IPL 2024: ಶೂನ್ಯಕ್ಕೆ ಕ್ಯಾಚ್ ಡ್ರಾಪ್; 6 ಸಿಕ್ಸರ್ ಸಹಿತ 55 ರನ್ ಚಚ್ಚಿದ ರಜತ್ ಪಾಟಿದರ್..! ವಿಡಿಯೋ

IPL 2024: ತಂಡದ ಮೊತ್ತ 43 ರನ್​ಗಳಿದ್ದಾಗ ಜೊತೆಯಾದ ಈ ಜೋಡಿ 3ನೇ ವಿಕೆಟ್​ಗೆ 76 ರನ್​​ಗಳ ಜೊತೆಯಾಟ ಹಂಚಿಕೊಂಡಿತು. ಈ ವೇಳೆ ಸ್ಫೋಟಕ ಬ್ಯಾಟಿಂಗ್ ಮಾಡಿದ ರಜತ್ ಕೇವಲ 23 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 55 ರನ್ ದಾಖಲಿಸಿದರು.

IPL 2024: ಶೂನ್ಯಕ್ಕೆ ಕ್ಯಾಚ್ ಡ್ರಾಪ್; 6 ಸಿಕ್ಸರ್ ಸಹಿತ 55 ರನ್ ಚಚ್ಚಿದ ರಜತ್ ಪಾಟಿದರ್..! ವಿಡಿಯೋ
ರಜತ್ ಪಾಟಿದರ್
Follow us
ಪೃಥ್ವಿಶಂಕರ
|

Updated on:May 09, 2024 | 9:33 PM

ಧರ್ಮಶಾಲಾದಲ್ಲಿ ನಡೆಯುತ್ತಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Punjab Kings Vs Royal Challengers Bengaluru) ತಂಡ ಬೃಹತ್ ಮೊತ್ತ ಕಲೆಹಾಕುವತ್ತ ದಾಪುಗಾಲಿಟ್ಟಿದೆ. ಪಂಜಾಬ್ ವಿರುದ್ಧ ಆರಂಭಿಕ ಆಘಾತಕ್ಕೊಳಗಾದ ಆರ್​ಸಿಬಿ 19 ರನ್​ಗಳಿಗೆ ನಾಯಕ ಫಾಫ್ ಡುಪ್ಲೆಸಿಸ್ (Faf du Plessis) ಅವರ ವಿಕೆಟ್ ಕಳೆದುಕೊಂಡಿತು. ನಂತರ ಬಂದ ವಿಲ್ ಜ್ಯಾಕ್ಸ್ ಕೂಡ 12 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಹೀಗಾಗಿ ಆರ್​ಸಿಬಿ ಆರಂಭದಲ್ಲೇ ಹಿನ್ನಡೆ ಅನುಭವಿಸಿತ್ತು. ಆದರೆ ಇಲ್ಲಿಂದ ತಂಡದ ಇನ್ನಿಂಗ್ಸ್ ಜವಬ್ದಾರಿ ಹೊತ್ತ ವಿರಾಟ್ ಕೊಹ್ಲಿ (Virat Kohli) ಹಾಗೂ ರಜತ್ ಪಾಟಿದಾರ್ (Rajat Patidar) ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು.

ಜೀವದಾನದ ಲಾಭ ಪಡೆದ ಪಾಟಿದರ್

ತಂಡದ ಮೊತ್ತ 43 ರನ್​ಗಳಿದ್ದಾಗ ಜೊತೆಯಾದ ಈ ಜೋಡಿ 3ನೇ ವಿಕೆಟ್​ಗೆ 76 ರನ್​​ಗಳ ಜೊತೆಯಾಟ ಹಂಚಿಕೊಂಡಿತು. ಈ ವೇಳೆ ಸ್ಫೋಟಕ ಬ್ಯಾಟಿಂಗ್ ಮಾಡಿದ ರಜತ್ ಕೇವಲ 23 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 55 ರನ್ ದಾಖಲಿಸಿದರು. ಅಚ್ಚರಿಯ ಸಂಗತಿಯೆಂದರೆ ರಜತ್ ಪಾಟಿದರ್ ಈ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಬೇಕಿತ್ತು. ಕನ್ನಡಿಗ ಕಾವೇರಪ್ಪ ಬೌಲ್ ಮಾಡಿದ 5ನೇ ಓವರ್​ನಲ್ಲಿ ಪಾಟಿದರ್ ಡೀಪ್ ಫೈನ್​ನಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಚೆಂಡು ಅಲ್ಲೆ ನಿಂತಿದ್ದ ಹರ್ಷಲ್ ಪಟೇಲ್ ಕೈಸೇರುವಂತಿತ್ತು. ಆದರೆ ಇಲ್ಲಿ ಎಡವಟ್ಟು ಮಾಡಿಕೊಂಡ ಪಟೇಲ್ ಸುಲಭದ ಕ್ಯಾಚನ್ನು ಕೈಚೆಲ್ಲಿದರು. ಜೀವದಾನದ ಲಾಭ ಪಡೆದ ಪಾಟಿದರ್ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ ಜೊತೆಗೆ ಪಾಟಿದಾರ್ ದೊಡ್ಡ ದಾಖಲೆಯನ್ನೂ ಮುರಿದರು.

ದಾಖಲೆ ಬರೆದ ಪಾಟಿದಾರ್

ಈ ಇನ್ನಿಂಗ್ಸ್ ಆಧಾರದ ಮೇಲೆ ರಜತ್ ಪಾಟಿದಾರ್ 21 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಮೂರು ಅರ್ಧಶತಕಗಳನ್ನು ಬಾರಿಸಿದ ಆರ್​ಸಿಬಿಯ ಏಕೈಕ ಆಟಗಾರ ಎನಿಸಿಕೊಂಡರು. ವಿಶೇಷವೆಂದರೆ ಈ ಎಲ್ಲಾ ಮೂರು ಅರ್ಧಶತಕಗಳು ಈ ಸೀಸನ್​ನಲ್ಲೇ ಬಂದಿವೆ. ಇದಕ್ಕೂ ಮುನ್ನ ಹೈದರಾಬಾದ್ ವಿರುದ್ಧ ಪಾಟಿದಾರ್ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇದರ ನಂತರ ಕೆಕೆಆರ್ ವಿರುದ್ಧ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಇದೀಗ ಪಂಜಾಬ್ ವಿರುದ್ಧವೂ ರಜತ್ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ.

ತವರಿನಿಂದ ಹೊರಗೆ ವಿಶೇಷ ಸಾಧನೆ

ಈ ಸೀಸನ್​ನಲ್ಲಿ ರಜತ್ ಪಾಟಿದಾರ್ ಇದುವರೆಗೆ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಅವರ ಬ್ಯಾಟ್‌ನಿಂದ ಸಿಡಿದ ನಾಲ್ಕೂ ಅರ್ಧಶತಕಗಳು ಎದುರಾಳಿಯ ತವರು ನೆಲದಲ್ಲಿ ಬಂದಿವೆ. ಅಂದರೆ ತಮ್ಮ ತವರು ನೆಲವಾದ ಚಿನ್ನಸ್ವಾಮಿಯಲ್ಲಿ ರಜತ್ ಪಾಟಿದಾರ್ ಒಂದೇ ಒಂದು ಅರ್ಧಶತಕ ಬಾರಿಸಲು ಸಾಧ್ಯವಾಗಿಲ್ಲ. ಪಾಟಿದರ್ ಇದುವರೆಗೆ ವಾಂಖೆಡೆ, ಕೋಲ್ಕತ್ತಾ, ಹೈದರಾಬಾದ್ ಮತ್ತು ಧರ್ಮಶಾಲಾದಲ್ಲಿ ಅರ್ಧಶತಕಗಳನ್ನು ಸಿಡಿಸಿದ್ದಾರೆ. ಐಪಿಎಲ್‌ಗೂ ಮುನ್ನ ಇಂಗ್ಲೆಂಡ್‌ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ರಜತ್‌ ಇದೀಗ ಅದ್ಭುತ ಪುನರಾಗಮನ ಮಾಡಿರುವುದು ಶ್ಲಾಘನೀಯ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:31 pm, Thu, 9 May 24