ಬರೋಬ್ಬರಿ 182 ರನ್ಗಳು…ಸನ್ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಸಿಎಸ್‌ಕೆ ಆರಂಭಿಕರು ಮಾತ್ರ ಕಲೆಹಾಕಿದ ಸ್ಕೋರ್ ಇದು. ಅಂದರೆ ಐಪಿಎಲ್ ಇತಿಹಾಸದಲ್ಲೇ ಸಿಎಸ್‌ಕೆ ಪರ ಮೊದಲ ವಿಕೆಟ್ಗೆ ಅತ್ಯಧಿಕ ರನ್ಗಳಿಸಿದ ಜೋಡಿ ಎಂಬ ದಾಖಲೆ ರುತುರಾಜ್ ಗಾಯಕ್ವಾಡ್ ಹಾಗೂ ಡೆವೊನ್ ಕಾನ್ವೇ ಪಾಲಾಗಿದೆ. ಈ ಹಿಂದೆ 2020 ರಲ್ಲಿ ಫಾಫ್ ಡುಪ್ಲೆಸಿಸ್ ಹಾಗೂ ಶೇನ್ ವಾಟ್ಸನ್ 181 ರನ್‌ಗಳ ಜೊತೆಯಾಟವಾಡುವ ಮೂಲಕ ದಾಖಲೆ ಬರೆದಿದ್ದರು. ಇದೀಗ ಒಂದು ರನ್ ಹೆಚ್ಚು ಗಳಿಸುವ ಮೂಲಕ ಕಾನ್ವೇ-ರುತುರಾಜ್ ಜೋಡಿ ಹೊಸ ಇತಿಹಾಸ ಬರೆದಿದ್ದಾರೆ. ಅದರಲ್ಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ರುತುರಾಜ್ 6 ಸಿಕ್ಸ್ ಹಾಗೂ 6 ಫೋರ್ನೊಂದಿಗೆ 57 ಎಸೆತಗಳಲ್ಲಿ 99 ರನ್ ಬಾರಿಸಿ ಅಬ್ಬರಿಸಿದ್ದರು. ಮತ್ತೊಂದೆಡೆ ಕಾನ್ವೆ 55 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 8 ಫೋರ್ನೊಂದಿಗೆ 85 ರನ್ ಬಾರಿಸಿದ್ದರು.
ಈ ದಾಖಲೆಯ ಇನಿಂಗ್ಸ್ ಬಗ್ಗೆ ಮಾತನಾಡಿದ ರುತುರಾಜ್ ಗಾಯಕ್ವಾಡ್, ನಮ್ಮ ಈ ಭರ್ಜರಿ ಇನಿಂಗ್ಸ್ ನೋಡಿ ಫಾಫ್ ಡು ಪ್ಲೆಸಿಸ್ ಸ್ವಲ್ಪ ಅಸೂಯೆ ಪಟ್ಟಿರಬಹುದು ಎಂದಿದ್ದಾರೆ. ಏಕೆಂದರೆ ಕಳೆದ ಸೀಸನ್ನಲ್ಲಿ ನಾವಿಬ್ಬರೂ ಸಿಎಸ್‌ಕೆ ಪರ ಇನಿಂಗ್ಸ್ ಆಡಿದ್ದೆವು. ಇದೀಗ ಅವರ ಇನಿಂಗ್ಸ್ ದಾಖಲೆಯನ್ನು ಕಾನ್ವೇ ಜೊತೆ ಮುರಿದಿರುವುದರಿಂದ ಅವರಿಗೂ ಹೊಟ್ಟೆಕಿಚ್ಚು ಆಗಿರುತ್ತೆ ಎಂದು ರುತುರಾಜ್ ತಮಾಷೆಯಾಗಿ ಹೇಳಿದ್ದಾರೆ.
ಕಳೆದ ಸೀಸನ್ನಲ್ಲಿ ಸಿಎಸ್‌ಕೆ ಪರ ಆಡಿದ್ದ ಫಾಫ್ ಡುಪ್ಲೆಸಿಸ್ ರುತುರಾಜ್ ಗಾಯಕ್ವಾಡ್ ಜೊತೆ ಇನಿಂಗ್ಸ್ ಆರಂಭಿಸುತ್ತಿದ್ದರು. ಅಲ್ಲದೆ ಈ ಜೋಡಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. ಅಲ್ಲದೆ ಕಳೆದ ಸೀಸನ್ನಲ್ಲಿ ಗಾಯಕ್ವಾಡ್ 635 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದರೆ, 2ನೇ ಅತೀ ಹೆಚ್ಚು ರನ್ಗಳಿಸಿದ್ದು ಫಾಫ್ ಡುಪ್ಲೆಸಿಸ್ (633) ಆಗಿತ್ತು ಎಂಬುದು ವಿಶೇಷ. ಆದರೆ ಈ ಬಾರಿ ಫಾಫ್ ಡುಪ್ಲೆಸಿಸ್ ಆರ್ಸಿಬಿ ತಂಡದ ನಾಯಕರಾಗಿದ್ದು, ಹೀಗಾಗಿ ಕಾನ್ವೇ ಜೊತೆ ಹೊಸ ದಾಖಲೆ ಬರೆದ ಬೆನ್ನಲ್ಲೇ ರುತುರಾಜ್ ಗಾಯಕ್ವಾಡ್ ಡುಪ್ಲೆಸಿಸ್ ಹೆಸರು ಪ್ರಸ್ತಾಪಿಸಿ ಕಿಚಾಯಿಸಿದ್ದಾರೆ.
ಇನ್ನು ಎಸ್ಆರ್ಹೆಚ್ ವಿರುದ್ದದ ಈ ಪಂದ್ಯದಲ್ಲಿ ಮೊದಲ ವಿಕೆಟ್ಗೆ 182 ರನ್‌ಗಳ ಜೊತೆಯಾಟವಾಡುವ ಮೂಲಕ ಡೆವೊನ್ ಕಾನ್ವೇ ಹಾಗೂ ರುತುರಾಜ್ ಗಾಯಕ್ವಾಡ್ ತಂಡದ ಆರಂಭಿಕ ಸಮಸ್ಯೆಯನ್ನು ದೂರ ಮಾಡಿದರು. ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ಸಿಎಸ್‌ಕೆ ತಂಡವು ನಿಗದಿತ 20 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 202 ರನ್ ಕಲೆಹಾಕಿತು.
203 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಎಸ್ಆರ್ಹೆಚ್ ತಂಡವು ನಿಗದಿತ 20 ಓವರ್‌ನಲ್ಲಿ 6 ವಿಕೆಟ್ ಕಳೆದುಕೊಂಡು 189 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಸಿಎಸ್‌ಕೆ ತಂಡವು 13 ರನ್‌ಗಳ ಗೆಲುವು ದಾಖಲಿಸಿತು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.