ಕಳೆದ ವರ್ಷ ಬಾಲಿವುಡ್ ನಟಿ ಸುಶ್ಮಿತಾ ಸೇನ್ (Sushmita Sen) ಅವರೊಂದಿಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದರೊಂದಿಗೆ ಸಖತ್ ಸುದ್ದಿ ಮಾಡಿದ್ದ ಐಪಿಎಲ್ (IPL) ಜನಕ ಹಾಗೂ ಮಾಜಿ ಅಧ್ಯಕ್ಷ ಲಲಿತ್ ಮೋದಿ (Lalit Modi) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಇದೀಗ ಲಲಿತ್ ಮೋದಿ ಸುದ್ದಿಯಾಗಿರುವುದು ಅವರ ಆರೋಗ್ಯದ ವಿಚಾರವಾಗಿ. ಕಳೆದ ಎರಡು ವಾರಗಳಲ್ಲಿ ಎರಡು ಬಾರಿ ಕೊರೊನಾ (Corona) ಸೋಂಕಿಗೆ ತುತ್ತಾಗಿರುವ ಲಲಿತ್ ಮೋದಿಗೆ ನ್ಯುಮೋನಿಯಾ ಕಾಯಿಲೆಯೂ ಬಿಟ್ಟು ಬಿಡದಂತೆ ಕಾಡುತ್ತಿದೆ. ಹೀಗಾಗಿ ಮೋದಿ ದಿನದ 24 ಗಂಟೆಯೂ ಕೃತಕ ಆಮ್ಲಜನಕದ ಸಹಾಯದಿಂದ ಉಸಿರಾಡುವಂತ್ತಾಗಿದೆ.
ತಮ್ಮ ಆರೋಗ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ನೀಡಿರುವ 59 ವರ್ಷ ವಯಸ್ಸಿನ ಮೋದಿ, ಮೂರು ವಾರಗಳ ಕ್ವಾರಂಟೈನ್ ನಂತರ ಮೆಕ್ಸಿಕೊದಿಂದ ನನ್ನನ್ನು ಲಂಡನ್‌ಗೆ ವಿಮಾನದಲ್ಲಿ ಕಳುಹಿಸಲಾಗಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡುವುದರ ಜೊತೆಗೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ತಮ್ಮ ಫೋಟೋವನ್ನು ಮೋದಿ ಸೋಶಿಯಲ್ ಮೀಡಿಯಾದಲ್ಲಿ ಕಂಚಿಕೊಂಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದರ ಹಿಂದೆ ಒಂದರಂತೆ ಐದು ಫೋಟೋಗಳನ್ನು ಪೋಸ್ಟ್ ಮಾಡಿರುವ ಮೋದಿ, ಲಂಡನ್‌ನಲ್ಲಿ ನನಗೆ ಉತ್ತಮ ಚಿಕಿತ್ಸೆ ನೀಡಿದ ಇಬ್ಬರು ಸೂಪರ್‌ಸ್ಟಾರ್ ವೈದ್ಯರು ಮತ್ತು ಮಗನೊಂದಿಗೆ ಏರ್ ಆಂಬುಲೆನ್ಸ್ ಮೂಲಕ ಬಂದಿಳಿದಿರುವುದಾಗಿ ಹೇಳಿಕೊಂಡಿದ್ದಾರೆ. ಲಲಿತ್ ಮೋದಿಯ ಈ ಪೋಸ್ಟ್ ನೋಡಿದ ನಂತರ, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಪ್ರತಿಕ್ರಿಯಿಸಿದ್ದು, ಲಲಿತ್ ಮೋದಿ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಇವರಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಕಳೆದ ವರ್ಷ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರೊಂದಿಗಿನ ಸಂಬಂಧವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಲಲಿತ್ ಮೋದಿ ಸುದ್ದಿಯಾಗಿದ್ದರು. ಅಲ್ಲದೆ ದಂಪತಿಗಳು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಮುನ್ನಲೆಗೆ ಬಂದಿದ್ದವು. ಆದರೆ ನಟಿ ಸುಶ್ಮಿತಾ ಸೇನ್ ಮಾತ್ರ ಈ ವದಂತಿಯನ್ನು ಸರಾಸಗಟಾಗಿ ನಿರಾಕರಿಸಿದ್ದಲ್ಲದೆ, ಇದೆಲ್ಲವು ಸುಳ್ಳು ಎಂದು ಹೇಳಿಕೊಂಡಿದ್ದರು.
ಲಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ ಇಬ್ಬರೂ ತಿಂಗಳುಗಟ್ಟಲೆ ಒಟ್ಟಿಗೆ ಫೋಟೋಗಳನ್ನು ಪೋಸ್ಟ್ ಮಾಡದ ಕಾರಣ ಮತ್ತು ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳದ ಕಾರಣ ಈ ಜೋಡಿಗಳು ಬೇರ್ಪಟ್ಟಿದ್ದಾರೆ ಎಂದು ಹಲವರು ಊಹಿಸುತ್ತಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:20 am, Sat, 14 January 23