ಪಾಕ್ ಕ್ರಿಕೆಟ್ ಮಂಡಳಿಯಲ್ಲಿ ಸಂಚಲನ; ಶಾಹಿದ್ ಅಫ್ರಿದಿಗೆ ಸಿಕ್ತು ಪವರ್ಫುಲ್ ಹುದ್ದೆ..!
Shahid Afridi: ಈ ಆಯ್ಕೆ ಸಮಿತಿಯಲ್ಲಿ ಮಾಜಿ ಆಲ್‌ರೌಂಡರ್ ಅಬ್ದುಲ್ ರಜಾಕ್, ಮಾಜಿ ವೇಗದ ಬೌಲರ್ ರಾವ್ ಇಫ್ತಿಕರ್ ಕೂಡ ಅಫ್ರಿದಿ ಅವರೊಂದಿಗೆ ಇರಲಿದ್ದಾರೆ.
ಕಳೆದ ಕೆಲವು ತಿಂಗಳಿಂದ ಪಾಕ್ ಕ್ರಿಕೆಟ್ ಮಂಡಳಿ (Pakistan Cricket Board) ಸಖತ್ ಚರ್ಚೆಯಲಿದೆ. ಈ ಮೊದಲು ಬಿಸಿಸಿಐ ವಿರುದ್ಧ ಹೇಳಿಕೆ ನೀಡುತ್ತಾ ಸದಾ ಸುದ್ದಿಯಲ್ಲಿರುತ್ತಿದ್ದ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾರನ್ನು (Rameez Raja) ಅವರ ಹುದ್ದೆಯಿಂದಲೇ ಕಿತ್ತೊಗೆಯಲಾಯಿತು. ಇದೀಗ ಅವರ ಸ್ಥಾನಕ್ಕೆ ಆಯ್ಕೆಯಾಗಿರುವ ನಜಮ್ ಸೇಥಿ (Najam Sethi), ಮಂಡಳಿಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುಂದಾಗಿದ್ದಾರೆ. ಅದರ ಪ್ರಯುಕ್ತ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿಗೆ (Shahid Afridi) ಹೊಸ ಜವಾಬ್ದಾರಿ ನೀಡಿದ್ದು, ಪಾಕ್ ಕ್ರಿಕೆಟ್ ಮಂಡಳಿಯ ಹೊಸ ಮುಖ್ಯ ಆಯ್ಕೆಗಾರರನ್ನಾಗಿ ಅಫ್ರಿದಿ ಆಯ್ಕೆಯಾಗಿದ್ದಾರೆ. ಮೊಹಮ್ಮದ್ ವಾಸಿಂ (Mohammad Wasim) ನೇತೃತ್ವದ ಆಯ್ಕೆ ಸಮಿತಿಯನ್ನು ಒಂದು ದಿನ ಮುಂಚಿತವಾಗಿ ವಜಾಗೊಳಿಸಿದ್ದ ಸೇಥಿ, ಶನಿವಾರ ಟ್ವೀಟ್ ಮೂಲಕ ಶಾಹಿದ್ ಅಫ್ರಿದಿಯನ್ನು ಮುಖ್ಯ ಆಯ್ಕೆಗಾರನನ್ನಾಗಿ ಮಾಡುವುದಾಗಿ ಘೋಷಿಸಿದ್ದಾರೆ.
ಈ ಆಯ್ಕೆ ಸಮಿತಿಯಲ್ಲಿ ಮಾಜಿ ಆಲ್‌ರೌಂಡರ್ ಅಬ್ದುಲ್ ರಜಾಕ್, ಮಾಜಿ ವೇಗದ ಬೌಲರ್ ರಾವ್ ಇಫ್ತಿಕರ್ ಕೂಡ ಅಫ್ರಿದಿ ಅವರೊಂದಿಗೆ ಇರಲಿದ್ದಾರೆ. ಅದೇ ಸಮಯದಲ್ಲಿ ಹರೂನ್ ರಶೀದ್ ಅವರನ್ನು ನೂತನ ಸಂಚಾಲಕರನ್ನಾಗಿ ಮಾಡಲಾಗಿದೆ.
22 ವರ್ಷಗಳ ನಂತರ ಪಾಕ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಆಂಗ್ಲರು; ಸೋಲುಗಳ ಸರಣಿ ಮುಂದುವರೆಸಿದ ಬಾಬರ್ ಪಡೆ
ಮಧ್ಯಂತರ ಜವಾಬ್ದಾರಿ
ಆದರೆ, ಅಫ್ರಿದಿ ನೇತೃತ್ವದ ಈ ಆಯ್ಕೆ ಸಮಿತಿಗೆ ಕೇವಲ ಒಂದು ಸರಣಿಗೆ ಮಾತ್ರ ಈ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ಸಮಿತಿಯು ನ್ಯೂಜಿಲೆಂಡ್ ಪ್ರವಾಸದ ವಿರುದ್ಧ ಆಡಲಿರುವ ಸರಣಿಗೆ ತಂಡವನ್ನು ಆಯ್ಕೆ ಮಾಡುತ್ತದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದ್ದರೂ, ಏಕದಿನ ಸರಣಿಗೆ ತಂಡವನ್ನು ಇನ್ನೂ ಆಯ್ಕೆ ಮಾಡಲಾಗಿಲ್ಲ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ 10, 12 ಮತ್ತು 14 ರಂದು ಮೂರು ಏಕದಿನ ಪಂದ್ಯಗಳನ್ನು ಆಡಲಿವೆ.
ಇತ್ತೀಚೆಗಷ್ಟೇ ಪಾಕಿಸ್ತಾನ ಸರ್ಕಾರ ಪಿಸಿಬಿಯಲ್ಲಿ ಬದಲಾವಣೆ ತಂದಿದ್ದು, ರಮೀಜ್ ರಾಜಾ ಅವರನ್ನು ಪದಚ್ಯುತಗೊಳಿಸಿ ಸೇಥಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಇದರ ನಂತರ, ಸೇಥಿ ಅವರು 2019 ರ ಸಂವಿಧಾನದ ಪ್ರಕಾರ ಚುನಾಯಿತರಾದ ಎಲ್ಲಾ ಸಮಿತಿಗಳನ್ನು ವಜಾಗೊಳಿಸಿದ್ದರು. ಇದರ ಅಡಿಯಲ್ಲಿ ವಾಸಿಂ ನೇತೃತ್ವದ ಆಯ್ಕೆ ಸಮಿತಿಯನ್ನು ವಜಾಗೊಳಿಸಲಾಯಿತು.
ಅಫ್ರಿದಿ ವೃತ್ತಿಜೀವನ ಹೀಗಿತ್ತು
ಪಾಕಿಸ್ತಾನದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಅಫ್ರಿದಿ, ಏಕದಿನ ಕ್ರಿಕೆಟ್ನಲ್ಲಿ 37 ಎಸೆತಗಳಲ್ಲಿ ಶತಕ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಅಫ್ರಿದಿ ಅವರ ವೃತ್ತಿಜೀವನವನ್ನು ನೋಡಿದರೆ, ಪಾಕಿಸ್ತಾನ ಪರ 27 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಫ್ರಿದಿ 36.51 ಸರಾಸರಿಯಲ್ಲಿ 1716 ರನ್ ಗಳಿಸಿದ್ದಾರೆ. ಹಾಗೆಯೇ ಟೆಸ್ಟ್‌ನಲ್ಲಿ 48 ವಿಕೆಟ್‌ಗಳನ್ನೂ ಪಡೆದಿದ್ದಾರೆ. ಏಕದಿನದಲ್ಲಿ 398 ಪಂದ್ಯಗಳನ್ನಾಡಿರುವ ಅಫ್ರಿದಿ 8064 ರನ್ ಮತ್ತು 395 ವಿಕೆಟ್ ಪಡೆದಿದ್ದಾರೆ. ಟಿ20ಯಲ್ಲಿ 99 ಟಿ20 ಪಂದ್ಯಗಳನ್ನು ಆಡಿರುವ ಅವರು 1416 ರನ್‌ಗಳ ಜೊತೆಗೆ 98 ವಿಕೆಟ್‌ಗಳನ್ನು ಪಡೆದಿದ್ದಾರೆ.
ಅಫ್ರಿದಿ ಜೊತೆಗೆ ಆಯ್ಕೆ ಮಂಡಳಿಗೆ ಆಯ್ಕೆಯಾಗಿರುವ ರಾವ್ ಇಫ್ತಿಕರ್ ಭಾರತ ಪರ ಒಂದು ಟೆಸ್ಟ್, 62 ಏಕದಿನ ಮತ್ತು ಎರಡು ಟಿ20 ಪಂದ್ಯಗಳನ್ನು ಆಡಿದ್ದಾರೆ. ಹಾಗೆಯೇ ರಜಾಕ್ 46 ಟೆಸ್ಟ್ ಪಂದ್ಯ, 265 ಏಕದಿನ ಮತ್ತು 32 ಟಿ20 ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:30 pm, Sat, 24 December 22