ಎಡಗೈ ವೇಗಿಗಳ ಮುಂದೆ ಮಂಡಿಯೂರುವ ಟೀಮ್ ಇಂಡಿಯಾದ ದಿಗ್ಗಜರು
Virat Kohli And Rohit Sharma: ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಎಡಗೈ ವೇಗಿಗಳನ್ನು ಎದುರಿಸುವಲ್ಲಿ ಇನ್ನೂ ಕೂಡ ನಿಪುಣರಾಗಿಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ಕಳೆದ ಎರಡು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಎಡಗೈ ಬೌಲರ್ಗಳ ಮುಂದೆ ರನ್ಗಳಿಸಲು ಪರದಾಡಿದ್ದಾರೆ.
ಏಷ್ಯಾಕಪ್ನ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ನಿರಾಸೆ ಮೂಡಿಸಿದ್ದಾರೆ. ಶ್ರೀಲಂಕಾದ ಪಲ್ಲೆಕೆಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 11 ರನ್ಗಳಿಸಿದರೆ, ವಿರಾಟ್ ಕೊಹ್ಲಿ ಕೇವಲ 4 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಇಲ್ಲಿ ಈ ಇಬ್ಬರು ದಿಗ್ಗಜರು ಎಡಗೈ ವೇಗಿ ಶಾಹೀನ್ ಅಫ್ರಿದಿ ಎಸೆತದಲ್ಲಿ ಔಟಾಗಿರುವುದು ವಿಶೇಷ.
ಅಂದರೆ 2021 ರ ಟಿ20 ವಿಶ್ವಕಪ್ನಲ್ಲಿ ಶಾಹೀನ್ ಅಫ್ರಿದಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ್ದರು. ಇದೀಗ ಮತ್ತೊಮ್ಮೆ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿಯುವಲ್ಲಿ ಪಾಕ್ ವೇಗಿ ಯಶಸ್ವಿಯಾಗಿದ್ದಾರೆ.
ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಎಡಗೈ ವೇಗಿಗಳನ್ನು ಎದುರಿಸುವಲ್ಲಿ ಇನ್ನೂ ಕೂಡ ನಿಪುಣರಾಗಿಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ಕಳೆದ ಎರಡು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಎಡಗೈ ಬೌಲರ್ಗಳ ಮುಂದೆ ರನ್ಗಳಿಸಲು ಪರದಾಡಿದ್ದಾರೆ. ಅಲ್ಲದೆ ಲೆಫ್ಟ್ ಆರ್ಮ್ ವೇಗಿಗಳ ಎಸೆತಗಳಲ್ಲಿ ಹೆಚ್ಚು ಬಾರಿ ವಿಕೆಟ್ಗಳನ್ನು ಒಪ್ಪಿಸಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.
ವಿರಾಟ್ ಕೊಹ್ಲಿ:
2021 ರಿಂದ ಇದುವರೆಗೆ ಏಕದಿನ ಕ್ರಿಕೆಟ್ನಲ್ಲಿ ಎಡಗೈ ವೇಗಿಗಳಿಂದ ವಿರಾಟ್ ಕೊಹ್ಲಿ ಒಟ್ಟು 98 ಎಸೆತಗಳನ್ನು ಎದುರಿಸಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 87 ರನ್ಗಳು. ಅಂದರೆ ಎಡಗೈ ವೇಗಿಗಳ ಮುಂದೆ ಕೊಹ್ಲಿ ಕೇವಲ 21.75 ಸರಾಸರಿಯಲ್ಲಿ ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ.
ಇದೇ ವೇಳೆ 4 ಬಾರಿ ಎಡಗೈ ವೇಗಿಗಳಿಗೆ ವಿಕೆಟ್ ಒಪ್ಪಿಸಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ಲೆಫ್ಟ್ ಆರ್ಮ್ ಬೌಲರ್ಗಳ ಮುಂದೆ ಕೊಹ್ಲಿ ಕಳೆದ ಎರಡು ವರ್ಷಗಳಿಂದ ರನ್ಗಳಿಸುವಲ್ಲಿ ಹಿಂದೆ ಬಿದ್ದಿರುವುದು ಸ್ಪಷ್ಟ.
ರೋಹಿತ್ ಶರ್ಮಾ:
2021 ರಿಂದ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ ಎಡಗೈ ವೇಗಿಗಳಿಂದ ಒಟ್ಟು 147 ಎಸೆತಗಳನ್ನು ಎದುರಿಸಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 138 ರನ್ ಮಾತ್ರ. ಅಂದರೆ 23ರ ಸರಾಸರಿಯಲ್ಲಿ ಮಾತ್ರ ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವೇಳೆ 6 ಬಾರಿ ವಿಕೆಟ್ ಒಪ್ಪಿಸಿದ್ದಾರೆ.
ಅಂದರೆ ಎಡಗೈ ವೇಗಿಗಳಿಗೆ ರೋಹಿತ್ ಶರ್ಮಾ ಸುಲಭವಾಗಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಇದೀಗ ಶ್ರೀಲಂಕಾದಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲೂ ಶಾಹೀನ್ ಅಫ್ರಿದಿ ಎಸೆತದಲ್ಲಿ ಹಿಟ್ಮ್ಯಾನ್ ಕ್ಲೀನ್ ಬೌಲ್ಡ್ ಆಗಿ ನಿರ್ಗಮಿಸಿದ್ದಾರೆ.
ಇದನ್ನೂ ಓದಿ: ಅಭಿಮಾನಿಗಳಿಂದಲೇ ವಿಶೇಷ ದಾಖಲೆ ಬರೆದ CSK
ಇತ್ತ ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಟೀಮ್ ಇಂಡಿಯಾದ ದಿಗ್ಗಜರು ಬೇಗನೆ ವಿಕೆಟ್ ಒಪ್ಪಿಸುತ್ತಿರುವುದು ತಂಡದ ಮೇಲೆ ಒತ್ತಡವನ್ನುಂಟು ಮಾಡುತ್ತಿದೆ. ಅದರಲ್ಲೂ ಪಾಕಿಸ್ತಾನ್ ಸೇರಿದಂತೆ ಕೆಲ ತಂಡಗಳು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಎಡಗೈ ಅಸ್ತ್ರಗಳನ್ನು ಪ್ರಯೋಗಿಸಿ ಯಶಸ್ಸು ಸಾಧಿಸುತ್ತಿದ್ದಾರೆ.