ಬರೋಡಾದ ಮಹಿಳಾ ಕ್ರಿಕೆಟ್ ತಂಡ (women’s cricket team of Baroda) ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು, ವರದಿಯ ಪ್ರಕಾರ ಈ ಅವಘಟದಲ್ಲಿ ತಂಡದ ಕೋಚ್ ಹಾಗೂ ಕೆಲ ಆಟಗಾರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯವಾಗಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಮಹಿಳಾ ಸೀನಿಯರ್ ಟಿ 20 ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಂಡಿದ್ದ ಬರೋಡಾ ತಂಡ ಪಂದ್ಯಾವಳಿ ಮುಗಿಸಿಕೊಂಡು ತವರಿಗೆ ಹಿಂದಿರುಗುವ ವೇಳೆ ಈ ಅಪಘಾತ ಸಂಭವಿಸಿದೆ. ಬರೋಡಾ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ್ದ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಬಸ್ನ ಮುಂಭಾಗಕ್ಕೆ ತೀವ್ರ ಹಾನಿಯಾಗಿದೆ.
ಸುದ್ದಿ ಸಂಸ್ಥೆ ANI ವರದಿಯ ಪ್ರಕಾರ, ಶುಕ್ರವಾರ ಅಕ್ಟೋಬರ್ 21 ರಂದು ವಿಶಾಖಪಟ್ಟಣಂನ ಜ್ಞಾನಪುರಂನಲ್ಲಿ ಬರೋಡಾ ಮಹಿಳಾ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ ಬಸ್, ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ನಾಲ್ವರು ಆಟಗಾರರು ಮತ್ತು ಬರೋಡಾ ತಂಡದ ಕೋಚ್ ಗಾಯಗೊಂಡಿದ್ದಾರೆ ಎಂದು ವಿಶಾಖಪಟ್ಟಣಂ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೂಡಲೇ ಅವರನ್ನೆಲ್ಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್ 7 ಆವೃತ್ತಿಗಳಲ್ಲಿ ಟೀಂ ಇಂಡಿಯಾದ ಪ್ರದರ್ಶನ ಹೇಗಿತ್ತು ಗೊತ್ತಾ?
ಚಿಕಿತ್ಸೆ ಬಳಿಕ ಆಟಗಾರ್ತಿಯರು ತವರಿಗೆ
ಮಾಹಿತಿಯ ಪ್ರಕಾರ, ಆಂಧ್ರಪ್ರದೇಶದಲ್ಲಿ ಮಹಿಳಾ ಸೀನಿಯರ್ ಟಿ 20 ಚಾಂಪಿಯನ್‌ಶಿಪ್ ಆಡಿದ ನಂತರ ಬರೋಡಾ ತಂಡವು ತನ್ನ ತವರು ವಡೋದರಾಕ್ಕೆ ಹಿಂತಿರುಗುತ್ತಿತ್ತು. ಈ ವೇಳೆ ತಂಡದ ಬಸ್ ಟ್ರಕ್‌ಗೆ ಡಿಕ್ಕಿಹೊಡೆದಿದೆ. ಅವಘಡದಲ್ಲಿ ಬಸ್ ಮುಂಭಾಗಕ್ಕೆ ತೀವ್ರ ಹಾನಿಯಾಗಿರುವುದು ಬಿಟ್ಟರೆ, ಯಾವುದೇ ಆಟಗಾರ್ತಿ ಮತ್ತು ತರಬೇತುದಾರಿಗೆ ಗಂಭೀರ ಗಾಯವಾಗಿಲ್ಲ. ಕೂಡಲೇ ಅವರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೌಮ್ಯ ಚಿಕಿತ್ಸೆ ಬಳಿಕ ಅವರೆಲ್ಲರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಗಾಯಾಳು ಆಟಗಾರ್ತಿಯರು ಹಾಗೂ ಕೋಚ್ ತಂಡದೊಂದಿಗೆ ವಾಪಸ್ ಬರೋಡಕ್ಕೆ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Andhra Pradesh | A women’s cricket team bus met with an accident as it collided with a truck in Gnanapuram, Visakhapatnam earlier today. 4 players & coach were injured; all were admitted to a pvt hospital. After treatment, they went to Vadodara today evening: Visakhapatnam Police pic.twitter.com/VBCboHaQN3
— ANI (@ANI) October 21, 2022
ಬರೋಡಾದ ಅದ್ಭುತ ಪ್ರದರ್ಶನ
ಇನ್ನು ತಂಡದ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಬರೋಡಾ ತಂಡ ಆಂಧ್ರಪ್ರದೇಶದ ವಿಜಯನಗರಂನಲ್ಲಿ ನಡೆದ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಈ ಪಂದ್ಯಾವಳಿಯಲ್ಲಿ ಬರೋಡಾ ತಂಡ ಅಕ್ಟೋಬರ್ 14 ಮತ್ತು ಅಕ್ಟೋಬರ್ 20 ರ ನಡುವೆ 4 T20 ಪಂದ್ಯಗಳನ್ನು ಆಡಿದ್ದು, ಅತ್ಯುತ್ತಮ ಆಟ ಪ್ರದರ್ಶಿಸಿ 3 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದರೆ ಆಡಿದ ಈ 4 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಬರೋಡಾ ತಂಡ ಮುಂಬೈ ವಿರುದ್ಧ ಏಕೈಕ ಸೋಲು ಕಂಡಿತು. ಅಕ್ಟೋಬರ್ 20 ರಂದು ಸೌರಾಷ್ಟ್ರ ವಿರುದ್ಧ ನಡೆದ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಜಯ ದಾಖಲಿಸಿದ್ದ ಬರೋಡಾ ಬಳಗದ ಗೆಲುವಿನಲ್ಲಿ ತಂಡದ ನಾಯಕಿ ಯಾಸ್ತಿಕಾ ಭಾಟಿಯಾ ಪ್ರಮುಖ ಪಾತ್ರ ವಹಿಸಿದರು. ಟೀಂ ಇಂಡಿಯಾದ ಈ ಯುವ ಬ್ಯಾಟರ್ ಅಜೇಯ 64 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:29 am, Sat, 22 October 22