ಏಷ್ಯಾಕಪ್ ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ವಿಶೇಷ ದಾಖಲೆಯನ್ನು ಪಾಕಿಸ್ತಾನ್ (Pakistan) ತಂಡದ ಮೂವರು ವೇಗಿಗಳು ನಿರ್ಮಿಸಿದ್ದಾರೆ. ಅದು ಕೂಡ ಟೀಮ್ ಇಂಡಿಯಾ (Team India) ವಿರುದ್ಧ ಎಂಬುದು ವಿಶೇಷ. ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ನ 3ನೇ ಪಂದ್ಯದಲ್ಲಿ ಇಂತಹದೊಂದು ಅಪರೂಪದ ದಾಖಲೆ ನಿರ್ಮಾಣವಾಗಿದೆ. ಪಾಕಿಸ್ತಾನ್ ವಿರುದ್ಧ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಬೌಲಿಂಗ್ ಆರಂಭಿಸಿದ ಪಾಕಿಸ್ತಾನ್ ತಂಡಕ್ಕೆ ಶಾಹೀನ್ ಅಫ್ರಿದಿ ಮೊದಲ ಯಶಸ್ಸು ತಂದುಕೊಟ್ಟಿದ್ದರು.
ರೋಹಿತ್ ಶರ್ಮಾ (11) ರನ್ನು ಕ್ಲೀನ್ ಬೌಲ್ಡ್ ಮಾಡಿದ ಎಡಗೈ ವೇಗಿ ಶಾಹೀನ್ ಅಫ್ರಿದಿ ಭಾರತ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (4) ಯ ವಿಕೆಟ್ ಪಡೆದರು. ಆ ಬಳಿಕ ಬಲಗೈ ವೇಗಿ ಹ್ಯಾರಿಸ್ ರೌಫ್ ಶ್ರೇಯಸ್ ಅಯ್ಯರ್ (14) ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಇನ್ನು ಶುಭ್ಮನ್ ಗಿಲ್ (6) ರೌಫ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಈ ಹಂತದಲ್ಲಿ ಜೊತೆಯಾದ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ 138 ರನ್ಗಳ ಜೊತೆಯಾಟವಾಡುವ ಮೂಲಕ ಟೀಮ್ ಇಂಡಿಯಾಗೆ ಆಸರೆಯಾದರು. ಆದರೆ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕೊನೆಗೂ ಹ್ಯಾರಿಸ್ ರೌಫ್ ಯುಶಸ್ವಿಯಾದರು.
ಇಶಾನ್ ಕಿಶನ್ (82) ವಿಕೆಟ್ ಪಡೆದು ರೌಫ್ ಪಾಕ್ ತಂಡಕ್ಕೆ 5ನೇ ಯಶಸ್ಸು ತಂದುಕೊಟ್ಟರೆ, ಇದರ ಬೆನ್ನಲ್ಲೇ ಶಾಹೀನ್ ಅಫ್ರಿದಿ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ (87) ಔಟಾದರು.
ಆ ನಂತರ ಬಂದ ರವೀಂದ್ರ ಜಡೇಜಾ (14) ಶಾಹೀನ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚಿತ್ತರು. ಇನ್ನು ಯುವ ವೇಗಿ ನಸೀಮ್ ಶಾ ಎಸೆತದಲ್ಲಿ ಶಾರ್ದೂಲ್ ಠಾಕೂರ್ (3) ಕ್ಯಾಚ್ ನೀಡಿ ನಿರ್ಗಮಿಸಿದರು. 49ನೇ ಓವರ್ನಲ್ಲಿ ಕುಲ್ದೀಪ್ ಯಾದವ್ (4) ಹಾಗೂ ಜಸ್ಪ್ರೀತ್ ಬುಮ್ರಾ (16) ವಿಕೆಟ್ ಪಡೆಯುವ ಮೂಲಕ ನಸೀಮ್ ಶಾ ಟೀಮ್ ಇಂಡಿಯಾವನ್ನು 266 ರನ್ಗಳಿಗೆ ಆಲೌಟ್ ಮಾಡಿದರು. ಇದರೊಂದಿಗೆ ವಿಶೇಷ ದಾಖಲೆ ಪಾಕ್ ವೇಗಿಗಳ ಪಾಲಾಯಿತು.
How good were the Pakistan seamers in the first hour of play? 😍#AsiaCup2023 #PAKvIND pic.twitter.com/WAXxoRgyby
— AsianCricketCouncil (@ACCMedia1) September 2, 2023
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಟೀಮ್ ಇಂಡಿಯಾದ 10 ಬ್ಯಾಟರ್ಗಳು ವಿಕೆಟ್ ಒಪ್ಪಿಸಿರುವುದು ಪಾಕಿಸ್ತಾನದ ಮೂವರು ವೇಗಿಗಳಿಗೆ ಎಂಬುದು. ಅಂದರೆ ಜೊತೆಯಾಗಿ 27.5 ಓವರ್ಗಳನ್ನು ಎಸೆದ ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಹಾಗೂ ನಸೀಮ್ ಶಾ ಒಟ್ಟು 129 ರನ್ಗಳನ್ನು ನೀಡಿ 10 ವಿಕೆಟ್ಗಳನ್ನು ಕಬಳಿಸಿದ್ದರು.
ಈ ಮೂಲಕ ಏಷ್ಯಾಕಪ್ ಇತಿಹಾಸದಲ್ಲೇ ತಂಡವೊಂದನ್ನು ವೇಗಿಗಳು ಮಾತ್ರ ಸೇರಿ ಆಲೌಟ್ ಮಾಡಿದ ವಿಶೇಷ ದಾಖಲೆಯನ್ನು ಪಾಕ್ ಬೌಲರ್ಗಳು ನಿರ್ಮಿಸಿದರು. ಏಷ್ಯಾಕಪ್ನ 15 ಆವೃತ್ತಿಗಳ ಇತಿಹಾಸದಲ್ಲಿ ಇಂತಹದೊಂದು ಸಾಧನೆಯನ್ನು ಯಾವುದೇ ತಂಡದ ವೇಗದ ಬೌಲರ್ಗಳು ಮಾಡಿರಲಿಲ್ಲ.
ಇದೀಗ ಪಾಕ್ ವೇಗಿಗಳಾದ ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಹಾಗೂ ನಸೀಮ್ ಶಾ ಜೊತೆಗೂಡಿ ಟೀಮ್ ಇಂಡಿಯಾವನ್ಜು ಆಲೌಟ್ ಮಾಡಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಏಷ್ಯಾಕಪ್ನಲ್ಲಿ ಅಪರೂಪದ ದಾಖಲೆಯನ್ನು ಬರೆದಿದ್ದಾರೆ.