Explained: ಕೊರೋನಾಂತಕ ಎಂಬುದು ಕಟ್ಟುಕಥೆಯೇ? 5ನೇ ಟೆಸ್ಟ್​ ರದ್ದು ಮಾಡಲು ಇದುವೇ ಅಸಲಿ ಕಾರಣ

IPL 2021: ಈ ಹಿಂದೆ ಬಿಸಿಸಿಐ ಬಯೋ ಬಬಲ್ ಟು ಬಯೋ ಬಬಲ್ ಅವಕಾಶ ಸಿಗಲಿದೆ ಎಂದು ಇಂಗ್ಲೆಂಡ್ ಸರಣಿ ಹಾಗೂ ಐಪಿಎಲ್ ಸರಣಿ ವೇಳಾಪಟ್ಟಿಯನ್ನು ಸಿದ್ಧಪಡಿಸಿತ್ತು.

  • Publish Date - 2:48 pm, Sun, 12 September 21
Explained: ಕೊರೋನಾಂತಕ ಎಂಬುದು ಕಟ್ಟುಕಥೆಯೇ? 5ನೇ ಟೆಸ್ಟ್​ ರದ್ದು ಮಾಡಲು ಇದುವೇ ಅಸಲಿ ಕಾರಣ
Team India

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗ ಮ್ಯಾಂಚೆಸ್ಟರ್​ನಲ್ಲಿ ಭಾರತ-ಇಂಗ್ಲೆಂಡ್ (India vs England) ನಡುವಣ ಐದನೇ ಟೆಸ್ಟ್ ಪಂದ್ಯ  ನಡೆಯುತ್ತಿತ್ತು. ಆದರೆ ಹಾಗೆ ಆಗಲಿಲ್ಲ. ಇನ್ನೇನು ಪಂದ್ಯ ಆರಂಭವಾಗಲಿದೆ ಎನ್ನುವಾಗ ಟೀಮ್ ಇಂಡಿಯಾ (Team India) ಪಂದ್ಯದಿಂದ ಹಿಂದೆ ಸರಿದಿದ್ದರು. ಇದರ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ಪಂದ್ಯವನ್ನು ರದ್ದು ಮಾಡಿರುವುದಾಗಿ ಘೋಷಿಸಿತು. ಇದಕ್ಕೆ ನೀಡಲಾಗಿರುವ ಕಾರಣ ಕೋರೋನಾಂತಕ. ನಾಲ್ಕನೇ ಟೆಸ್ಟ್ ವೇಳೆ ಟೀಮ್ ಇಂಡಿಯಾ ಕೋಚ್ ಸೇರಿದಂತೆ ಕೆಲ ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತು. ಇನ್ನು ಐದನೇ ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿ ಕಿರಿಯ ಫಿಸಿಯೊ ಯೋಗೇಶ್‌ ಪರ್ಮಾರ್ ಅವರು ಕೂಡ ಕೋವಿಡ್‌-19 ಪಾಸಿಟಿವ್ ಆಗಿದ್ದರು. ಇದೇ ಕಾರಣದಿಂದ ಟೀಮ್ ಇಂಡಿಯಾ (Team India) ಆಟಗಾರರು ಟೆಸ್ಟ್​ನಲ್ಲಿ ಕಣಕ್ಕಿಳಿಯಲು ಆತಂಕ ವ್ಯಕ್ತಪಡಿಸಿದ್ದರು. ಇತ್ತ ಐದನೇ ಟೆಸ್ಟ್​ ಅನ್ನು ಬಿಸಿಸಿಐ-ಇಸಿಬಿ ಮುಂದೂಡುವ ನಿರ್ಧಾರ ಕೈಗೊಳ್ಳುತ್ತಿದ್ದಂತೆ, ಟೀಮ್ ಇಂಡಿಯಾದ ಐಪಿಎಲ್ (IPL 2021)​ ಆಟಗಾರರು ಯುಎಇನತ್ತ ಪ್ರಯಾಣ ಬೆಳೆಸಿದರು. ಇದರ ಬೆನ್ನಲ್ಲೇ ಟೆಸ್ಟ್ ಆಡುವಾಗ ಇರುವ ಕೊರೋನಾಂತಕ ಐಪಿಎಲ್​ ವೇಳೆ ಇರಲ್ವೇ? ಎಂಬ ಪ್ರಶ್ನೆ ಹಲವರಲ್ಲಿ ಮೂಡಿದ್ದು ಸುಳ್ಳಲ್ಲ.

ಹೌದು, ಟೀಮ್ ಇಂಡಿಯಾ ಆಟಗಾರರ ನಿರ್ಧಾರದ ಬಗ್ಗೆ ಹಲವು ಅನುಮಾನಗಳು ಮೂಡಲು ಇದೊಂದು ದೊಡ್ಡ ಕಾರಣ. ಏಕೆಂದರೆ ಐದನೇ ಟೆಸ್ಟ್​ ನಡೆಯಬೇಕಿದ್ದ ಮ್ಯಾಂಚೆಸ್ಟರ್​ನಲ್ಲಿ ಕೊರೋನಾ ಭೀತಿ ಇದೆಯಾ ಎಂದು ಕೇಳಿದ್ರೆ ಖಂಡಿತ ಇಲ್ಲಾ ಎಂಬ ಉತ್ತರ ಸಿಗುತ್ತೆ. ಮ್ಯಾಂಚೆಸ್ಟರ್​ ನಗರದಲ್ಲಿ ಮಾಸ್ಕ್ ಧರಿಸದಿದ್ದರೆ ಯಾರೊಬ್ಬರೂ ಕೂಡ ರಸ್ತೆಯಲ್ಲಿ ತಡೆದು ದಂಡ ಕೂಡ ಹಾಕಲ್ಲ. ಇನ್ನು ಗುಂಪು ಸೇರುವುದು ಕೂಡ ಮುಕ್ತ. ಇದಕ್ಕೆ ಸಾಕ್ಷಿಯೇ ಮ್ಯಾಂಚೆಸ್ಟರ್​ನಲ್ಲಿ ನಡೆದ ಫುಟ್​ಬಾಲ್ ಪಂದ್ಯ. ಸೆಪ್ಟೆಂಬರ್ 11 ರಂದು ಓಲ್ಡ್​ ಟ್ರಾಫೋರ್ಡ್​ನಲ್ಲಿ ನಡೆದ ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ನ್ಯೂಕ್ಯಾಸ್ಟಲ್ ನಡುವಣ ಪಂದ್ಯಕ್ಕೆ ಸ್ಟೇಡಿಯಂನಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಅದು ಕೂಡ ಮಾಸ್ಕ್ ಇಲ್ಲದೆ ಎಂಬುದು ವಿಶೇಷ. ಒಂದು ವೇಳೆ ಮ್ಯಾಂಚೆಸ್ಟರ್ ಸಿಟಿ ಸೇಫ್ ಅಲ್ಲದಿದ್ದರೆ ಸ್ಟೇಡಿಯಂ ಪ್ರವೇಶಕ್ಕೆ ಅನುಮತಿ ನೀಡುತ್ತಿರಲಿಲ್ಲ. ಆದರೆ ಇಂಗ್ಲೆಂಡ್​ನಲ್ಲಿ ಕ್ರಿಕೆಟ್​, ಫುಟ್​ಬಾಲ್ ಸೇರಿದಂತೆ ಎಲ್ಲಾ ಪಂದ್ಯಗಳನ್ನು ಸ್ಟೇಡಿಯಂನಲ್ಲಿ ವೀಕ್ಷಿಸಲು ಅವಕಾಶ ನೀಡಲಾಗುತ್ತಿದೆ.

ಇನ್ನು ಟೀಮ್ ಇಂಡಿಯಾ ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಟಗಾರರು ಆತಂಕಗೊಂಡಿದ್ದರು ಎನ್ನುವುದಾದರೆ, ಮೊದಲು ಸೋಂಕು ಪತ್ತೆಯಾಗಿದ್ದು ಕೋಚ್ ರವಿ ಶಾಸ್ತ್ರಿ ಅವರಲ್ಲಿ. ಓವಲ್​ನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶಾಸ್ತ್ರಿ ಅತಿಥಿಯಾಗಿ ಹೋಗಿದ್ದರು. ಈ ವೇಳೆ ವಿರಾಟ್ ಕೊಹ್ಲಿ ಕೂಡ ಜೊತೆಗಿದ್ದರು ಎಂಬುದು ಗಮನಿಸಬೇಕಾದ ವಿಷಯ. ಆದರೆ ರವಿ ಶಾಸ್ತ್ರಿ ಅವರಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಂಡರೂ ವಿರಾಟ್ ಕೊಹ್ಲಿ ಕ್ವಾರಂಟೈನ್​ಗೆ ಒಳಗಾಗಿರಲಿಲ್ಲ. ಇನ್ನು ಕೋಚ್ ಎಲ್ಲಾ ಆಟಗಾರರೊಂದಿಗೆ ನೇರ ಸಂಪರ್ಕ ಹೊಂದಿರುತ್ತಾರೆ. ಇದಾಗ್ಯೂ ನಾಲ್ಕನೇ ಟೆಸ್ಟ್ ಪಂದ್ಯವು ಯಾವುದೇ ಆತಂಕವಿಲ್ಲದೆ ಪೂರ್ಣಗೊಂಡಿತು.

ಇನ್ನು ಐದನೇ ಪಂದ್ಯದ ವೇಳೆ ಫಿಸಿಯೋ ಸೋಂಕಿಗೆ ಒಳಗಾಗಿರುವುದು ಆಟಗಾರರಲ್ಲಿ ಆತಂಕ ಮೂಡಿಸಿದ ವಿಚಾರ. ಆದರೆ ಫಿಸಿಯೋ ಅವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಬಿಸಿಸಿಐ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಜೊತೆ ಚರ್ಚಿಸಿತ್ತು. ಈ ವೇಳೆ ವಾಕ್ ಓವರ್ ನೀಡುವಂತೆ ಇಸಿಬಿ ಬೇಡಿಕೆಯಿಟ್ಟಿತ್ತು ಎಂಬ ಸುದ್ದಿಯೊಂದು ಹರಿದಾಡಿತ್ತು. ಅಂದರೆ ಐದನೇ ಟೆಸ್ಟ್​ ಪಂದ್ಯ ಆಡುವುದು ಬೇಡ ಎಂಬುದು ಬಿಸಿಸಿಐ ಮೊದಲೇ ನಿರ್ಧರಿಸಿತ್ತು ಎನ್ನಬಹುದು. ಹೀಗಾಗಿಯೇ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಜೊತೆ ಪಂದ್ಯವನ್ನು ಮುಂದೂಡುವ ಬಗ್ಗೆ ಚರ್ಚಿಸಿತ್ತು. ಬಿಸಿಸಿಐ ಏಕಾಏಕಿ ಅಂತಹದೊಂದು ಬೇಡಿಕೆ ಮುಂದಿಡದಿದ್ದರೆ ವಾಕ್ ಓವರ್ ಪ್ರಮೇಯವೇ ಬರುತ್ತಿರಲಿಲ್ಲ ಎಂಬುದು ಇಲ್ಲಿ ಸ್ಪಷ್ಟ.

ಇನ್ನು ಯಾಕಾಗಿ ಐದನೇ ಟೆಸ್ಟ್ ರದ್ದಾಯಿತು ಎಂದು ಪರಿಶೀಲಿಸಿದರೆ ಸಿಗುವ ಸ್ಪಷ್ಟ ಉತ್ತರ ಇಂಡಿಯನ್ ಪ್ರೀಮಿಯರ್ ಲೀಗ್. ಮ್ಯಾಂಚೆಸ್ಟರ್ ಟೆಸ್ಟ್ ಸೆಪ್ಟೆಂಬರ್ 10 ರಿಂದ ಶುರುವಾಗಿ ಸೆಪ್ಟೆಂಬರ್ 14 ಕ್ಕೆ 5ನೇ ದಿನದಾಟ ಮುಗಿಯುತ್ತಿತ್ತು. ಹೀಗೆ ನಡೆದರೆ ಅತ್ತ ಐಪಿಎಲ್​ನ ಲೆಕ್ಕಾಚಾರಗಳು ತಲೆ ಕೆಳಗಾಗುತ್ತಿದ್ದವು. ಏಕೆಂದರೆ ಐಪಿಎಲ್​ ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ಅದಕ್ಕೂ ಮುನ್ನ ಆಟಗಾರರು ಯುಎಇಗೆ ತಲುಪಬೇಕಿದೆ. ಟೆಸ್ಟ್ ಮುಗಿಸಿ ಯುಎಇಗೆ ತೆರಳಿದರೆ ಐಪಿಎಲ್​ನ ಮೊದಲ ಹಾಗೂ 2ನೇ ಪಂದ್ಯವನ್ನು ಟೀಮ್ ಇಂಡಿಯಾ ಆಟಗಾರರು ಮಿಸ್ ಮಾಡಿಕೊಳ್ಳುತ್ತಿದ್ದರು. ಇದಕ್ಕೆ ಕಾರಣ ಯುಎಇ ಕೊರೋನಾ ನಿಯಮ.

ಈ ಹಿಂದೆ ಬಿಸಿಸಿಐ ಬಯೋ ಬಬಲ್ ಟು ಬಯೋ ಬಬಲ್ ಅವಕಾಶ ಸಿಗಲಿದೆ ಎಂದು ಇಂಗ್ಲೆಂಡ್ ಸರಣಿ ಹಾಗೂ ಐಪಿಎಲ್ ಸರಣಿ ವೇಳಾಪಟ್ಟಿಯನ್ನು ಸಿದ್ಧಪಡಿಸಿತ್ತು. ಆದರೆ ಯುಎಇ ಸರ್ಕಾರ ಎಲ್ಲರಿಗೂ ಒಂದೇ ನಿಯಮ ಎಂಬುದನ್ನು ಖಂಡತುಂಡವಾಗಿ ತಿಳಿಸಿದೆ. ಇದರಿಂದ ಇಂಗ್ಲೆಂಡ್ ಸರಣಿಯಲ್ಲಿದ್ದ ಆಟಗಾರರು ನೇರವಾಗಿ ಐಪಿಎಲ್​ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಬದಲಾಗಿ 6 ದಿನಗಳ ಕಾಲ ಕ್ವಾರಂಟೈನ್​ನಲ್ಲಿ​ ಇರಬೇಕಾಗುತ್ತದೆ. ಇತ್ತ ಸೆಪ್ಟೆಂಬರ್ 14 ಕ್ಕೆ ಪಂದ್ಯ ಮುಗಿದರೆ ಆಟಗಾರರು ತಂಡವನ್ನು ಕೂಡಿಕೊಳ್ಳಲು ಸಾಧ್ಯವಾಗುವುದು ಸೆಪ್ಟೆಂಬರ್ 21ಕ್ಕೆ. ಇದರಿಂದ ಮೊದಲೆರಡು ಪಂದ್ಯಗಳಲ್ಲಿ ಸ್ಟಾರ್ ಆಟಗಾರರು ಕಣಕ್ಕಿಳಿಯಲಾಗುತ್ತಿರಲಿಲ್ಲ.

ಅತ್ತ ದ್ವಿತಿಯಾರ್ಧವನ್ನು ಭರ್ಜರಿಯಾಗಿ ಶುರು ಮಾಡಿ ನಷ್ಟದಿಂದ ಲಾಭಕ್ಕೇರುವ ಇರಾದೆಯಲ್ಲಿದೆ ಬಿಸಿಸಿಐ. ಹೀಗಾಗಿ ಸೆಪ್ಟೆಂಬರ್ 19ರೊಳಗೆ ಆಟಗಾರರನ್ನು ಯುಎಇಗೆ ತಲುಪಿಸುವುದು ಅನಿವಾರ್ಯವಾಗಿತ್ತು. ಅದಕ್ಕಿದ್ದ ಏಕೈಕ ಮಾರ್ಗ ಎಂದರೆ ಐದನೇ ಟೆಸ್ಟ್ ಪಂದ್ಯ ರದ್ದು. ಇದೀಗ ಸೆಪ್ಟೆಂಬರ್ 11 ರಂದು ಎಲ್ಲಾ ಆಟಗಾರರು ಯುಎಇಗೆ ತೆರಳಿದ್ದಾರೆ. ಕ್ವಾರಂಟೈನ್ ಮುಗಿಸಿ ಸೆಪ್ಟೆಂಬರ್ 17 ಅಥವಾ 18 ರಂದು ಅಭ್ಯಾಸವನ್ನು ಆರಂಭಿಸಲಿದ್ದಾರೆ. ಅದರೊಂದಿಗೆ ಸೆಪ್ಟೆಂಬರ್ 19 ರ ಪಂದ್ಯಕ್ಕೆ ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾ, ಸ್ಯಾಮ್ ಕರನ್ ಸೇರಿದಂತೆ ಬಹುತೇಕ ಆಟಗಾರರು ಲಭ್ಯರಿರಲಿದ್ದಾರೆ.

ಇದೇ ಕಾರಣದಿಂದ ಬಿಸಿಸಿಐ ಐದನೇ ಪಂದ್ಯವನ್ನು ಕೊರೋನಾಂತಕದ ನೆಪವೊಡ್ಡಿ ರದ್ದು ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇತ್ತ ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಕೂಡ ಐದನೇ ಟೆಸ್ಟ್ ರದ್ದಾದ ಕೂಡಲೇ ಕೇಳಿದ ಮೊದಲ ಪ್ರಶ್ನೆ, ಎಲ್ಲಾ ಆಟಗಾರರು ಐಪಿಎಲ್​ಗೆ ಲಭ್ಯರಿರಲಿದ್ದಾರೆಯೇ? ಎಂಬುದನ್ನು ಇಲ್ಲಿ ಗಮನಿಸಬೇಕು. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಬಿಸಿಸಿಐ ಪ್ರಿ ಪ್ಲ್ಯಾನ್​ನಂತೆ ಟೆಸ್ಟ್ ಸೋತು ಐಪಿಎಲ್ ಗೆದ್ದಿದೆ ಎನ್ನಬಹುದು.

Click on your DTH Provider to Add TV9 Kannada