ಟೀಮ್ ಇಂಡಿಯಾಗೆ ಗುಡ್ ನ್ಯೂಸ್… ಆದರೆ ಯಾರು ಹೊರಗೆ?
ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯವು ನಾಳೆ (ಅಕ್ಟೋಬರ್ 30) ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನದಲ್ಲಿ ಜರುಗಲಿದೆ. ಈ ಪ್ರಮುಖ ಹಣಾಹಣಿಗೂ ಮುನ್ನ ಟೀಮ್ ಇಂಡಿಯಾಗೆ ಒಂದು ಕಡೆ ಶುಭ ಸುದ್ದಿ ಸಿಕ್ಕಿದ್ದರೆ, ಮತ್ತೊಂದೆಡೆ ಅದೇ ಸುದ್ದಿ ಹೊಸ ತಲೆನೋವನ್ನೂ ತಂದಿಟ್ಟಿದೆ.

ನ್ಯೂಝಿಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಗುಡ್ ನ್ಯೂಸ್ ಸಿಕ್ಕಿದೆ. ಕಳೆದ ಎರಡು ಪಂದ್ಯಗಳಿಂದ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದ ಸ್ಫೋಟಕ ದಾಂಡಿಗ ಇಶಾನ್ ಕಿಶನ್ (Ishan Kishan), ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನದ ನೆಟ್ಸ್‌ನಲ್ಲಿ ಪೂರ್ಣ ಪ್ರಮಾಣದ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಹೀಗಾಗಿ ಅವರು ನಾಲ್ಕನೇ ಮ್ಯಾಚ್ನಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಈ ಸರಣಿಯ ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಅವರ ಬಲಗಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಸದ್ಯ ಭಾರತ ತಂಡವು 5 ಪಂದ್ಯಗಳ ಈ ಸರಣಿಯಲ್ಲಿ ಈಗಾಗಲೇ 3-0 ಅಂತರದ ಮುನ್ನಡೆ ಸಾಧಿಸಿ ಸರಣಿ ಕೈವಶ ಮಾಡಿಕೊಂಡಿದೆ. ಹೀಗಾಗಿ, ಸರಣಿ ಗೆದ್ದಿರುವ ನಿರಾಳತೆಯಲ್ಲಿರುವ ಭಾರತ, ಕಿಶನ್ ವಿಷಯದಲ್ಲಿ ತರಾತುರಿಯ ನಿರ್ಧಾರ ಕೈಗೊಳ್ಳುತ್ತದೆಯೇ ಅಥವಾ ಅವರಿಗೆ ವಿಶ್ರಾಂತಿ ನೀಡುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
🚨 GOOD NEWS FOR TEAM INDIA 🇮🇳
– Ishan Kishan is in full swing in nets for the 4th T20I against New Zealand. https://t.co/kdffFUuK5j
— Johns. (@CricCrazyJohns) October 29, 2026
ಟೀಮ್ ಇಂಡಿಯಾಗೆ ಹೊಸ ಚಿಂತೆ ಶುರು:
ಇಶಾನ್ ಕಿಶನ್ ಪೂರ್ಣ ಫಿಟ್ ಆಗಿ ತಂಡಕ್ಕೆ ಮರಳಿದರೆ, ಆಡುವ ಹನ್ನೊಂದರ ಬಳಗದಲ್ಲಿ ಯಾರನ್ನು ಕೈಬಿಡಬೇಕು ಎಂಬ ದೊಡ್ಡ ಪ್ರಶ್ನೆ ಎದುರಾಗಿದೆ.
ಕಿಶನ್ ಅನುಪಸ್ಥಿತಿಯಲ್ಲಿ ಮೂರನೇ ಟಿ20 ಪಂದ್ಯದಲ್ಲಿ ಆರಂಭಿಕನಾಗಿ ಅವಕಾಶ ಪಡೆದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ ಅವರೊಂದಿಗೆ ಭರ್ಜರಿ 133 ರನ್‌ಗಳ ಜೊತೆಯಾಟವಾಡಿದ್ದರು. ಕೇವಲ 19 ಎಸೆತಗಳಲ್ಲಿ 45 ರನ್ ಚಚ್ಚಿದ ಸೂರ್ಯವಂಶಿ ಅವರನ್ನು ಮುಂದಿನ ಪಂದ್ಯದಿಂದ ಕೈಬಿಡುವುದು ಕಠಿಣ ನಿರ್ಧಾರವಾಗಲಿದೆ.
ಒಂದು ವೇಳೆ ವೈಭವ್ ಸೂರ್ಯವಂಶಿ ಅವರನ್ನೇ ಆರಂಭಿಕರಾಗಿ ಮುಂದುವರಿಸಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದರೆ, ಇಶಾನ್ ಕಿಶನ್ ಅವರನ್ನು ಸಂಜು ಸ್ಯಾಮ್ಸನ್ ಜಾಗದಲ್ಲಿ ಮಧ್ಯಮ ಕ್ರಮಾಂಕಕ್ಕೆ ತರಬಹುದು. ಆದರೆ, ಸರಣಿಯ ಮೊದಲ ಪಂದ್ಯದ ಗೆಲುವಿನ ರೂವಾರಿಯಾಗಿದ್ದ ಸಂಜು ಸ್ಯಾಮ್ಸನ್ ಅವರ ಆ ಅದ್ಭುತ ಪ್ರದರ್ಶನವನ್ನು ಟೀಮ್ ಮ್ಯಾನೇಜ್‌ಮೆಂಟ್ ಅಷ್ಟು ಸುಲಭವಾಗಿ ಕಡೆಗಣಿಸುವಂತಿಲ್ಲ.
ಹೀಗಾಗಿ ಇಶಾನ್ ಕಿಶನ್ ಪುನರಾಗಮನವು ಟೀಮ್ ಇಂಡಿಯಾ ಪಾಲಿಗೆ ಶುಭ ಸುದ್ದಿಯಾಗಿದ್ದರೂ, ಅಂತಿಮ ಹನ್ನೊಂದರ ಬಳಗದ ಆಯ್ಕೆಯು ಮ್ಯಾನೇಜ್‌ಮೆಂಟ್‌ಗೆ ಹೊಸ ತಲೆನೋವಾಗಿ ಪರಿಣಮಿಸಿದೆ.”
ಪಂದ್ಯದ ಸಮಯ:
ಭಾರತ ಮತ್ತು ನ್ಯೂಝಿಲೆಂಡ್ ನಡುವಿನ 4ನೇ ಟಿ20 ಪಂದ್ಯವು ನಾಳೆ ಅಂದರೆ ಅಕ್ಟೋಬರ್ 30, ಶುಕ್ರವಾರದಂದು ಭಾರತೀಯ ಕಾಲಮಾನ ಮಧ್ಯಾಹ್ನ 12:30ಕ್ಕೆ ಆರಂಭವಾಗಲಿದೆ. ಬೆಂಚ್ ಕಾಯುತ್ತಿರುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲು ಭಾರತ ಯೋಚಿಸುತ್ತದೆಯೇ ಅಥವಾ ಇಶಾನ್ ಕಿಶನ್ ಫಾರ್ಮ್ ಪರೀಕ್ಷಿಸಲು ಮುಂದಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಮೆಸ್ಸಿಯನ್ನು ಹಿಂದಿಕ್ಕಿ B.O.A.T ಪ್ರಶಸ್ತಿ ಗೆದ್ದ ಕ್ರಿಸ್ಟಿಯಾನೊ ರೊನಾಲ್ಡೊ
ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ (ವಿಕೆಟ್ ಕೀಪರ್), ತಿಲಕ್ ವರ್ಮಾ, ಅಕ್ಷರ್ ಪಟೇಲ್, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ನಮನ್ ಧೀರ್, ಪ್ರಿನ್ಸ್ ಯಾದವ್, ಮಾಯಾಂಕ್ ಯಾದವ್, ಅರ್ಷದೀಪ್ ಸಿಂಗ್ ಸಿಂಗ್, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಇಶಾನ್ ಕಿಶನ್, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್).




