AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಯಸ್ಸಿನ ವಂಚನೆಯನ್ನು ತಡೆಯಲು ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟ ಬಿಸಿಸಿಐ

BCCI Hires Agency to Verify Cricketer Ages: ಭಾರತೀಯ ಕ್ರಿಕೆಟ್‌ನಲ್ಲಿ ವಯಸ್ಸಿನ ವಂಚನೆ ಹೆಚ್ಚುತ್ತಿರುವುದರಿಂದ, ಬಿಸಿಸಿಐ ಆಟಗಾರರ ನಿಜವಾದ ವಯಸ್ಸನ್ನು ಪರಿಶೀಲಿಸಲು ಬಾಹ್ಯ ಏಜೆನ್ಸಿಯನ್ನು ನೇಮಿಸಲು ನಿರ್ಧರಿಸಿದೆ. ಇದಕ್ಕಾಗಿ ಎರಡು ಹಂತದ ಪರಿಶೀಲನಾ ವ್ಯವಸ್ಥೆ ಜಾರಿಗೆ ತರಲಾಗಿದೆ: ದಾಖಲೆಗಳ ಪರಿಶೀಲನೆ ಮತ್ತು ಮೂಳೆ ಪರೀಕ್ಷೆ. ಆಗಸ್ಟ್ ಅಂತ್ಯದೊಳಗೆ ಏಜೆನ್ಸಿಯನ್ನು ನೇಮಕ ಮಾಡಲಾಗುವುದು ಮತ್ತು ವಂಚನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

ವಯಸ್ಸಿನ ವಂಚನೆಯನ್ನು ತಡೆಯಲು ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟ ಬಿಸಿಸಿಐ
Bcci
ಪೃಥ್ವಿಶಂಕರ
|

Updated on: Aug 03, 2025 | 9:27 PM

Share

ಭಾರತ ಕ್ರಿಕೆಟ್​ನಲ್ಲಿ ಆಟಗಾರರು ವಯಸ್ಸಿನ ವಂಚನೆ (Age fraud in cricket) ಆರೋಪದಲ್ಲಿ ಸಿಕ್ಕಿ ಬೀಳುತ್ತಿರುವ ಘಟನೆಗಳು ಆಗಾಗ್ಗೆ ನಡೆಯುತ್ತಿವೆ. ಇದನ್ನು ತಪ್ಪಿಸುವ ಸಲುವಾಗಿ ಬಿಸಿಸಿಐ (BCCI) ಕೂಡ ನಾನಾ ಪರೀಕ್ಷೆಗಳನ್ನು ಜಾರಿಗೆ ತಂದಿದೆ. ಇದೀಗ ಆಟಗಾರರ ನಿಜವಾದ ವಯಸ್ಸನ್ನು ಪತ್ತೆ ಹಚ್ಚುವ ಸಲುವಾಗಿ ಬಿಸಿಸಿಐ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಆಟಗಾರರ ವಯಸ್ಸು ಮತ್ತು ಇತರ ಮಾಹಿತಿಯನ್ನು ಪರಿಶೀಲಿಸಲು ಬಾಹ್ಯ ಸಂಸ್ಥೆಯನ್ನು ನೇಮಿಸಲು ಮುಂದಾಗಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಬಿಸಿಸಿಐ ಎರಡು ಹಂತದ ವಯಸ್ಸಿನ ಪರಿಶೀಲನಾ ವ್ಯವಸ್ಥೆಯ ಸಹಾಯದಿಂದ ಆಟಗಾರರ ಸರಿಯಾದ ವಯಸ್ಸನ್ನು ಗುರುತಿಸಲು ಮುಂದಾಗಿದೆ ಈ ವ್ಯವಸ್ಥೆಯು ಮೊದಲು ದಾಖಲೆಗಳು ಮತ್ತು ಜನನ ಪ್ರಮಾಣಪತ್ರಗಳ ಪರಿಶೀಲನೆಯನ್ನು ಒಳಗೊಂಡಿರುತ್ತದೆ. ಇದರ ನಂತರ, ಎರಡನೆಯದು ಮೂಳೆ ಪರೀಕ್ಷೆಯಾಗಿದ್ದು, ಇದನ್ನು ಸಾಮಾನ್ಯವಾಗಿ TW3 ಅಂದರೆ ಟ್ಯಾನರ್ ವೈಟ್‌ಹೌಸ್ 3 ಎಂದು ಕರೆಯಲಾಗುತ್ತದೆ. ಈ ಪರಿಶೀಲನೆಗಳನ್ನು ಹೆಚ್ಚಾಗಿ 16 ವರ್ಷದೊಳಗಿನ ಹುಡುಗರು ಮತ್ತು 15 ವರ್ಷದೊಳಗಿನ ಹುಡುಗಿಯರ ಮಟ್ಟದಲ್ಲಿ ಮಾಡಲಾಗುತ್ತದೆ.

ಇದೀಗ ಬಿಸಿಸಿಐ ಆಟಗಾರರ ನಿಜವಾದ ವಯಸ್ಸನ್ನು ಪತ್ತೆ ಹಚ್ಚುವ ಕೆಲಸವನ್ನು ವೃತ್ತಿಪರ ಏಜೆನ್ಸಿಯಿಂದ ಮಾಡಿಸಲು ನಿರ್ಧರಿಸಿದೆ. ಇದಕ್ಕಾಗಿ, ಬಿಸಿಸಿಐ ಬಿಡ್ಡಿಂಗ್ ಕೂಡ ಕರೆದಿದ್ದು, ಅನೇಕ ಪ್ರಸಿದ್ಧ ಕಂಪನಿಗಳನ್ನು ಬಿಡ್ ಮಾಡಲು ಮುಂದಾಗಿವೆ ಎಂದು ವರದಿಯಾಗಿವೆ. ಸಿಕ್ಕಿರುವ ಮಾಹಿತಿ ಪ್ರಕಾರ ಆಗಸ್ಟ್ ಅಂತ್ಯದ ವೇಳೆಗೆ ಈ ಕೆಲಸಕ್ಕೆ ಏಜೆನ್ಸಿಯನ್ನು ನೇಮಿಸಲಾಗುವುದು. ಇದಲ್ಲದೆ ಬಿಸಿಸಿಐ, ಆಧಾರ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ ಮತ್ತು ಇತರ ಎಲ್ಲಾ ಪುರಾವೆಗಳನ್ನು ಸಹ ಎಚ್ಚರಿಕೆಯಿಂದ ಪರಿಶೀಲಿಸಲು ತೀರ್ಮಾನಿಸಿದೆ. ಈ ತನಿಖೆಗಳ ಪ್ರಕ್ರಿಯೆಯು ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ನಡೆಯಲಿದ್ದು, ಆಟಗಾರರು ಈಗ ಈ ಎಲ್ಲಾ ವಿಷಯಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಯಾವುದೇ ಆಟಗಾರ ಇದರಲ್ಲಿ ಸಿಕ್ಕಿಬಿದ್ದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

ವಯಸ್ಸಿನ ವಂಚನೆಯಲ್ಲಿ ಯಾರ್ಯಾರು ಸಿಕ್ಕಿಬಿದಿದ್ದಾರೆ?

ಯುವ ಆಟಗಾರ ನಿತೀಶ್ ರಾಣಾ ಅವರ ಜನ್ಮ ದಿನಾಂಕದಲ್ಲಿ ವ್ಯತ್ಯಾಸವಿರುವುದು ಪತ್ತೆಯಾಗಿತ್ತು. ಹೀಗಾಗಿ 2015 ರಲ್ಲಿ, ವಯಸ್ಸಿನ ವಂಚನೆಯ ಆರೋಪದಡಿ ಬಿಸಿಸಿಐ ದೆಹಲಿಯ 22 ಆಟಗಾರರನ್ನು ನಿಷೇಧಿಸಿತ್ತು. ಇದರಲ್ಲಿ ನಿತೀಶ್ ಅವರ ಹೆಸರೂ ಸೇರಿತ್ತು. ಅಲ್ಲದೆ ನಿತೀಶ್ ಅವರನ್ನು ವಯೋಮಾನದ ಪಂದ್ಯಾವಳಿಗಳಲ್ಲಿ ಆಡದಂತೆ ನಿಷೇಧಿಸಲಾಯಿತು. ಇದರ ಹೊರತಾಗಿ, ರಾಜಸ್ಥಾನ ರಾಯಲ್ಸ್‌ನ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅವರ ವಯಸ್ಸಿನ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿದೆ. ಆದಾಗ್ಯೂ, ಈ ಎಲ್ಲಾ ಆರೋಪಗಳು ಆದಾರ ರಹಿತವಾಗಿವೆ ಎಂಬುದು ಬಿಸಿಸಿಐ ಸ್ಪಷ್ಟನೆಯಾಗಿದೆ.

2018 ರ ಅಂಡರ್-19 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದೆಹಲಿಯ ಮಂಜೋತ್ ಕಲ್ರಾ ಕೂಡ ಈ ಪಟ್ಟಿಯಲ್ಲಿದ್ದಾರೆ. ವಯಸ್ಸಿನ ವಂಚನೆ ಆರೋಪದಡಿಯಲ್ಲಿ ಕಲ್ರಾ ಅವರನ್ನು 2020 ರಲ್ಲಿ ವಯೋಮಾನದ ಕ್ರಿಕೆಟ್‌ನಿಂದ ಎರಡು ವರ್ಷಗಳ ಕಾಲ ನಿಷೇಧಿಸಲಾಯಿತು. ಹಾಗೆಯೇ ರಣಜಿ ಟ್ರೋಫಿಯಲ್ಲಿ ಆಡದಂತೆ ಒಂದು ವರ್ಷ ನಿಷೇಧ ಹೇರಲಾಯಿತು.

IND vs ENG: ಮತ್ತೆ ಇಂಗ್ಲೆಂಡ್‌ ಪ್ರವಾಸ ಮಾಡಲಿದೆ ಟೀಂ ಇಂಡಿಯಾ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಏಜೆನ್ಸಿಯ ನಿಯಮಗಳು ಮತ್ತು ಷರತ್ತುಗಳು

ನೇಮಕಗೊಳ್ಳುವ ಏಜೆನ್ಸಿಗೆ ಮಂಡಳಿಯು ಕೆಲವು ಷರತ್ತುಗಳನ್ನು ವಿಧಿಸಿದೆ. ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಬಿಡ್ಡಿಂಗ್ ಏಜೆನ್ಸಿಗಳು ಕಾರ್ಪೊರೇಟ್ ಕಂಪನಿಗಳು, ಶೈಕ್ಷಣಿಕ ಮಂಡಳಿಗಳು/ಸಂಸ್ಥೆಗಳು ಮತ್ತು ನೇಮಕಾತಿಗಳಂತಹ ದೊಡ್ಡ ಸಂಸ್ಥೆಗಳಿಗೆ ಹಿನ್ನೆಲೆ ಪರಿಶೀಲನಾ ಸೇವೆಗಳನ್ನು ಒದಗಿಸುವಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕು.

ಇದಲ್ಲದೆ, ಬಿಡ್ಡಿಂಗ್ ಏಜೆನ್ಸಿಗಳು ರಾಷ್ಟ್ರವ್ಯಾಪಿ ಜಾಲವನ್ನು ಹೊಂದಿರಬೇಕು ಅಥವಾ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭೌತಿಕವಾಗಿ ಮತ್ತು ಡಿಜಿಟಲ್ ಆಗಿ ತಪಾಸಣೆ ನಡೆಸಲು ಸಿದ್ಧರಿರಬೇಕು. ಅಗತ್ಯವಿದ್ದರೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಿಗೂ ಈ ಏಜೆನ್ಸಿ ಭೇಟಿ ನೀಡಿ ಆಟಗಾರರ ವಯಸ್ಸನ್ನು ಪರಿಶೀಲಿಸಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ