
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಜುಲೈ 23 ರಿಂದ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ (Old Trafford) ನಡೆಯಲಿದೆ. ಲಾರ್ಡ್ಸ್ ಟೆಸ್ಟ್‌ನಲ್ಲಿ 22 ರನ್‌ಗಳಿಂದ ಸೋತಿರುವ ಭಾರತ ತಂಡ ಈ ಸರಣಿಯಲ್ಲಿ ಜೀವಂತವಾಗಿ ಉಳಿಯಬೇಕೆಂದರೆ 4ನೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಹೀಗಾಗಿ ತಂಡದ ಆಟಗಾರರು ನೆಟ್ಸ್ನಲ್ಲಿ ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ಈ ನಡುವೆ ಮ್ಯಾಂಚೆಸ್ಟರ್ನಿಂದ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಟೀಂ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಫಾರೂಕ್ ಇಂಜಿನಿಯರ್ (Farokh Engineer) ಅವರ ಹೆಸರನ್ನು ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದ ಒಂದು ಸ್ಟ್ಯಾಂಡ್‌ಗೆ ಇಡಲು ತೀರ್ಮಾನಿಸಲಾಗಿದೆ
ಭಾರತದ ಮಾಜಿ ವಿಕೆಟ್ ಕೀಪರ್ ಫಾರೂಕ್ ಇಂಜಿನಿಯರ್ ಟೀಂ ಇಂಡಿಯಾ ಪರ ಆಡಿರುವುದಲ್ಲದೆ, ಇಂಗ್ಲೆಂಡ್ನ ಕೌಂಟಿ ತಂಡ ಲಂಕಾಷೈರ್ ಪರ ಬಹಳಷ್ಟು ಕ್ರಿಕೆಟ್ ಆಡಿದ್ದಾರೆ. ಹೀಗಾಗಿ ಅವರ ನೆನಪಿಗಾಗಿ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದ ಸ್ಟ್ಯಾಂಡ್‌ಗೆ ಅವರ ಹೆಸರಿಡಲು ನಿರ್ಧರಿಸಲಾಗಿದೆ. ಫಾರೂಕ್ ಅವರ ಜೊತೆಗೆ, ವೆಸ್ಟ್ ಇಂಡೀಸ್ ದಂತಕಥೆ ಕ್ಲೈವ್ ಲಾಯ್ಡ್ ಕೂಡ ಈ ಗೌರವಕ್ಕೆ ಭಾಜನರಾಗಲಿದ್ದಾರೆ ಜುಲೈ 23 ರಿಂದ ಪ್ರಾರಂಭವಾಗುವ ಟೆಸ್ಟ್ ಪಂದ್ಯದ ಮೊದಲ ದಿನದಂದು ಸ್ಟ್ಯಾಂಡ್‌ಗೆ ಈ ಇಬ್ಬರು ದಿಗ್ಗಜರ ಹೆಸರುಗಳನ್ನಿಡುವ ಸಮಾರಂಭವನ್ನು ನಡೆಸಬಹುದು ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
ಫಾರೂಕ್ ಅವರು ಸುಮಾರು ಒಂದು ದಶಕದ ಕಾಲ ಲಂಕಾಷೈರ್ ಪರ ಆಡಿದ್ದರು. 1968 ಮತ್ತು 1976 ರ ನಡುವೆ 175 ಪಂದ್ಯಗಳಲ್ಲಿ ಲಂಕಾಷೈರ್ ಪರ ಆಡಿರುವ ಫಾರೂಕ್ ಅವರು 5942 ರನ್ ಗಳಿಸಿದ್ದರು. ಹಾಗೆಯೇ ಅವರು ವಿಕೆಟ್ ಕೀಪರ್ ಆಗಿ 429 ಕ್ಯಾಚ್‌ಗಳು ಮತ್ತು 35 ಸ್ಟಂಪಿಂಗ್‌ಗಳನ್ನು ಮಾಡಿದರು. ಫಾರೂಕ್ ಅವರು ಲಂಕಾಷೈರ್ ಪರ ಪಾದಾರ್ಪಣೆ ಮಾಡಿದಾಗ, ಈ ತಂಡ 15 ವರ್ಷಗಳಿಗಿಂದ ಯಾವುದೇ ಪ್ರಮುಖ ಪ್ರಶಸ್ತಿಯನ್ನು ಗೆದ್ದಿರಲಿಲ್ಲ. ಆದರೆ 1970 ಮತ್ತು 1975 ರ ನಡುವೆ ಈ ಕ್ಲಬ್ ನಾಲ್ಕು ಬಾರಿ ಜಿಲೆಟ್ ಕಪ್ ಗೆಲ್ಲುವಲ್ಲಿ ಫಾರೂಕ್ ಪ್ರಮುಖ ಪಾತ್ರವಹಿಸಿದ್ದರು. ಮತ್ತೊಂದೆಡೆ, ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಕ್ಲೈವ್ ಲಾಯ್ಡ್ ಕೂಡ ಎರಡು ದಶಕಗಳ ಕಾಲ ಈ ತಂಡದ ಪರ ಆಡಿದ್ದರು.
IND vs ENG: ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್ಡೇಟ್; ವಿಡಿಯೋ ನೋಡಿ
ಫಾರೂಕ್ ಇಂಜಿನಿಯರ್ ಭಾರತದ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. 1961 ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ಅವರು 1975 ರವರೆಗೆ ಆಡಿದರು. ಈ ಅವಧಿಯಲ್ಲಿ ಅವರು ಭಾರತ ಪರ ಒಟ್ಟು 46 ಟೆಸ್ಟ್ ಮತ್ತು 5 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 31.08 ರ ಸರಾಸರಿಯಲ್ಲಿ 2611 ರನ್ ಗಳಿಸಿರುವ ಅವರು ಏಕದಿನ ಪಂದ್ಯಗಳಲ್ಲಿ 114 ರನ್ ಬಾರಿಸಿದ್ದಾರೆ. ಹಾಗೆಯೇ ತಮ್ಮ ವೃತ್ತಿಜೀವನದಲ್ಲಿ ಒಟ್ಟು 69 ಕ್ಯಾಚ್ ಮತ್ತು 17 ಸ್ಟಂಪಿಂಗ್ ಮಾಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ