ಗುರುವಾರ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) ತಂಡ 60 ರನ್ಗಳ ಅಮೋಘ ಜಯ ಕಂಡಿತು. ವಿರಾಟ್ ಕೊಹ್ಲಿ ಅವರ 92 ರನ್ ಹಾಗೂ ಬೌಲರ್ಗಳ ಉತ್ತಮ ಪ್ರದರ್ಶನದಿಂದ ಆರ್ಸಿಬಿ ಸತತ ನಾಲ್ಕನೇ ಗೆಲುವು ಸಾಧಿಸಿತು. ಈ ಜಯದ ಮೂಲಕ ಆರ್ಸಿಬಿ ಇನ್ನೂ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. ಪಂಜಾಬ್ ವಿರುದ್ಧದ ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್ಸಿಬಿ ಗೆಲುವಿನ ಲಯಕ್ಕೆ ಮರಳಲು ಏನು ಬದಲಾವಣೆ ಮಾಡಿಕೊಂಡೆವು ಎಂಬ ಗುಟ್ಟನ್ನು ರಟ್ಟು ಮಾಡಿದ್ದಾರೆ.
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಡುಪ್ಲೆಸಿಸ್, “ಇದೊಂದು ನಿಜವಾಗಿಯೂ ಉತ್ತಮ ಪಂದ್ಯವಾಗಿತ್ತು. ಟಾಸ್ ಸೋತರೂ ನಾವು 240 ರನ್ ಗಳಿಸಿದೆವು. ಇಂದು ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಆರಂಭದಲ್ಲಿ ನಾವು ಮತ್ತೆ ಮತ್ತೆ ಒಂದೇ ತಪ್ಪುಗಳನ್ನು ಮಾಡುತ್ತಿದ್ದೆವು. ಪವರ್‌ಪ್ಲೇನಲ್ಲಿ ನಮಗೆ ಎದುರಾಳಿಯ ವಿಕೆಟ್ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಬಳಿಕ ಪವರ್‌ಪ್ಲೇನಲ್ಲಿ ಹೇಗೆ ವಿಕೆಟ್‌ಗಳನ್ನು ಪಡೆಯಬಹುದು ಎಂದು ನಾವು ಯೋಚಿಸಿದೆವು. ಈಗ ನಾವು ನಮ್ಮ ವಿಧಾನವನ್ನು ಬದಲಾಯಿಸಿದ್ದೇವೆ ಮತ್ತು ಅದು ಚೆನ್ನಾಗಿ ಕೆಲಸ ಮಾಡುತ್ತಿದೆ,” ಎಂದು ಫಾಫ್ ಹೇಳಿದ್ದಾರೆ.
ಎರಡೆರಡು ಜೀವದಾನ; 92 ರನ್ಗಳ ದಾಖಲೆಯ ಇನ್ನಿಂಗ್ಸ್ ಆಡಿದ ಕಿಂಗ್ ಕೊಹ್ಲಿ..!
ಪವರ್ ಪ್ಲೇನಲ್ಲಿ ಆರ್ಸಿಬಿ ಸ್ಪಿನ್ ಅಸ್ತ್ರವನ್ನು ಬಳಸುತ್ತಿರಲಿಲ್ಲ. ಆದರೀಗ ಕಳೆದ ನಾಲ್ಕು ಪಂದ್ಯಗಳಿಂದ ಸ್ವಪ್ನಿಲ್ ಸಿಂಗ್ ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಜೊತೆಗೆ ವಿಕೆಟ್ ಕೂಡ ಪಡೆಯುತ್ತಿದ್ದಾರೆ.
ಮಾತು ಮುಂದವರೆಸಿದ ಡುಪ್ಲೆಸಿಸ್, “ಸ್ಪರ್ಧೆಯಲ್ಲಿ ನಾವು ಉಳಿದುಕೊಳ್ಳಲು, ಉತ್ತಮ ಪ್ರದರ್ಶನ ನೀಡಲು ಫಾರ್ಮ್ ಬಹಳ ಮುಖ್ಯ. ನಮ್ಮಲ್ಲಿ ಕೆಲ ಬ್ಯಾಟರ್ಗಳು ರನ್‌ಗಳಿಸಲು ಕಷ್ಟ ಪಡುತ್ತಿದ್ದರು, ವಿಕೆಟ್‌ಗಾಗಿ ಹುಡುಕುತ್ತಿದ್ದರು. ಆದರೆ ಈಗ ಎಲ್ಲರೂ ಫಾರ್ಮ್ಗೆ ಬಂದಿದ್ದಾರೆ. ಬ್ಯಾಟ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಆಟವಾಡುತ್ತಿದ್ದಾರೆ. ನಾವು ನಮ್ಮ ಶೈಲಿಯೊಂದಿಗೆ ಆಡುವುದನ್ನು ಮುಂದುವರಿಸಬೇಕು ಎಂದು ನಾನು ಹೇಳುತ್ತಲೇ ಇರುತ್ತೇನೆ. ನಾವು ನಮ್ಮ ಮೇಲೆ ಕೇಂದ್ರೀಕರಿಸುವುದು ಮುಖ್ಯವಾಗಿದೆ,” ಎಂಬುದು ಫಾಫ್ ಮಾತು.
ಶೂನ್ಯಕ್ಕೆ ಕ್ಯಾಚ್ ಡ್ರಾಪ್; 6 ಸಿಕ್ಸರ್ ಸಹಿತ 55 ರನ್ ಚಚ್ಚಿದ ರಜತ್ ಪಾಟಿದರ್..! ವಿಡಿಯೋ
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಆರ್ಸಿಬಿ ಆರಂಭದಲ್ಲಿ ನಾಯಕ ಡುಪ್ಲೆಸಿಸ್ (9) ಮತ್ತು ವಿಲ್ ಜ್ಯಾಕ್ಸ್ (12) ವಿಕೆಟ್ ಕಳೆದುಕೊಂಡಿತಾದರೂ ನಂತರ ಮೂರನೇ ವಿಕೆಟ್ಗೆ ವಿರಾಟ್ ಕೊಹ್ಲಿ (92) ಹಾಗೂ ರಜಿತ್ ಪಟಿದಾರ್ (55) ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾದರು. ಕ್ಯಾಮ್ರೋನ್ ಗ್ರೀನ್ ಕೂಡ 46 ರನ್ ಚಚ್ಚಿದರು. ದಿನೇಶ್ ಕಾರ್ತಿಕ್ 7 ಎಸೆತಗಳಲ್ಲಿ 18 ರನ್ ಸಿಡಿಸಿದರು. ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 241 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಪಂಜಾಬ್ 17 ಓವರ್ಗಳಲ್ಲಿ 181 ರನ್ಗಳಿಗೆ ಆಲೌಟ್ ಆಯಿತು. ರಿಲೀ ರುಸ್ಸೋ 27 ಎಸೆತಗಳಲ್ಲಿ 61 ರನ್ ಗಳಿಸಿದರು. ಆರ್ಸಿಬಿ ಪರ ಸಿರಾಜ್ 3 ವಿಕೆಟ್ ಕಿತ್ತರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ