T20 World Cup 2021: ಮೊನ್ನೆ ತನಕ ಡೆಲಿವರಿ ಬಾಯ್: ಈಗ ಟಿ20 ವಿಶ್ವಕಪ್ ಹೀರೋ

| Updated By: ಝಾಹಿರ್ ಯೂಸುಫ್

Updated on: Oct 18, 2021 | 10:40 PM

T20 World Cup 2021: ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಸೋಲುಣಿಸಿ ಸ್ಕಾಟ್ಲೆಂಡ್ ಗೆಲುವಿನೊಂದಿಗೆ ಚುಟುಕು ಕ್ರಿಕೆಟ್ ಕದನದ ಅಭಿಯಾನ ಆರಂಭಿಸಿದೆ.

T20 World Cup 2021: ಮೊನ್ನೆ ತನಕ ಡೆಲಿವರಿ ಬಾಯ್: ಈಗ ಟಿ20 ವಿಶ್ವಕಪ್ ಹೀರೋ
Chris Greaves
Follow us on

ಭಾನುವಾರದವರೆಗೂ ಕ್ರಿಸ್ ಗ್ರೀವ್ಸ್ ಎಂಬ ಆಟಗಾರ ಕ್ರಿಕೆಟ್ ಜಗತ್ತಿನಲ್ಲಿ ಅಪರಿಚಿತ. ಅದರಲ್ಲೂ ಸ್ಕಾಟ್ಲೆಂಡ್​ ಕ್ರಿಕೆಟ್​ ಪ್ರೇಮಿಗಳಿಗೂ ಇಂತಹ ಒಬ್ಬ ಆಟಗಾರನಿದ್ದಾನೆ ಎಂಬುದು ಕೂಡ ಗೊತ್ತಿರಲಿಲ್ಲ. ಇದಾಗ್ಯೂ ಕೆಲವರಿಗಂತು ಗ್ರೀವ್ಸ್​ ಮುಖ ಪರಿಚಯವಿದೆ. ಹೀಗಾಗಿಯೇ ಈತನನ್ನು ಟಿ20 ವಿಶ್ವಕಪ್​ ತಂಡದಲ್ಲಿ ಕಂಡಾಗ ಹೌಹಾರಿದ್ದರು. ಏಕೆಂದರೆ ಮೊನ್ನೆ ಮೊನ್ನೆ ತನಕ ನಮ್ಮ ಏರಿಯಾದಲ್ಲಿ ಡೆಲಿವರಿ ಬಾಯ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ಸ್ಕಾಟ್ಲೆಂಡ್ ಪರ ಬ್ಯಾಟಿಂಗ್ ಮಾಡಲು ಇಳಿದಿದ್ದರು. ಹೀಗಾಗಿಯೇ ಕ್ರಿಸ್ ಗ್ರೀವ್ಸ್ ಎಂಬ ಡೆಲಿವರಿ ಬಾಯ್​ ಅನ್ನು ಟಿವಿಯಲ್ಲಿ ನೋಡಿದಾಗ ಸ್ಕಾಟಿಷ್ ಕ್ರಿಕೆಟ್​ ಪ್ರೇಮಿಗಳು ಆಶ್ಚರ್ಯಚಕಿತರಾಗಿದ್ದರು.

ಹೌದು…ಸಾಧನೆಗೆ ಯಾವುದು ಕೂಡ ಅಡ್ಡಿಯಿಲ್ಲ ಎಂಬುದಕ್ಕೆ ಕ್ರಿಸ್ ಗ್ರೀವ್ಸ್​ ಉತ್ತಮ ಉದಾಹರಣೆ. ಕ್ರಿಕೆಟಿಗನಾಗಬೇಕೆಂದು ಕನಸು ಕಂಡಿದ್ದ ಗ್ರೀವ್ಸ್ ಬಡತನವೇ ದೊಡ್ಡ ಸಮಸ್ಯೆಯಾಗಿತ್ತು. ಹೀಗಾಗಿಯೇ ದಕ್ಷಿಣ ಆಫ್ರಿಕಾದಿಂದ ಸ್ಕಾಟ್ಲೆಂಡ್​ನತ್ತ ಪ್ರಯಾಣ ಬೆಳೆಸಿದ್ದರು. ಅಲ್ಲೇ ಪೌರತ್ವ ಪಡೆದು ಅಲ್ಲೇ ಡೆಲಿವರಿ ಬಾಯ್​ ಆಗಿ ಜೀವನ ನಡೆಸಲಾರಂಭಿಸಿದ್ದರು.

ಇದಾಗ್ಯೂ ಕ್ರಿಕೆಟ್​ನಿಂದ ಮಾತ್ರ ದೂರವಾಗಿರಲಿಲ್ಲ. ಅದರಲ್ಲೂ ಟಿ20 ಕ್ರಿಕೆಟ್​ ಆಡುವಷ್ಟು ಪ್ರತಿದಿನ ಸಮಯ ಹೊಂದಿಸಿಕೊಳ್ಳುತ್ತಿದ್ದರು. ಕಳೆದ ಕೆಲ ವರ್ಷಗಳಿಂದ ಹೀಗೆ ಸಮಯ ಹೊಂದಿಸಿ ನಡೆಸಿದ ಕಠಿಣ ಪರಿಶ್ರಮಕ್ಕೆ ಕೊನೆಗೂ ಫಲ ಸಿಕ್ಕಿದೆ. ಅದರಂತೆ ಈ ಬಾರಿಯ ಟಿ20 ವಿಶ್ವಕಪ್​ಗಾಗಿ ಆಯ್ಕೆಯಾದ ಸ್ಕಾಟ್ಲೆಂಡ್​ ತಂಡದಲ್ಲಿ ಸ್ಥಾನ ಪಡೆದಿದ್ದರು. ಅಷ್ಟೇ ಅಲ್ಲದೆ ವಾರಗಳ ಹಿಂದೆಯಷ್ಟೇ ಪಪುವಾ ನ್ಯೂಗಿನಿಯಾ ತಂಡದ ವಿರುದ್ದ ತನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಇದಾದ ಬಳಿಕ ಸಿಕ್ಕ 2ನೇ ಅವಕಾಶ ಟಿ20 ವಿಶ್ವಕಪ್​ನ ಎಂಬ ಮಹತ್ವದ ಟೂರ್ನಿಯಲ್ಲಿ ಎಂಬುದು ವಿಶೇಷ.

ಬಾಂಗ್ಲಾದೇಶದ ವಿರುದ್ದದ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಗ್ರೀವ್ಸ್ ಇಡೀ ಪಂದ್ಯದ ಚಿತ್ರಣ ಬದಲಿಸಿ ಹೀರೋ ಎನಿಸಿಕೊಂಡಿದ್ದಾರೆ. ಹೌದು, ಟಿ20 ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಸೋಲುಣಿಸಿ ಸ್ಕಾಟ್ಲೆಂಡ್ ಗೆಲುವಿನೊಂದಿಗೆ ವಿಶ್ವಕಪ್  ಅಭಿಯಾನ ಆರಂಭಿಸಿದೆ. ಅರ್ಹತಾ ಸುತ್ತಿನ 2ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ನೀಡಿದ 140 ರನ್​ ಪ್ರತಿಯಾಗಿ ಬಾಂಗ್ಲಾದೇಶದ 134 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಪಂದ್ಯದಲ್ಲಿ ಸ್ಕಾಟ್ಲೆಂಡ್ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ್ದು ಕ್ರಿಸ್ ಗ್ರೀವ್ಸ್​. ತಂಡ 53 ರನ್​ಗೆ 6 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದಾಗ ಗ್ರೀವ್ಸ್​ ಕಣಕ್ಕಿಳಿದಿದ್ದರು. ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಗ್ರೀವ್ಸ್​ 28 ಎಸೆತಗಳಲ್ಲಿ 45 ರನ್ ಬಾರಿಸಿದ್ದರು. ಈ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಸ್ಕಾಟ್ಲೆಂಡ್​ 20 ಓವರ್​ನಲ್ಲಿ 140 ರನ್ ಗಳಿಸಲು ಸಾಧ್ಯವಾಯಿತು.

ಕಡಿಮೆ ಮೊತ್ತದ ಟಾರ್ಗೆಟ್ ಬೆನ್ನತ್ತಿದ ಬಾಂಗ್ಲಾ ತಂಡಕ್ಕೆ ಬೌಲಿಂಗ್ ಮೂಲಕ ಕೂಡ ಗ್ರೀವ್ಸ್ ಶಾಕ್ ನೀಡಿದ್ದರು. 3 ಓವರ್ ಬೌಲಿಂಗ್ ಮಾಡಿದ್ದ ಗ್ರೀವ್ಸ್​ ಕೇವಲ 19 ರನ್​ಗೆ ಶಕೀಬ್ ಅಲ್ ಹಸನ್ ಹಾಗೂ ಮುಷ್ಫಿಕುರ್ ರಹೀಮ್ ವಿಕೆಟ್ ಉರುಳಿಸಿದ್ದರು. ಕ್ರಿಸ್ ಗ್ರೀವ್ಸ್ ಅವರ ಈ ಆಲ್​ರೌಂಡರ್ ಆಟದದಿಂದಾಗಿ​ ಬಾಂಗ್ಲಾದೇಶದ ವಿರುದ್ದ ಸ್ಕಾಟ್ಲೆಂಡ್ ತಂಡವು 6 ರನ್​ಗಳ ರೋಚಕ ಜಯ ಸಾಧಿಸಿತ್ತು. ಈ ಭರ್ಜರಿ ಪ್ರದರ್ಶನದ ಫಲವಾಗಿ ತಮ್ಮ 2ನೇ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಕ್ರಿಸ್ ಗ್ರೀವ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಅಂದಹಾಗೆ 31 ವರ್ಷದ ಕ್ರಿಸ್ ಗ್ರೀವ್ಸ್​ ಸ್ಕಾಟ್ಲೆಂಡ್ ತಂಡದ ಖಾಯಂ ಸದಸ್ಯರಲ್ಲ. ತಂಡದಲ್ಲಿ ಗುತ್ತಿಗೆ ಪಡೆದ ಆಟಗಾರನಂತು ಅಲ್ಲವೇ ಅಲ್ಲ. ಒಂದು ತಿಂಗಳ ಹಿಂದೆಯಷ್ಟೇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು. ಹೀಗಾಗಿಯೇ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಗ್ರೀವ್ಸ್​ ಅಮೆಜಾನ್ ಸಂಸ್ಥೆಯ ಪಾರ್ಸಲ್ ಡೆಲಿವರಿ ಡ್ರೈವರ್ ಹಾಗೂ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ಅದೇ ಕ್ರಿಸ್ ಗ್ರೀವ್ಸ್​ ಇಡೀ ದೇಶವೇ ಹೆಮ್ಮೆ ಪಡುವಂತಹ ಗೆಲುವು ತಂದುಕೊಟ್ಟು ಸ್ಕಾಟ್ಲೆಂಡ್​ನ ವಿಶ್ವಕಪ್ ಹೀರೋ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: T20 World Cup 2021: ಕೆಎಲ್ ರಾಹುಲ್​ ಆರಂಭಿಕನಲ್ವಾ: ಕೊಹ್ಲಿ ಸಜ್ಜಾಗಿರಲು ಹೇಳಿದ್ದು ಯಾರಿಗೆ?

ಇದನ್ನೂ ಓದಿ:T20 World Cup 2021: ಟಿ20 ವಿಶ್ವಕಪ್ ಗೆದ್ದವರಿಗೆ ಸಿಗೋ ಹಣವೆಷ್ಟು? ಸೋತರೆ ಸಿಗೋದೆಷ್ಟು? 

ಇದನ್ನೂ ಓದಿ: T20 World Cup Winners: ಟಿ20 ವಿಶ್ವಕಪ್​ನಲ್ಲಿ ಯಾರು ವಿನ್ನರ್, ಯಾರು ರನ್ನರ್: ಇಲ್ಲಿದೆ ಸಂಪೂರ್ಣ ಪಟ್ಟಿ

(From Amazon delivery driver to Scotland’s cricket hero)