ಒಂದೇ ತಂಡದಲ್ಲಿ ಸಹೋದರರು ಕಾಣಿಸಿಕೊಳ್ಳುವುದು ಸಾಮಾನ್ಯ. ಟೀಮ್ ಇಂಡಿಯಾ ಪರ ಇರ್ಫಾನ್ ಪಠಾಣ್-ಯೂಸುಫ್ ಪಠಾಣ್ ಆಡಿದ್ದರು. ಹಾಗೆಯೇ ಪಾಂಡ್ಯ ಬ್ರದರ್ಸ್ ಹಾರ್ದಿಕ್ ಹಾಗೂ ಕೃನಾಲ್ ಕೂಡ ಕಾಣಿಸಿಕೊಂಡಿದ್ದರು. ಇನ್ನು ಆಸ್ಟ್ರೇಲಿಯಾ, ಇಂಗ್ಲೆಂಡ್, ಜಿಂಬಾಬ್ವೆ, ಪಾಕಿಸ್ತಾನ್ ಸೇರಿದಂತೆ ಅನೇಕ ತಂಡಗಳಲ್ಲಿ ಸಹೋದರರು ಜೊತೆಯಾಗಿ ಆಡಿದ್ದಾರೆ. ಇದಾಗ್ಯೂ ಇತ್ತೀಚಿನ ದಿನಗಳಲ್ಲಿ ಅವಳಿ-ಜವಳಿ ಸಹೋದರರು ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಅಂತಹದೊಂದು ಅಪರೂಪದ ಕ್ಷಣಕ್ಕೆ ಕ್ರಿಕೆಟ್ ಅಂಗಳ ಸಾಕ್ಷಿಯಾಗುವ ಸಾಧ್ಯತೆಯಿದೆ. ಏಕೆಂದರೆ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಆಯ್ಕೆ ಮಾಡಲಾದ ಇಂಗ್ಲೆಂಡ್ ತಂಡದಲ್ಲಿ ಅವಳಿ-ಜವಳಿ ಸಹೋದರರಿದ್ದಾರೆ.
14 ಸದಸ್ಯರ ಇಂಗ್ಲೆಂಡ್ ಬಳಗದಲ್ಲಿ ಜೇಮೀ ಓವರ್ಟನ್ ಹಾಗೂ ಕ್ರೇಗ್ ಓವರ್ಟನ್ ಸ್ಥಾನ ಪಡೆದಿದ್ದಾರೆ. ಈ ಅವಳಿ ಸಹೋದರರು ನೋಡಲು ಸಹ ಒಬ್ಬರನ್ನೊಬ್ಬರು ಬಹುತೇಕ ಹೋಲುತ್ತದೆ. ಇದಾಗ್ಯೂ ಜೇಮಿಗಿಂತ ಕ್ರೇಗ್ ಕೇವಲ 3 ನಿಮಿಷಗಳ ಹಿರಿಯರು ಎಂಬುದು ವಿಶೇಷ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ 3 ಟೆಸ್ಟ್‌ಗಳ ಸರಣಿಯ ಕೊನೆಯ ಪಂದ್ಯ ಜೂನ್ 23 ರಿಂದ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ನಡೆಯಲಿದೆ.
ಈ ಪಂದ್ಯದಲ್ಲಿ ಓವರ್‌ಟನ್ ಸಹೋದರರು ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಪಡೆದರೆ, ಇಂಗ್ಲೆಂಡ್ ಪರ ಆಡಿದ ಮೊದಲ ಅವಳಿ ಸಹೋದರರು ಎಂಬ ಖ್ಯಾತಿ ಕ್ರೇಗ್-ಜೇಮಿ ಪಾಲಾಗಲಿದೆ. ಇನ್ನು ಕ್ರಿಕೆಟ್ ಇತಿಹಾಸದಲ್ಲಿ ಅವಳಿ ಸಹೋದರರಾಗಿ ಈ ಹಿಂದೆ ಆಸ್ಟ್ರೇಲಿಯಾದ ಸ್ಟೀವ್ ವಾ ಹಾಗೂ ಮಾರ್ಕ್ ವಾ ಕಾಣಿಸಿಕೊಂಡಿದ್ದರು. ಇದಾಗ್ಯೂ ಇಬ್ಬರು ಒಬ್ಬರನ್ನೊಬ್ಬರು ಹೋಲುತ್ತಿರಲಿಲ್ಲ. ಹಾಗೆಯೇ ಅವಳಿ ಸಹೋದರಾದ ಹ್ಯಾಮಿಶ್ ಮಾರ್ಷಲ್ ಮತ್ತು ಜೇಮ್ಸ್ ಮಾರ್ಷಲ್ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ಇಂಗ್ಲೆಂಡ್ ತಂಡದಲ್ಲಿ ಅವಳಿ ಜವಳಿ ಜೋಡಿ ಕಾಣಿಸಿಕೊಂಡಿದ್ದು, ಇಬ್ಬರಿಗೂ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಸಿಗಲಿದೆಯಾ ಕಾದು ನೋಡಬೇಕಿದೆ.
ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ 3 ಟೆಸ್ಟ್ ಪಂದ್ಯಗಳಲ್ಲಿ ಆತಿಥೇಯರು 2-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಲಾರ್ಡ್ಸ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಇದಾದ ಬಳಿಕ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಗುರಿ ಬೆನ್ನತ್ತಿ ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ದಾಖಲಿಸಿತು. ಇದೀಗ ಈ ಸರಣಿಯ ಕೊನೆಯ ಪಂದ್ಯವು ಜೂನ್ 23 ರಿಂದ ಹೆಡಿಂಗ್ಲಿಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲೂ ಗೆಲ್ಲುವ ಮೂಲಕ ಕಿವೀಸ್ ಬಳಗವನ್ನು ವೈಟ್ ವಾಶ್ ಮಾಡುವ ಇರಾದೆಯಲ್ಲಿದೆ ಬೆನ್ ಸ್ಟೋಕ್ಸ್ ಬಳಗ.
ಮೂರನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜೇಮ್ಸ್ ಆಂಡರ್ಸನ್, ಜೊನಾಥನ್ ಬೈರ್‌ಸ್ಟೋ, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಫೋಕ್ಸ್, ಜಾಕ್ ಲೀಚ್, ಅಲೆಕ್ಸ್ ಲೀಸ್, ಕ್ರೇಗ್ ಓವರ್‌ಟನ್, ಜೇಮೀ ಓವರ್‌ಟನ್, ಮ್ಯಾಥ್ಯೂ ಪಾಟ್ಸ್, ಆಲಿ ಪೋಪ್, ಜೋ ರೂಟ್.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.