AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

England Test Squad: ಪಾಕ್ ವಿರುದ್ಧದ ಸರಣಿಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ

England vs Pakistan: ಪಾಕಿಸ್ತಾನ್ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಅಕ್ಟೋಬರ್ 7 ರಿಂದ ಶುರುವಾಗಲಿದೆ. ಪಾಕ್​ನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು ಮೂರು ಪಂದ್ಯಗಳನ್ನಾಡಲಾಗುತ್ತದೆ. ಮೊದಲ ಪಂದ್ಯವು ಮುಲ್ತಾನ್​ನಲ್ಲಿ ನಡೆದರೆ, 2ನೇ ಪಂದ್ಯವು ಕರಾಚಿಯಲ್ಲಿ ಜರುಗಲಿದೆ. ಹಾಗೆಯೇ ಮೂರನೇ ಪಂದ್ಯಕ್ಕೆ ರಾವಲ್ಪಿಂಡಿಯ ಸ್ಡೇಡಿಯಂ ಆತಿಥ್ಯವಹಿಸಲಿದೆ.

England Test Squad: ಪಾಕ್ ವಿರುದ್ಧದ ಸರಣಿಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ
ಸಾಂದರ್ಭಿಕ ಚಿತ್ರ
ಝಾಹಿರ್ ಯೂಸುಫ್
|

Updated on: Sep 11, 2024 | 1:30 PM

Share

ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ತಂಡವನ್ನು ಘೋಷಿಸಲಾಗಿದೆ. 17 ಸದಸ್ಯರ ಈ ತಂಡವನ್ನು ಬೆನ್ ಸ್ಟೋಕ್ಸ್ ಮುನ್ನಡೆಸಲಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಸ್ಟೋಕ್ಸ್ ಗಾಯಗೊಂಡಿದ್ದರು. ಹೀಗಾಗಿ ಲಂಕಾ ವಿರುದ್ಧದ ಸರಣಿಯಲ್ಲಿ ಒಲೀ ಪೋಪ್ ನಾಯಕರಾಗಿ ಕಾಣಿಸಿಕೊಂಡಿದ್ದರು. ಇದೀಗ ಗಾಯದಿಂದ ಗುಣಮುಖರಾಗಿರುವ ಬೆನ್ ಸ್ಟೋಕ್ಸ್ ಪಾಕ್ ವಿರುದ್ದದ ಸರಣಿಯ ಮೂಲಕ ಕಂಬ್ಯಾಕ್ ಮಾಡಲಿದ್ದಾರೆ.

ಇನ್ನು ಬೆರಳಿನ ಗಾಯದ ಕಾರಣ ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಝಾಕ್ ಕ್ರೌಲಿ ಕೂಡ ಪಾಕಿಸ್ತಾನ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಭಾರತ ವಿರುದ್ಧದ ಐದು ಟೆಸ್ಟ್ ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದ ಟಾಮ್ ಹಾರ್ಟ್ಲಿ ಅವರನ್ನು ಈ ಬಾರಿ ತಂಡದಿಂದ ಹೊರಗಿಡಲಾಗಿದೆ.

ಅಲ್ಲದೆ ತಂಡದಲ್ಲಿ ಸ್ಪಿನ್ನರ್​ಗಳಾಗಿ ಜ್ಯಾಕ್ ಲೀಚ್, ಶೊಯೇಬ್ ಬಶೀರ್ ಹಾಗೂ ರೆಹಾನ್ ಅಹ್ಮದ್ ಸ್ಥಾನ ಪಡೆದಿದ್ದಾರೆ. ಇನ್ನು ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂಲಕ ಇಂಗ್ಲೆಂಡ್ ಪರ ಪಾದಾರ್ಪಣೆ ಮಾಡಿದ್ದ ಜೋಶ್ ಹಲ್ ಅವರನ್ನು ಪಾಕ್ ವಿರುದ್ಧದ ಸರಣಿಗೂ ತಂಡದಲ್ಲೇ ಉಳಿಸಿಕೊಳ್ಳಲಾಗಿದೆ. ಹಾಗೆಯೇ ಹೊಸಮುಖಗಳಾಗಿ ಬ್ರೇಡೆನ್ ಕಾರ್ಸಿ ಮತ್ತು ಜೋರ್ಡನ್ ಕಾಕ್ಸ್ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಂತೆ ಪಾಕಿಸ್ತಾನ್ ವಿರುದ್ಧ ಟೆಸ್ಟ್​ ಸರಣಿಗೆ ಇಂಗ್ಲೆಂಡ್ ತಂಡ ಈ ಕೆಳಗಿನಂತಿದೆ…

ಇದನ್ನೂ ಓದಿ: CSK ಪರ ಆಡಬೇಕು… RCB ಆಟಗಾರನ ಹೇಳಿಕೆ..!

ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಗಸ್ ಅಟ್ಕಿನ್ಸನ್, ಶೊಯೇಬ್ ಬಶೀರ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಜೋರ್ಡನ್ ಕಾಕ್ಸ್, ಝಾಕ್ ಕ್ರೌಲಿ, ಬೆನ್ ಡಕೆಟ್, ಜೋಶ್ ಹಲ್, ಜ್ಯಾಕ್ ಲೀಚ್, ಒಲೀ ಪೋಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್ , ಜಾಮಿ ಸ್ಮಿತ್, ಒಲೀ ಸ್ಟೋನ್, ಕ್ರಿಸ್ ವೋಕ್ಸ್.

ಇಂಗ್ಲೆಂಡ್‌ – ಪಾಕಿಸ್ತಾನ್ ಟೆಸ್ಟ್ ಸರಣಿ ವೇಳಾಪಟ್ಟಿ:

  1. ಇಂಗ್ಲೆಂಡ್ vs  ಪಾಕಿಸ್ತಾನf – 1ನೇ ಟೆಸ್ಟ್ – ಮುಲ್ತಾನ್ – ಅಕ್ಟೋಬರ್ 7 – 11
  2. ಇಂಗ್ಲೆಂಡ್ vs ಪಾಕಿಸ್ತಾನ – 2ನೇ ಟೆಸ್ಟ್ – ಕರಾಚಿ – ಅಕ್ಟೋಬರ್ 15 – 19
  3. ಇಂಗ್ಲೆಂಡ್ vs ಪಾಕಿಸ್ತಾನ – 3ನೇ ಟೆಸ್ಟ್ – ರಾವಲ್ಪಿಂಡಿ – ಅಕ್ಟೋಬರ್ 24 – 28

ಸರಣಿ ಸ್ಥಳಾಂತರ ಸಾಧ್ಯತೆ:

ಮುಂಬರುವ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಸ್ಟೇಡಿಯಂಗಳ ನವೀಕರಣಕ್ಕೆ ಮುಂದಾಗಿದೆ. ಹೀಗಾಗಿ ಈ ಸರಣಿಯು ಸ್ಥಳಾಂತರವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇನ್ನು ಪಾಕ್​ನಲ್ಲಿ ಸರಣಿ ನಡೆಯದಿದ್ದರೆ ಯುಎಇ ನಲ್ಲಿ ಪಾಕಿಸ್ತಾನ್ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಬಹುದು.