ಐಪಿಎಲ್ 2022 (IPL 2022) ಟೂರ್ನಿಗೆ ಇಂದು ಚಾಲನೆ ದೊರಕಲಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ರವೀಂದ್ರ ಜಡೇಜಾ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿ ಆಗುತ್ತಿದೆ. ಇದರ ಮುಂದಿನ ಮುಂದಿನ ದಿನ ಅಂದರೆ ಭಾನುವಾರ ಫಾಫ್ ಡುಪ್ಲೆಸಿಸ್ ನೇತೃತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ (RCB vs PBKS) ಅನ್ನು ಎದುರಿಸಲಿದೆ. ಗೆಲುವಿನ ಮೂಲಕ ಅಭಿಯಾನ ಆರಂಭಿಸುವ ತವಕದಲ್ಲಿರುವ ಆರ್ಸಿಬಿ ಕಠಿಣ ಪ್ರ್ಯಾಕ್ಟೀಸ್ನಲ್ಲಿ ನಿರತವಾಗಿದೆ. ಈಗಾಗಲೇ ಆರ್ಸಿಬಿ ಮೊದಲ ಅಭ್ಯಾಸ ಪಂದ್ಯವನ್ನು ಕೂಡ ಆಡಿದ್ದು ಆಟಗಾರರು ಬೊಂಬಾಟ್ ಪ್ರದರ್ಶನ ತೋರಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಕೂಡ ನೆಟ್ನಲ್ಲಿ ಬೆವರು ಹರಿಸುತ್ತಿದ್ದಾರೆ. ಇದರ ಫೋಟೋವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಆರ್ಸಿಬಿಯ ಅಭ್ಯಾಸ ಪಂದ್ಯ:
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್ಸಿಬಿ ತನ್ನ ಟೀಮ್ ಅನ್ನು ಎರಡು ತಂಡವಾಗಿ ವಿಭಾಗಿಸಿ ಅಭ್ಯಾಸ ಪಂದ್ಯವನ್ನು ಆಡಿತು. ಇದರಲ್ಲಿ ಆರ್ಸಿಬಿ ಬ್ಯಾಟರ್ಗಳು ಧೂಳೆಬ್ಬಿಸಿದರು. ಫಾಫ್ ಡುಪ್ಲೆಸಿಸ್ ಇಲೆವೆನ್ ತಂಡ ಮತ್ತು ಹರ್ಷಲ್ ಪಟೇಲ್ ಇಲೆವೆನ್ ತಂಡಗಳಾಗಿ ವಿಂಗಡಿಸಿ ಅಭ್ಯಾಸ ಪಂದ್ಯವನ್ನು ಆಯೋಜಿಸಲಾಗಿತ್ತು. ಅಭ್ಯಾಸ ಪಂದ್ಯವನ್ನು ಫಾಫ್ ಡುಪ್ಲೆಸಿಸ್ ತಂಡ 2 ರನ್‌ಗಳಿಂದ ಪಂದ್ಯ ಗೆದ್ದುಕೊಂಡಿತು. ಫಾಫ್ ಇಲೆವೆನ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು. ಫಾಫ್ (40 ಎಸೆತಗಳಲ್ಲಿ 76) ಮತ್ತು ರುದರ್‌ಫೋರ್ಡ್ (59) ಅರ್ಧಶತಕ ಬಾರಿಸಿದರೆ, ಯುವ ಆಟಗಾರ ಅನುಜ್ ರಾವತ್ (46) ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಹರ್ಷಲ್ ಪಟೇಲ್ ಮೂರು ವಿಕೆಟ್ ಪಡೆದರು. ನಂತರ ಹರ್ಷಲ್ ಪಟೇಲ್ ತಂಡ ನಿಗದಿತ 20 ಓವರ್‌ಗಳಲ್ಲಿ 213 ರನ್ ಗಳಿಸಿ ಎರಡು ರನ್‌ಗಳಿಂದ ಸೋಲು ಕಂಡಿತು. ತಂಡದಲ್ಲಿ ಯುವ ಆಟಗಾರ ಸುಯೇಶ್ (46 ಎಸೆತಗಳಲ್ಲಿ 87) ಅರ್ಧಶತಕ ಗಳಿಸಿದರು. ದಿನೇಶ್ ಕಾರ್ತಿಕ್ (21 ಎಸೆತಗಳಲ್ಲಿ 49) ಮತ್ತು ಡೇವಿಡ್ ವಿಲ್ಲೆ (17 ಎಸೆತಗಳಲ್ಲಿ 25) ಉತ್ತಮ ಆಟ ಪ್ರದರ್ಶಿಸಿದರು. ಆಕಾಶ್ ದೀಪ್ ನಾಲ್ಕು ವಿಕೆಟ್, ಹಸರಂಗ ಮತ್ತು ಶಹಾಬಾಜ್ ತಲಾ ಒಂದು ವಿಕೆಟ್ ಕಿತ್ತರು.
ನಾಯಕನ ಮಾತು:
ಅಭ್ಯಾಸ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಆರ್ಸಿಬಿ ಫಾಫ್ ಡುಪ್ಲೆಸಿಸ್ ಆಟಗಾರರ ಪ್ರದರ್ಶನವನ್ನು ಹಾಡಿ ಹೊಗಳಿದ್ದಾರೆ. ಪ್ರಮುಖವಾಗಿ ಇಬ್ಬರು ಆಟಗಾರರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. “ದಿನೇಶ್ ಕಾರ್ತಿಕ್ ನಿಜಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಆದರೆ ನಾನು ಆಕಾಶ್ ದೀಪ್ ಅವರ ಬೌಲಿಂಗ್‌ಗೆ ತುಂಬಾ ಆಕರ್ಷಿತನಾಗಿದ್ದೇನೆ. ಹೊಸ ಚೆಂಡಿನಲ್ಲಿ ಅವರು ಅದ್ಭುತವಾಗಿ ಬೌಲ್ ಮಾಡಿದ್ದರು. ಗುಡ್ ಹಾರ್ಡ್ ಲೆನ್ತ್‌ಗಳಲ್ಲಿ ಅವರು ಚೆಂಡನ್ನು ಹಾಕಿದ್ದರು. ಆಕಾಶ್ ದೀಪ್ ಅವರ ವೇಗ ನನಗೆ ಅಚ್ಚರಿ ಉಂಟು ಮಾಡಿತು. ಯುವ ವೇಗಿ ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸುತ್ತಿರುವುದನ್ನು ನೋಡಲು ತುಂಬಾ ಖುಷಿಯಾಗುತ್ತಿದೆ,” ಎಂದು ಹೇಳಿದ್ದಾರೆ.
ಕೊಹ್ಲಿ ನೆಟ್ನಲ್ಲಿ ಅಭ್ಯಾಸ:
ವಿರಾಟ್ ಕೊಹ್ಲಿ ಆರ್ಸಿಬಿಯ ಎರಡು ಟೀಮ್ನ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಬದಲಾಗಿ ಇವರು ನೆಟ್ನಲ್ಲಿ ಬೆವರು ಹರಿಸತ್ತಿದ್ದರು. ಹೌದು, ಆರ್ಸಿಬಿ ತಂಡದ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಫೋಟೋವನ್ನು ಹಂಚಿಕೊಂಡು, “ಮೊದಲ ಪಂದ್ಯಕ್ಕೆ ಕಾತುರನಾಗಿದ್ದೇನೆ. ಐಪಿಎಲ್ ಬಗ್ಗೆ ಉತ್ಸುಕನಾಗಿದ್ದೇನೆ. ಟೂರ್ನಮೆಂಟ್ ಆರಂಭವಾಗುವುದಕ್ಕೂ ಮುನ್ನ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟಂಗೆ ಆಗುತ್ತಿದೆ,” ಎಂದು ಬರೆದುಕೊಂಡಿದ್ದಾರೆ.
ಆರ್ಸಿಬಿ ತಂಡದ ಸಂಪೂರ್ಣ ಆಟಗಾರರು: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡುಪ್ಲೆಸಿಸ್ (ನಾಯಕ), ಹರ್ಷಲ್ ಪಟೇಲ್, ವನಿಂದು ಹಸರಂಗಾ, ದಿನೇಶ್ ಕಾರ್ತಿಕ್, ಜೋಶ್ ಹೇಜಲ್‌ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫಾನ್ ರುದರ್‌ಫೋರ್ಡ್, ಜೇಸನ್ ಬೆಹ್ರಾಯ್, ಜೇಸನ್ ಬೆಹ್ರಾಯ್ ಮಿಲಿಂದ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್.
IPL 2022: ಅಭ್ಯಾಸದ ವೇಳೆ ಎದುರೆದುರಾದ ಧೋನಿ-ಕೊಹ್ಲಿ: ಈ ಸಂದರ್ಭ ಏನಾಯಿತು ನೋಡಿ
CSK vs KKR, IPL 2022: ವಾಂಖೆಡೆ ಪಿಚ್ ಯಾರಿಗೆ ಹೆಚ್ಚು ಸಹಕಾರಿ?: ಟಾಸ್ ಗೆದ್ದ ತಂಡ ಏನನ್ನು ಆಯ್ಕೆ ಮಾಡಿಕೊಳ್ಳಬೇಕು?