Rohit Sharma: ‘ನನಗೆ ನಂಬಿಕೆ ಇಲ್ಲ’; ಪಾಕ್ ಪತ್ರಕರ್ತನ ಪ್ರಶ್ನೆಗೆ ಖಡಕ್ ಉತ್ತರ ನೀಡಿದ ರೋಹಿತ್ ಶರ್ಮಾ
T20 World Cup 2022: ಭಾರತ- ಪಾಕಿಸ್ತಾನ ಪಂದ್ಯ ಆರಂಭಕ್ಕೆ ಒಂದು ದಿನ ಮೊದಲು ಪತ್ರಿಕಾಗೋಷ್ಠಿ ನಡೆಸಿದ ರೋಹಿತ್ ಶರ್ಮಾ, ಪಾಕಿಸ್ತಾನದ ಪತ್ರಕರ್ತರು ಕೇಳಿದ ಪ್ರಶ್ನೆಗೆ ಖಡಕ್ ಉತ್ತರ ನೀಡಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ (T20 World Cup 2022) ಭಾನುವಾರದಂದು ಮಹತ್ವದ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಭಾರತ-ಪಾಕಿಸ್ತಾನ (India-Pakistan) ಸೆಣಸಾಡುತ್ತಿವೆ. ಈ ಅಮೋಘ ಪಂದ್ಯಕ್ಕಾಗಿ ಉಭಯ ತಂಡಗಳ ಸಿದ್ಧತೆಗಳು ಭರದಿಂದ ಸಾಗಿವೆ. ಇದೀಗ ಪಂದ್ಯ ಆರಂಭಕ್ಕೆ ಒಂದು ದಿನ ಮೊದಲು ಪತ್ರಿಕಾಗೋಷ್ಠಿ ನಡೆಸಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma), ಪಾಕಿಸ್ತಾನದ ಪತ್ರಕರ್ತರು ಕೇಳಿದ ಪ್ರಶ್ನೆಗೆ ಖಡಕ್ ಉತ್ತರ ನೀಡಿದ್ದಾರೆ. ರೋಹಿತ್ ಶರ್ಮಾ ನೀಡಿದ ಈ ಉತ್ತರವನ್ನು ಕೇಳಿ ಪತ್ರಿಕಾಗೋಷ್ಠಿಯಲ್ಲಿ ಸೇರಿದ್ದ ಪ್ರತಿಯೊಬ್ಬ ಕ್ರೀಡಾ ಪತ್ರಕರ್ತರೂ ದಿಗ್ಭ್ರಮೆಗೊಂಡರು.
ಅಷ್ಟಕ್ಕೂ ಈ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ ವರದಿಗಾರನೊಬ್ಬ, ಟೀಂ ಇಂಡಿಯಾ ಈ ವಿಶ್ವಕಪ್ ಗೆಲ್ಲುವ ಫೇವರೆಟ್ ತಂಡ ಎಂಬುದಕ್ಕೆ ಸ್ವಲ್ಪ ವಿವರಣೆ ನೀಡಿ ಎಂದು ನಾಯಕ ರೋಹಿತ್ ಶರ್ಮಾಗೆ ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ರೋಹಿತ್ ಶರ್ಮಾ ಖಡಕ್ ಉತ್ತರವನ್ನು ಸಹ ನೀಡಿದ್ದಾರೆ.
ನನಗೆ ನಂಬಿಕೆ ಇಲ್ಲ: ರೋಹಿತ್ ಶರ್ಮಾ
ಪಾಕ್ ವರದಿಗಾರನ ಪ್ರಶ್ನೆಗೆ ಉತ್ತರಿಸಿದ ರೋಹಿತ್ ಶರ್ಮಾ, ಟಿ20 ವಿಶ್ವಕಪ್‌ನಲ್ಲಿ ಯಾವುದೇ ಫೇವರೆಟ್ ತಂಡ ಅಥವಾ ಅಂಡರ್‌ಡಾಗ್ (ಈ ತಂಡ ಗೆಲ್ಲಬಹುದು ಅಥವಾ ಈ ಆಟಗಾರ ಮಿಂಚಬಹುದು ಅಂತ ಯಾರೂ ನಿರೀಕ್ಷೆ ಇಟ್ಟುಕೊಂಡಿರುವುದಿಲ್ಲ. ಅಂತಹ ಆಟಗಾರ ಇಲ್ಲವೇ ತಂಡವನ್ನು ‘ಅಂಡರ್ ಡಾಗ್ಸ್’ ಎಂದು ಕರೆಯಲಾಗುತ್ತೆ.) ತಂಡ ಎಂಬುದಿಲ್ಲ. ನನಗೆ ಅದರಲ್ಲಿ ನಂಬಿಕೆಯೂ ಇಲ್ಲ. ಇಂತಹ ಸಂಗತಿಗಳು ಹೊರಗೆ ನಡೆಯುತ್ತವೆ ಆದರೆ ನಮ್ಮ ತಂಡದಲ್ಲಿ ಅಂತಹದ್ದೇನೂ ಇಲ್ಲ. ಪಂದ್ಯ ನಡೆಯುವ ದಿನದಂದು ನಾವು ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ನಂಬಿದ್ದೇವೆ.
ಇದನ್ನೂ ಓದಿ: ಮಳೆಯಿಂದಾಗಿ ಭಾರತ- ಕಿವೀಸ್ ಅಭ್ಯಾಸ ಪಂದ್ಯ ರದ್ದು; ರೋಹಿತ್ ಪಡೆಯ ಮುಂದಿನ ಎದುರಾಳಿ ಪಾಕಿಸ್ತಾನ
ಯಾವ ತಂಡ ಅಂಡರ್‌ಡಾಗ್ ಅಥವಾ ಯಾವ ತಂಡ ಫೇವರೆಟ್ ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಅದು ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳು. ಆದರೆ ಸೂಪರ್ 12 ಸುತ್ತಿನಲ್ಲಿ ಅಂತಹ ವಿಷಯಗಳಿಗೆ ಯಾವುದೇ ಅರ್ಥವಿಲ್ಲ. ಪಂದ್ಯದ ದಿನದಂದು ನೀವು ಹೇಗೆ ಆಡುತ್ತೀರಿ ಮತ್ತು ನೀವು ಯಾವ ಮನಸ್ಥಿತಿಯೊಂದಿಗೆ ಮೈದಾನಕ್ಕೆ ಹೋಗುತ್ತೀರಿ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ ಎಂದಿದ್ದಾರೆ.
ದೊಡ್ಡ ಸವಾಲಾಗಿದೆ
ಆದಾಗ್ಯೂ, ಇನ್ನೊಂದು ಪ್ರಶ್ನೆಗೆ ಉತ್ತರವಾಗಿ ರೋಹಿತ್, ಐಸಿಸಿ ಪ್ರಶಸ್ತಿಗಾಗಿ ಕಾಯುವಿಕೆಯನ್ನು ಕೊನೆಗೊಳಿಸುವುದು ತನಗೆ ದೊಡ್ಡ ಸವಾಲಾಗಿದೆ ಎಂದು ಒಪ್ಪಿಕೊಂಡರು. ಭಾರತದಂತಹ ತಂಡದಿಂದ ನಿರೀಕ್ಷೆಗಳು ಹೆಚ್ಚಿವೆ, ಆದರೆ ಯಾವುದೇ ರೀತಿಯ ಒತ್ತಡವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ರೋಹಿತ್ ಒಪ್ಪಿಕೊಂಡಿದಲ್ಲದೆ, ಉತ್ತಮವಾಗಿ ಆಡಿದರೆ ಮಾತ್ರ ಟೂರ್ನಿ ಗೆಲ್ಲಲು ಸಾಧ್ಯ ಎಂದರು.
ಪಾಕ್ ಪ್ರವಾಸದ ಬಗ್ಗೆ ರೋಹಿತ್ ಹೇಳಿದ್ದಿದು
ಇನ್ನೂ ಪಾಕ್ ಪ್ರವಾಸದ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, “ಸದ್ಯಕ್ಕೆ ಈ ವಿಶ್ವಕಪ್‌ನತ್ತ ಗಮನಹರಿಸೋಣ, ಏಕೆಂದರೆ ಈ ಟೂರ್ನಿ ನಮಗೆ ಮುಖ್ಯವಾಗಿದೆ. ಮುಂದೆ ಏನಾಗುತ್ತದೆ ಎಂಬುದರ ಬಗ್ಗೆ ನಾವು ಈಗ ಚಿಂತಿಸುವುದಿಲ್ಲ. ಅಲ್ಲದೆ ಅದರ ಬಗ್ಗೆ ಯೋಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ, ಬಿಸಿಸಿಐ ಅದರ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ನಾವು ಸದ್ಯಕ್ಕೆ ನಾಳಿನ ಪಂದ್ಯದ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ ಎಂದು ರೋಹಿತ್ ಹೇಳಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:09 am, Sat, 22 October 22