
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಲಂಡನ್‌ನ ದಿ ಓವಲ್ (Oval Test) ಮೈದಾನದಲ್ಲಿ ನಡೆಯುತ್ತಿದೆ. ಭಾನುವಾರದ ಆಟ ಮಳೆಯಿಂದಾಗಿ ನಿಗದಿತ ಸಮಯಕ್ಕೂ ಮುನ್ನವೇ ಕೊನೆಗೊಂಡಿತು. ದಿನದ ಅಂತ್ಯದ ವೇಳೆಗೆ ಇಂಗ್ಲೆಂಡ್ ಆರು ವಿಕೆಟ್‌ಗಳಿಗೆ 339 ರನ್ ಗಳಿಸಿದೆ. ಗೆಲ್ಲಲು ಐದನೇ ಮತ್ತು ಕೊನೆಯ ದಿನದಂದು ಆಂಗ್ಲರಿಗೆ 35 ರನ್ ಬೇಕಾಗಿದೆ. ತಂಡದ ಪರ ಜೇಮೀ ಸ್ಮಿತ್ 17 ಎಸೆತಗಳಲ್ಲಿ ಎರಡು ರನ್ ಮತ್ತು ಜೇಮೀ ಓವರ್ಟನ್ ಖಾತೆ ತೆರೆಯದೆ ಕ್ರೀಸ್‌ನಲ್ಲಿದ್ದಾರೆ. ಇತ್ತ ಭಾರತ ಪರ, ಪ್ರಸಿದ್ಧ್ ಕೃಷ್ಣ (Prasidh Krishna) ಮೂರು ವಿಕೆಟ್ ಮತ್ತು ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಪಡೆದಿದ್ದಾರೆ. ಇವರ ಹೊರತಾಗಿ, ಆಕಾಶ್ ದೀಪ್ ಒಂದು ವಿಕೆಟ್ ಉರುಳಿಸಿದ್ದಾರೆ.
1 ವಿಕಟ್ಗೆ 50 ರನ್‌ಗಳೊಂದಿಗೆ ಇಂಗ್ಲೆಂಡ್ ನಾಲ್ಕನೇ ದಿನದಾಟವನ್ನು ಆರಂಭಿಸಿತು. ಆರಂಭಿಕ ಬೆನ್ ಡಕೆಟ್ ಹಾಗೂ ನಾಯಕ ಓಲಿ ಪೋಪ್ ಆಟವನ್ನು ಮುಂದುವರೆಸಿದರು. ತಂಡದ ಮೊತ್ತ 82 ರನ್‌ಗಳಿದ್ದಾಗ ಪ್ರಸಿದ್ಧ್ ಕೃಷ್ಣ ಬೆನ್ ಡಕೆಟ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಡಕೆಟ್ 83 ಎಸೆತಗಳಲ್ಲಿ ಆರು ಬೌಂಡರಿಗಳ ಸಹಾಯದಿಂದ 54 ರನ್ ಗಳಿಸಿ ಔಟಾದರು. ಇದಾದ ನಂತರ ಸಿರಾಜ್, ನಾಯಕ ಓಲಿ ಪೋಪ್ ಅವರನ್ನು ಎಲ್ಬಿಡಬ್ಲ್ಯೂ ಬಲೆಗೆ ಕೆಡವಿದರು. ಪೋಪ್ 34 ಎಸೆತಗಳಲ್ಲಿ ಐದು ಬೌಂಡರಿಗಳ ಸಹಾಯದಿಂದ 27 ರನ್ ಗಳಿಸುವಲ್ಲಿ ಯಶಸ್ವಿಯಾದರು.
ಪೋಪ್ ವಿಕೆಟ್ ಪತನದ ನಂತರ ಜೊತೆಯಾದ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಶತಕದ ಜೊತೆಯಾಟವನ್ನಾಡಿದರು. ಈ ಸಮಯದಲ್ಲಿ, ಹ್ಯಾರಿ ಬ್ರೂಕ್ 91 ಎಸೆತಗಳಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ 10 ನೇ ಶತಕವನ್ನು ಪೂರೈಸಿದರು. ಅಂತಿಮವಾಗಿ ಬ್ರೂಕ್ 98 ಎಸೆತಗಳಲ್ಲಿ 14 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 111 ರನ್ ಗಳಿಸಿ ಔಟಾದರು. ನಾಲ್ಕನೇ ವಿಕೆಟ್‌ಗೆ ಜೋ ರೂಟ್ ಜೊತೆಗೆ ಅವರು 195 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇದು ಭಾರತದ ವಿರುದ್ಧ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ ಕಲೆಹಾಕಿದ ಎರಡನೇ ಅತ್ಯಧಿಕ ಪಾಲುದಾರಿಕೆಯಾಗಿದೆ. ಇದಕ್ಕೂ ಮೊದಲು, 2022 ರಲ್ಲಿ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ರೂಟ್ ಮತ್ತು ಬೈರ್‌ಸ್ಟೋವ್ 269* ರನ್‌ಗಳ ಜೊತೆಯಾಟವನ್ನಾಡಿದ್ದರು.
IND vs ENG: ಟೀಂ ಇಂಡಿಯಾ ವಿರುದ್ಧ ಹ್ಯಾಟ್ರಿಕ್ ಶತಕ ಬಾರಿಸಿದ ಜೋ ರೂಟ್
ಬ್ರೂಕ್ ಬಳಿಕ ಜೋ ರೂಟ್ ಕೂಡ ತಮ್ಮ ಟೆಸ್ಟ್ ವೃತ್ತಿಜೀವನದ 39 ನೇ ಶತಕವನ್ನು ಪೂರೈಸಿದರು. 101 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದ ರೂಟ್ಗೆ ಇದು ಭಾರತದ ವಿರುದ್ಧ 13 ನೇ ಟೆಸ್ಟ್ ಶತಕವೂ ಆಗಿದೆ. ಇದಲ್ಲದೆ, ಇದು ಇಂಗ್ಲೆಂಡ್‌ನಲ್ಲಿ ಜೋ ರೂಟ್ ಅವರ 24 ನೇ ಟೆಸ್ಟ್ ಶತಕವಾಗಿದ್ದು, ಇದು ತವರು ಟೆಸ್ಟ್ ಪಂದ್ಯಗಳಲ್ಲಿ ಯಾವುದೇ ಆಟಗಾರ ಗಳಿಸಿದ ಅತಿ ಹೆಚ್ಚು ಶತಕಗಳ ದಾಖಲೆಯಾಗಿದೆ. ಇದಕ್ಕೂ ಮೊದಲು, ರಿಕಿ ಪಾಂಟಿಂಗ್, ಜಾಕ್ವೆಸ್ ಕಾಲಿಸ್ ಮತ್ತು ಮಹೇಲಾ ಜಯವರ್ಧನೆ ತಲಾ 23 ಶತಕಗಳನ್ನು ಗಳಿಸಿದ್ದರು. ಅಂತಿಮವಾಗಿ ರೂಟ್ 152 ಎಸೆತಗಳಲ್ಲಿ 105 ರನ್ ಗಳಿಸಿ ಔಟಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:19 pm, Sun, 3 August 25