MS Dhoni: ನಿವೃತ್ತಿ ಯಾವಾಗ? ಮನಬಿಚ್ಚಿ ಮಾತನಾಡಿದ ಧೋನಿ
IPL 2022: ಸಿಎಸ್ಕೆ ಫ್ರಾಂಚೈಸಿಯು ಧೋನಿಯನ್ನು ಮತ್ತೆ ನಾಯಕನನ್ನಾಗಿ ಮಾಡಿದೆ. ಆದರೆ ಮುಂದಿನ ವರ್ಷವೂ ಮಹಿ ಅದೇ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
IPL 2022: ಸಿಎಸ್ಕೆ (CSK) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ (Ms Dhoni) 40 ವರ್ಷ ತುಂಬಿದೆ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಇನ್ನೊಂದೆಡೆ ಕಳೆದ ಎರಡು ವರ್ಷಗಳಿಂದ ಐಪಿಎಲ್‌ನಿಂದ ಧೋನಿ ನಿವೃತ್ತಿ ಯಾವಾಗ ಎಂಬ ಒಂದೇ ಪ್ರಶ್ನೆ ಮತ್ತೆ ಮತ್ತೆ ಕೇಳಿ ಬರುತ್ತಿದೆ. ಈ ಬಗ್ಗೆ ಖುದ್ದು ಮಹೇಂದ್ರ ಸಿಂಗ್ ಧೋನಿಯೇ ಮಾತನಾಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಟಾಸ್ ವೇಳೆ ಕಾಮೆಂಟೇಟರ್ ಡ್ಯಾನಿ ಮಾರಿಸನ್ ನೀವು ಮುಂದಿನ ವರ್ಷ ಕೂಡ ಆಡಲಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ನಗುತ್ತಾ ಉತ್ತರಿಸಿದ ಧೋನಿ,
ನಾನು ಕಳೆದ ಬಾರಿಯೂ ಯೆಲ್ಲೊ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಅದು ಅದು ಯೆಲ್ಲೊ ಜೆರ್ಸಿಯಾಗಿರಲಿ ಅಥವಾ ಇನ್ನಾವುದೇ ಆಗಿರಲಿ, ಅದಕ್ಕಾಗಿ ನೀವು ಕಾಯಬೇಕಾಗಿದೆ ಎಂದಿದ್ದಾರೆ. ಈ ಮೂಲಕ ಸದ್ಯಕ್ಕಂತು ಐಪಿಎಲ್‌ನಿಂದ ನಿವೃತ್ತಿ ಆಗುತ್ತಿಲ್ಲ ಎಂದು ಧೋನಿ ಪರೋಕ್ಷವಾಗಿ ತಿಳಿಸಿದ್ದಾರೆ.
ಈ ಹಿಂದೆ ಸಿಎಸ್ಕೆ ತಂಡವು ನಾಯಕನನ್ನು ಬದಲಿಸಿದಾಗ ಇದು ಮಹೇಂದ್ರ ಸಿಂಗ್ ಧೋನಿ ಕೊನೆಯ ಸೀಸನ್ ಆಗಿರಬಹುದು ಎಂಬ ಊಹಾಪೋಹವಿತ್ತು. ಆದರೆ ಐಪಿಎಲ್ 2022 ರಲ್ಲಿ ಜಡೇಜಾ ನಾಯಕತ್ವದಲ್ಲಿ, ಚೆನ್ನೈ ಹಾಲಿ ಚಾಂಪಿಯನ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ತಂಡ ಮೊದಲ 8 ಪಂದ್ಯಗಳಲ್ಲಿ 6 ರಲ್ಲಿ ಸೋತಿದೆ. ಹೀಗಾಗಿ ಧೋನಿಗೆ ಮತ್ತೊಮ್ಮೆ ತಂಡದ ನಾಯಕತ್ವ ನೀಡಲಾಗಿದೆ. ಇದರ ಬೆನ್ನಲ್ಲೇ ಧೋನಿ ನೀಡಿರುವ ಹೇಳಿಕೆಯು ಅಭಿಮಾನಿಗಳಿಗೆ ಖುಷಿ ನೀಡಿದೆ. ಅಂದರೆ ಮಹೇಂದ್ರ ಸಿಂಗ್ ಧೋನಿ ಮುಂದಿನ ಸೀಸನ್ನಲ್ಲೂ ಐಪಿಎಲ್ ಆಡುವುದು ಬಹುತೇಕ ಖಚಿತ ಎನ್ನಲಾಗಿದೆ.
CSK ನಾಯಕನಾಗಿ ಧೋನಿ ಮುಂದುವರೆಯುತ್ತಾರಾ? ಇದೀಗ ಸಿಎಸ್ಕೆ ಫ್ರಾಂಚೈಸಿಯು ಧೋನಿಯನ್ನು ಮತ್ತೆ ನಾಯಕನನ್ನಾಗಿ ಮಾಡಿದೆ. ಆದರೆ ಮುಂದಿನ ವರ್ಷವೂ ಮಹಿ ಅದೇ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಮುಂದೆಯೂ ನಾನು ಯೆಲ್ಲೊ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತೇನೆ ಎಂಬ ಹೇಳಿಕೆಯು ಇದೀಗ ಮುಂದಿನ ಸೀಸನ್ನಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಧೋನಿ ನಂತರ ಯಾರು? ಒಂದು ವೇಳೆ ಸಿಎಸ್ಕೆ ಧೋನಿಯ ಬದಲಿಗೆ ಮುಂದಿನ ಸೀಸನ್ನಲ್ಲಿ ಯಾರನ್ನು ನಾಯಕರಾಗಿ ಮಾಡಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಏಕೆಂದರೆ ಒಂದಲ್ಲ ಒಂದು ದಿನ ಧೋನಿ ನಿವೃತ್ತರಾಗಲೇಬೇಕು. ಹೀಗಾಗಿಯೇ ರವೀಂದ್ರ ಜಡೇಜಾಗೆ ನಾಯಕತ್ವ ನೀಡಲಾಗಿತ್ತು. ಆದರೆ ಜಡೇಜಾ ಹೊಸ ಜವಾಬ್ದಾರಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಸಿಎಸ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಬಹುದು. ಸಿಎಸ್ಕೆ ತಂಡದಲ್ಲಿ ಡ್ವೇನ್ ಬ್ರಾವೋ, ಅಂಬಟಿ ರಾಯುಡು, ರಾಬಿನ್ ಉತ್ತಪ್ಪ ಅವರಂತಹ ನಾಯಕತ್ವದ ಗುಣಗಳಿರುವ ಆಟಗಾರರಿದ್ದಾರೆ. ಆದರೆ ಬ್ರಾವೋಗೆ 38 ವರ್ಷ, ಅಂಬಟಿ ಮತ್ತು ಉತ್ತಪ್ಪ ಅವರಿಗೂ 36 ವರ್ಷ ಆಗಿದೆ. ಹೀಗಿರುವಾಗ ಸಿಎಸ್ ಕೆ ಮ್ಯಾನೇಜ್ಮೆಂಟ್ ಯಾರಿಗೆ ನಾಯಕತ್ವ ನೀಡಲಿದೆ ಎಂಬುದೇ ಪ್ರಶ್ನೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.