Faf du Plessis: 12 ಫೋರ್, 5 ಭರ್ಜರಿ ಸಿಕ್ಸ್: ಸ್ಪೋಟಕ ಸೆಂಚುರಿ ಸಿಡಿಸಿದ ಫಾಫ್ ಡುಪ್ಲೆಸಿಸ್
MLC 2024: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಫಾಫ್ ಡುಪ್ಲೆಸಿಸ್ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕತ್ವದ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಟಿಎಸ್ಕೆ ತಂಡದ ನಾಯಕರಾಗಿರುವ ಫಾಫ್ ಡುಪ್ಲೆಸಿಸ್ ಇದೀಗ ವಾಷಿಂಗ್ಟನ್ ಫ್ರೀಡಮ್ ವಿರುದ್ಧ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ.
ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ (MLC) ಟಿ20 ಟೂರ್ನಿಯ 5ನೇ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ (Faf du Plessis) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಮೊರಿಸ್ವಿಲ್ಲೆಯ ಚರ್ಚ್ ಸ್ಟ್ರೀಟ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಮತ್ತು ವಾಷಿಂಗ್ಟನ್ ಫ್ರೀಡಮ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ವಾಷಿಂಗ್ಟನ್ ಫ್ರೀಡಮ್ ತಂಡದ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಕ್ಕೆ ಡೆವೊನ್ ಕಾನ್ವೆ ಹಾಗೂ ಫಾಫ್ ಡುಪ್ಲೆಸಿಸ್ ಭರ್ಜರಿ ಆರಂಭ ಒದಗಿಸಿದ್ದರು.
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಈ ಜೋಡಿಯು ಸಿಕ್ಸ್-ಫೋರ್ಗಳ ಸುರಿಮಳೈಗೈದರು. ಪರಿಣಾಮ ಮೊದಲ 10 ಓವರ್ಗಳಲ್ಲಿ ತಂಡದ ಮೊತ್ತ 100ರ ಗಡಿದಾಟಿತು. ಅಲ್ಲದೆ ಮೊದಲ ವಿಕೆಟ್ಗೆ 109 ರನ್ಗಳ ಜೊತೆಯಾಟವಾಡಿದ ಬಳಿಕ ಎಡಗೈ ದಾಂಡಿಗ ಡೆವೊನ್ ಕಾನ್ವೆ (39) ವಿಕೆಟ್ ಒಪ್ಪಿಸಿದರು.
ಫಾಫ್ ಸಿಡಿಲಬ್ಬರ:
ವಾಷಿಂಗ್ಟನ್ ಫ್ರೀಡಮ್ ಬೌಲರ್ಗಳನ್ನು ಮನಸೊ ಇಚ್ಛೆ ದಂಡಿಸಿದ ಫಾಫ್ ಡುಪ್ಲೆಸಿಸ್ ಅತ್ಯಾಕರ್ಷಕ ಬ್ಯಾಟಿಂಗ್ ಪ್ರದರ್ಶೀಸಿದರು. ಅದರಲ್ಲೂ ಅರ್ಧಶತಕದ ಬಳಿಕ ಸಿಡಿಲಬ್ಬರ ಶುರು ಮಾಡಿದ ಫಾಫ್ 56 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ ಶತಕ ಪೂರೈಸಿದರು. ಈ ಸ್ಪೋಟಕ ಶತಕದ ನೆರವಿನಿಂದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ ಕಲೆಹಾಕಿತು.
ವಾಷಿಂಗ್ಟನ್ ಫ್ರೀಡಮ್ ಭರ್ಜರಿ ಆರಂಭ:
204 ರನ್ಗಳ ಕಠಿಣ ಗುರಿ ಪಡೆದ ವಾಷಿಂಗ್ಟನ್ ಫ್ರೀಡಮ್ ತಂಡಕ್ಕೆ ಆರಂಭಿಕರಾದ ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಭರ್ಜರಿ ಆರಂಭ ಒದಗಿಸಿದ್ದರು. ಹೆಡ್ ಕೇವಲ 12 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 32 ರನ್ ಸಿಡಿಸಿದರೆ, ಸ್ಮಿತ್ 13 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 1 ಫೋರ್ ಒಳಗೊಂಡಂತೆ 26 ರನ್ ಬಾರಿಸಿದರು. ಈ ಮೂಲಕ ಕೇವಲ 4 ಓವರ್ಗಳಲ್ಲಿ 62 ರನ್ ಕಲೆಹಾಕಿದ್ದರು.
ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಆದರೆ ಆ ಬಳಿಕ ಮಳೆ ಮುಂದುವರೆದಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಈ ಮೂಲಕ ಉಭಯ ತಂಡಗಳು ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ.
ವಾಷಿಂಗ್ಟನ್ ಫ್ರೀಡಮ್ ಪ್ಲೇಯಿಂಗ್ 11: ಟ್ರಾವಿಸ್ ಹೆಡ್ , ಸ್ಟೀವನ್ ಸ್ಮಿತ್ (ನಾಯಕ) , ಆಂಡ್ರೀಸ್ ಗೌಸ್ (ವಿಕೆಟ್ ಕೀಪರ್) , ಗ್ಲೆನ್ ಮ್ಯಾಕ್ಸ್‌ವೆಲ್ , ಒಬುಸ್ ಪಿನಾರ್ , ಮುಖ್ತಾರ್ ಅಹ್ಮದ್ , ಮಾರ್ಕೊ ಯಾನ್ಸೆನ್ , ಜಸ್ಟಿನ್ ಡಿಲ್ , ಅಕೇಲ್ ಹೋಸೇನ್ , ಲಾಕಿ ಫರ್ಗುಸನ್ , ಸೌರಭ್ ನೇತ್ರವಲ್ಕರ್.
ಇದನ್ನೂ ಓದಿ: Team India: ಕೊನೆಯ 10 ಓವರ್ಗಳಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
ಟೆಕ್ಸಾಸ್ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ಡೆವೊನ್ ಕಾನ್ವೆ (ವಿಕೆಟ್ ಕೀಪರ್) , ಫಾಫ್ ಡು ಪ್ಲೆಸಿಸ್ (ನಾಯಕ) , ಆರೋನ್ ಹಾರ್ಡಿ , ಜೋಶುವಾ ಟ್ರಂಪ್ , ಮಾರ್ಕಸ್ ಸ್ಟೊಯಿನಿಸ್ , ಮಿಲಿಂದ್ ಕುಮಾರ್ , ಕ್ಯಾಲ್ವಿನ್ ಸಾವೇಜ್ , ಡ್ವೇನ್ ಬ್ರಾವೋ , ಮೊಹಮ್ಮದ್ ಮೊಹ್ಸಿನ್ , ನವೀನ್-ಉಲ್-ಹಕ್ , ಜಿಯಾ-ಉಲ್-ಹಕ್.