ರಿಸ್ ವೋಕ್ಸ್ , ಬ್ರೈಡನ್ ಕಾರ್ಸ್ , ಜೋಫ್ರಾ ಆರ್ಚರ್ , ಜೇಮಿ ಓವರ್ಟನ್ , ಜೋಶ್ ಟಂಗ್ , ಸ್ಯಾಮ್ ಜೇಮ್ಸ್ ಕುಕ್ , ಗಸ್ ಅಟ್ಕಿನ್ಸನ್ , ಜೇಕಬ್ ಬೆಥೆಲ್, ಲಿಯಾಮ್ ಡಾಸನ್.
ಇದನ್ನೂ ಓದಿ: ಟೀಮ್ ಇಂಡಿಯಾ ಸೋಲಿಗೆ ರವೀಂದ್ರ ಜಡೇಜಾ ಕಾರಣ..!
ಭಾರತ ಟೆಸ್ಟ್ ತಂಡ: ಯಶಸ್ವಿ ಜೈಸ್ವಾಲ್ , ಕೆಎಲ್ ರಾಹುಲ್ , ಕರುಣ್ ನಾಯರ್ , ಶುಭಮನ್ ಗಿಲ್ (ನಾಯಕ) , ರಿಷಭ್ ಪಂತ್ (ವಿಕೆಟ್ ಕೀಪರ್) , ನಿತೀಶ್ ಕುಮಾರ್ ರೆಡ್ಡಿ , ರವೀಂದ್ರ ಜಡೇಜಾ , ವಾಷಿಂಗ್ಟನ್ ಸುಂದರ್ , ಆಕಾಶ್ ದೀಪ್ , ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ , ಧ್ರುವ ಜುರೆಲ್ , ಸಾಯಿ ಸುದರ್ಶನ್ , ಅರ್ಷದೀಪ್ ಸಿಂಗ್ , ಅಭಿಮನ್ಯು ಈಶ್ವರನ್ , ಶಾರ್ದೂಲ್ ಠಾಕೂರ್ , ಕುಲದೀಪ್ ಯಾದವ್.