AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENG vs AUS: ಆಸ್ಟ್ರೇಲಿಯನ್ನರ ಸಾಂಘಿಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್

England vs Australia ODI: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ 7 ವಿಕೆಟ್​ಗಳ ಗೆಲುವು ದಾಖಲಿಸಿದ್ದ ಆಸ್ಟ್ರೇಲಿಯಾ ಇದೀಗ ದ್ವಿತೀಯ ಏಕದಿನ ಪಂದ್ಯದಲ್ಲಿ 68 ರನ್​ಗಳ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಪಡೆದುಕೊಂಡಿದೆ.

ENG vs AUS: ಆಸ್ಟ್ರೇಲಿಯನ್ನರ ಸಾಂಘಿಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್
England vs Australia
ಝಾಹಿರ್ ಯೂಸುಫ್
|

Updated on: Sep 22, 2024 | 7:39 AM

Share

ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಆಸ್ಟ್ರೇಲಿಯಾ ತಂಡ ಜಯಭೇರಿ ಬಾರಿಸಿದೆ. ಲೀಡ್ಸ್​ನ ಹೆಡಿಂಗ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ಹಂಗಾಮಿ ನಾಯಕ ಹ್ಯಾರಿ ಬ್ರೂಕ್ ಬೌಲಿಂಗ್ ಆಯ್ದುಕೊಂಡಿದ್ದರು. ಅತ್ತ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಮ್ಯಾಥ್ಯೂ ಶಾರ್ಟ್ (29) ಹಾಗೂ ಟ್ರಾವಿಸ್ ಹೆಡ್ (29) ಸಾಧಾರಣ ಆರಂಭ ಒದಗಿಸಿದ್ದರು. ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಮಿಚೆಲ್ ಮಾರ್ಷ್ 59 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 60 ರನ್ ಬಾರಿಸಿ ರನ್​ ಗತಿ ಹೆಚ್ಚಿಸಲು ನೆರವಾದರು.

ಇನ್ನೊಂದೆಡೆ ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ 67 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 74 ರನ್​ ಚಚ್ಚಿದರು. ಆದರೆ ಸ್ಟೀವ್ ಸ್ಮಿತ್ (4), ಮಾರ್ನಸ್ ಲಾಬುಶೇನ್ (19) ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅಲ್ಲದೆ ಅಂತಿಮ ಓವರ್​ಗಳ ವೇಳೆ ಗ್ಲೆನ್ ಮ್ಯಾಕ್ಸ್​ವೆಲ್ ಕೇವಲ 7 ರನ್​ ಗಳಿಸಿ ಔಟಾದರು.

ಪರಿಣಾಮ ಆಸ್ಟ್ರೇಲಿಯಾ ತಂಡವು 44.4 ಓವರ್​ಗಳಲ್ಲಿ 270 ರನ್​ಗಳಿಸಿ ಆಲೌಟ್ ಆಯಿತು. ಇಂಗ್ಲೆಂಡ್ ಪರ ಬ್ರೈಡನ್ ಕಾರ್ಸ್ 10 ಓವರ್​ಗಳಲ್ಲಿ 75 ರನ್ ನೀಡಿ 3 ವಿಕೆಟ್ ಪಡೆದರೆ, ಆದಿಲ್ ರಶೀದ್, ಮ್ಯಾಥ್ಯೂ ಪಾಟ್ಸ್ ತಲಾ 2 ವಿಕೆಟ್ ಕಬಳಿಸಿದರು.

271 ರನ್​ಗಳ ಸುಲಭ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆಯಲಿಲ್ಲ. ಸ್ಪೋಟಕ ದಾಂಡಿಗ ಫಿಲ್ ಸಾಲ್ಟ್ ಕೇವಲ 12 ರನ್​ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದರೆ, ಆ ಬಳಿಕ ಬಂದ ವಿಲ್ ಜಾಕ್ಸ್ (0) ಶೂನ್ಯಕ್ಕೆ ಮಿಚೆಲ್ ಸ್ಟಾರ್ಕ್​ಗೆ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಹ್ಯಾರಿ ಬ್ರೂಕ್ ಇನಿಂಗ್ಸ್​ ಕೇವಲ 4 ರನ್​ಗಳಿಗೆ ಸೀಮಿತವಾಯಿತು.

ಇದರ ಬೆನ್ನಲ್ಲೇ ಲಿಯಾಮ್ ಲಿವಿಂಗ್​ಸ್ಟೋನ್ (0) ಸಹ ಬಂದ ವೇಗದಲ್ಲೇ ಪೆವಿಲಿಯನ್​​ಗೆ ಹಿಂತಿರುಗಿದರು. ಇದಾಗ್ಯೂ ಒಂದೆಡೆ ಬೆನ್ ಡಕೆಟ್ (32) ಆಸ್ಟ್ರೇಲಿಯಾ ಬೌಲರ್​ಗಳ ವಿರುದ್ಧ ತುಸು ಪ್ರತಿರೋಧ ತೋರಿದರೂ ಅದನ್ನು ಬೃಹತ್ ಮೊತ್ತವಾಗಿಸುವಲ್ಲಿ ವಿಫಲರಾದರು. ಇನ್ನು ಯುವ ದಾಂಡಿಗ ಜಾಮಿ ಸ್ಮಿತ್ 61 ಎಸೆತಗಳಲ್ಲಿ 49 ರನ್ ಬಾರಿಸಿ ಮಧ್ಯಮ ಕ್ರಮಾಂಕದಲ್ಲಿ  ತಂಡಕ್ಕೆ ಆಸರೆಯಾಗಿ ನಿಂತರು.

ಇತ್ತ ಸಾಂಘಿಕ ದಾಳಿಯೊಂದಿಗೆ ಇಂಗ್ಲೆಂಡ್ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಆಸ್ಟ್ರೇಲಿಯಾ ತಂಡವು ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಪರಿಣಾಮ ಇಂಗ್ಲೆಂಡ್ ತಂಡವು 40.2 ಓವರ್​ಗಳಲ್ಲಿ 202 ರನ್​ಗಳಿಸಿ ಸರ್ವಪತನ ಕಂಡಿತು. ಈ ಮೂಲಕ ಆಸ್ಟ್ರೇಲಿಯಾ ತಂಡವು 68 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 9.2 ಓವರ್​ಗಳಲ್ಲಿ 50 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಜೋಶ್ ಹ್ಯಾಝಲ್​ವುಡ್, ಆರೋನ್ ಹಾರ್ಡಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ತಲಾ 2 ವಿಕೆಟ್ ಪಡೆದು ಮಿಂಚಿದರು.

ಇಂಗ್ಲೆಂಡ್ ಪ್ಲೇಯಿಂಗ್ 11: ಫಿಲ್ ಸಾಲ್ಟ್ , ಬೆನ್ ಡಕೆಟ್ , ವಿಲ್ ಜ್ಯಾಕ್ಸ್ , ಹ್ಯಾರಿ ಬ್ರೂಕ್ (ನಾಯಕ) , ಜಾಮಿ ಸ್ಮಿತ್ (ವಿಕೆಟ್ ಕೀಪರ್) , ಲಿಯಾಮ್ ಲಿವಿಂಗ್​​ಸ್ಟೋನ್ , ಜೆಕೋಬ್ ಬೆಥೆಲ್ , ಬ್ರೈಡನ್ ಕಾರ್ಸೆ , ಓಲಿ ಸ್ಟೋನ್ , ಮ್ಯಾಥ್ಯೂ ಪಾಟ್ಸ್ , ಆದಿಲ್ ರಶೀದ್.

ಇದನ್ನೂ ಓದಿ: KL Rahul: ವಿಶೇಷ ಮೈಲುಗಲ್ಲು ದಾಟಿದ ಕೆಎಲ್ ರಾಹುಲ್

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್ , ಮ್ಯಾಥ್ಯೂ ಶಾರ್ಟ್ , ಮಿಚೆಲ್ ಮಾರ್ಷ್ (ನಾಯಕ) , ಸ್ಟೀವ್ ಸ್ಮಿತ್ , ಮಾರ್ನಸ್ ಲ್ಯಾಬುಶೇನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಗ್ಲೆನ್ ಮ್ಯಾಕ್ಸ್ ವೆಲ್ , ಆರೋನ್ ಹಾರ್ಡಿ , ಮಿಚೆಲ್ ಸ್ಟಾರ್ಕ್ , ಆ್ಯಡಂ ಝಂಪಾ , ಜೋಶ್ ಹ್ಯಾಝಲ್​ವುಡ್.