
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ (Mohammed Azharuddin) ಅವರ ಮಡದಿ ಸಂಗೀತಾ ಬಿಜಲಾನಿ (Sangeeta Bijlani) ಅವರ ಒಡೆತನದಲ್ಲಿರುವ ಬಂಗಲೆಯಲ್ಲಿ ಕಳ್ಳತನ ನಡೆದಿದೆ ಎಂದು ವರದಿಯಾಗಿದೆ. ಲೋನಾವಾಲಾದಲ್ಲಿರುವ ಅವರ ಐಷಾರಾಮಿ ಬಂಗಲೆಯಲ್ಲಿ ಕಳ್ಳತನ ನಡೆದಿದ್ದು, ಕಳ್ಳರು ಬಂಗಲೆಯಿಂದ ಕೆಲವು ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ನೀಡಿರುವ ಹೇಳಿಕೆಯ ಪ್ರಕಾರ, ಜುಲೈ 7 ರಿಂದ 18 ರ ನಡುವೆ ಬಂಗಲೆ ಖಾಲಿಯಾಗಿದ್ದ ಸಮಯದಲ್ಲಿ ಕಳ್ಳರು ತಮ್ಮ ಕೈಚೆಳಕ ತೊರಿರುವುದಾಗಿ ಹೇಳಲಾಗುತ್ತಿದೆ. ಕಳ್ಳರು ಮನೆಯೊಳಗಿದ್ದ ವಸ್ತುಗಳನ್ನು ಕದ್ದಿರುವುದು ಮಾತ್ರವಲ್ಲದೆ ಬಂಗಲೆಯೊಳಗಿನ ಆಸ್ತಿಗೂ ಹಾನಿ ಮಾಡಿದ್ದಾರೆ.
ಪುಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, ‘ಕಳ್ಳರು ಹಿಂಭಾಗದ ಗೋಡೆಯ ಜಾಲರಿಯನ್ನು ಕತ್ತರಿಸಿ ಬಂಗಲೆಯೊಳಗೆ ನುಸುಳಿದ್ದಾರೆ. ಮೊದಲು ಮೊದಲ ಮಹಡಿಯಲ್ಲಿರುವ ಗ್ಯಾಲರಿಗೆ ಹತ್ತಿರುವ ಕಳ್ಳರು ಆ ನಂತರ ಕಿಟಕಿಯ ಗ್ರಿಲ್ ಅನ್ನು ಧ್ವಂಸಗೊಳಿಸಿ ಮನೆಯ ಒಳಗೆ ಪ್ರವೇಶಿಸಿದ್ದಾರೆ. ನಂತರ ಮನೆಯಲ್ಲಿದ್ದ ರೂ. 50 ಸಾವಿರ ನಗದು ಮತ್ತು ಸುಮಾರು ರೂ. 7 ಸಾವಿರ ಮೌಲ್ಯದ ಟಿವಿಯನ್ನು ಕದ್ದಿದ್ದಾರೆ ಎಂದು ವರದಿಯಾಗಿದೆ.
ಅಜರುದ್ದೀನ್ ಅವರ ಆಪ್ತರಾದ ಮುಹಮ್ಮದ್ ಮುಜೀಬ್ ಖಾನ್ ಅವರು ಬಂಗಲೆಯಲ್ಲಿ ಕಳ್ಳತನ ನಡೆದ ಬಗ್ಗೆ ದೂರು ನೀಡಿದ್ದಾರೆ. ಮುಜೀಬ್ ಖಾನ್ ಅವರ ಪ್ರಕಾರ, ಬಂಗಲೆಯಲ್ಲಿ ಯಾರೂ ಇಲ್ಲದಿದ್ದಾಗ, ಅಂದರೆ ಜುಲೈ 7 ರಿಂದ 18 ರ ನಡುವೆ ಕಳ್ಳತನ ನಡೆದಿದೆ. ಲೋನಾವಾಲ ಗ್ರಾಮೀಣ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 331 (3), 331 (4), 305 (ಎ), 324 (4), 324 (5) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿಯವರೆಗೆ, ಕದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿಲ್ಲ. ಪೊಲೀಸರು ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನಾದರಿಸಿ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಅಪರಾಧಿಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಇದರ ಜೊತೆಗೆ, ಸುತ್ತಮುತ್ತಲಿನ ಜನರನ್ನು ಸಹ ಪ್ರಶ್ನಿಸುತ್ತಿದ್ದಾರೆ.
ಭಾರತದ ಪರ 99 ಟೆಸ್ಟ್‌ಗಳನ್ನಾಡಿರುವ ಅಜರುದ್ದೀನ್, 147 ಇನ್ನಿಂಗ್ಸ್‌ಗಳಲ್ಲಿ 45.03 ಸರಾಸರಿಯಲ್ಲಿ 6215 ರನ್ ಗಳಿಸಿದ್ದಾರೆ. ಇದರಲ್ಲಿ 21 ಅರ್ಧಶತಕಗಳು ಹಾಗೂ 22 ಶತಕಗಳು ಸೇರಿವೆ. ಹಾಗೆಯೇ 334 ಏಕದಿನ ಪಂದ್ಯಗಳನ್ನು ಆಡಿರುವ ಅಜರುದ್ದೀನ್ 308 ಏಕದಿನ ಇನ್ನಿಂಗ್ಸ್‌ಗಳಲ್ಲಿ 9378 ರನ್ ಗಳಿಸಿದ್ದಾರೆ. ಇದರಲ್ಲಿ 58 ಅರ್ಧಶತಕ ಮತ್ತು 7 ಶತಕಗಳು ಸೇರಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:12 pm, Sat, 19 July 25