ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ದಿನೇಶ್ ಮೊಂಗಿಯಾ ಅವರು ಮಂಗಳವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ್ದಾರೆ. ಮೊಂಗಿಯಾ ಅವರು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ರಾಷ್ಟ್ರೀಯ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಪಂಜಾಬ್ ಚುನಾವಣೆಯಲ್ಲಿ ದಿನೇಶ್ ಮೊಂಗಿಯಾ ಸಕ್ರಿಯ ಪಾತ್ರ ವಹಿಸುವ ಸಾಧ್ಯತೆಯಿದ್ದು, ಹೀಗಾಗಿ ಅವರು ಪಕ್ಷಕ್ಕೆ ಸೇರಿದ್ದಾ. ಇನ್ನು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗನ ಜೊತೆ ಕಾಂಗ್ರೆಸ್ ಎಂಎಲ್ಎ ಫತಾಹ್ ಜಂಗ್ ಬಾಜ್ವಾ, ಹರಗೋವಿಂದ್ ಲಾಧಿ, ಕಮಲ್ ಬಾಕ್ಸಿ, ಮಧುಮಿತ್ ಮತ್ತು ಅಕಾಲಿ ದಳ ಪಕ್ಷದ ನಾಯಕ ರಾಜದೇವ್ ಖಾಲ್ಸಾ ಕೂಡ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
2001 ರಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದ ದಿನೇಶ್ ಮೊಂಗಿಯಾ ಸೆಪ್ಟೆಂಬರ್ 2019 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. 2007 ರಲ್ಲಿ ಬಾಂಗ್ಲಾದೇಶದ ವಿರುದ್ಧ ಅವರು ಕೊನೆಯ ಬಾರಿ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ 12 ವರ್ಷಗಳ ಕಾಲ ಅವರು ದೇಶೀಯ ಕ್ರಿಕೆಟ್ನಲ್ಲಿ ಮುಂದುವರೆದಿದ್ದರು. ಆದರೆ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಲು ಸಾಧ್ಯವಾಗಿರಲಿಲ್ಲ.
Former cricketer Dinesh Mongia joins Bharatiya Janata Party in Delhi. pic.twitter.com/ChOa6wrDEr
— ANI (@ANI) December 28, 2021
ಐಪಿಎಲ್ನಲ್ಲಿ ಸಿಕ್ಕಿಲ್ಲ ಚಾನ್ಸ್..!
ದಿನೇಶ್ ಮೊಂಗಿಯಾ ಅವರು 2007 ರಲ್ಲಿ BCCI ನಿಂದ ನಿಷೇಧಿಸಲ್ಪಟ್ಟ ICL (ಇಂಡಿಯಾ ಕ್ರಿಕೆಟ್ ಲೀಗ್) ಲೀಗ್‌ನಲ್ಲಿ ಭಾಗವಹಿಸಿದ್ದರು. ಆ ಬಳಿಕ ಐಸಿಎಲ್ ಆಡಿದ ಆಟಗಾರರಿಗೆ ಬಿಸಿಸಿಐ ನಿಷೇಧ ಹೇರಿತ್ತು. ಹೀಗಾಗಿ ಐಪಿಎಲ್ ಆರಂಭದ ವೇಳೆ ಅವರಿಗೆ ಐಪಿಎಲ್ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದಾಗ್ಯೂ ಬಿಸಿಸಿಐ ಈ ನಿಷೇಧವನ್ನು ಹಿಂತೆಗೆದುಕೊಂಡರೂ ದಿನೇಶ್ ಮೊಂಗಿಯಾ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ವಿಫಲರಾಗಿದ್ದರು.
2003 ರಲ್ಲಿ ಏಕದಿನ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದ ಭಾರತ ತಂಡದ ಭಾಗವಾಗಿದ್ದ ಎಡಗೈ ಆಲ್ರೌಂಡರ್ ದಿನೇಶ್ ಮೊಂಗಿಯಾ ಐದು ವರ್ಷಗಳ ಕಾಲ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರ ಪ್ಲೇಯಿಂಗ್ 11 ನ ಖಾಯಂ ಸದಸ್ಯರಾಗಿರಲಿಲ್ಲ. ಟೀಮ್ ಇಂಡಿಯಾ ಪರ 57 ಏಕದಿನ ಪಂದ್ಯಗಳನ್ನಾಡಿರುವ ಮೊಂಗಿಯಾ 27.95 ರ ಸರಾಸರಿಯಲ್ಲಿ 1230 ರನ್ ಗಳಿಸಿದ್ದರು. ಹಾಗೆಯೇ 14 ವಿಕೆಟ್‌ಗಳನ್ನು ಸಹ ಪಡೆದಿದ್ದರು. ಜಿಂಬಾಬ್ವೆ ವಿರುದ್ಧದ ಸರಣಿ ನಿರ್ಣಾಯಕ ಪಂದ್ಯದಲ್ಲಿ 159 ರನ್ ಗಳಿಸಿದ್ದು ಅವರ ಅತ್ಯುತ್ತಮ ಸ್ಕೋರ್. ಇದು ಮೊಂಗಿಯಾ ಅವರ ವೃತ್ತಿ ಜೀವನದ ಏಕೈಕ ಶತಕವಾಗಿತ್ತು. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಏಕೈಕ T20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದ ದಿನೇಶ್ ಮೊಂಗಿಯಾ ಆ ಪಂದ್ಯದಲ್ಲಿ 38 ರನ್ ಗಳಿಸಿದ್ದರು. ಇನ್ನು ಲಂಕಾಶೈರ್ ಮತ್ತು ಲೀಸೆಸ್ಟರ್‌ಶೈರ್ ತಂಡದ ಭಾಗವಾಗಿ ಮೊಂಗಿಯಾ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡಿದರು.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 121 ಪಂದ್ಯಗಳನ್ನಾಡಿರುವ ದಿನೇಶ್ ಮೊಂಗಿಯಾ ಒಟ್ಟು 21 ಶತಕ ಬಾರಿಸಿದ್ದರು. ಅಲ್ಲದೆ ಈ ಹಿಂದೆ ಪಂಜಾಬ್ ಕ್ರಿಕೆಟ್ ಸಂಸ್ಥೆಯ (ಪಿಸಿಎ) ಆಯ್ಕೆಗಾರರನ್ನಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಇದೀಗ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವ ಮಾಜಿ ಟೀಮ್ ಇಂಡಿಯಾ ಆಟಗಾರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ: ಭಾರತವನ್ನು ಗೇಲಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗನ ಕಾಲೆಳೆದ ಆಸ್ಟ್ರೇಲಿಯಾ ಪತ್ರಕರ್ತೆ..!
ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…
ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ
(Former cricketer Dinesh Mongia to join BJP ahead of Punjab polls)
Published On - 3:29 pm, Tue, 28 December 21