T20 World Cup 2021: ಕೆಎಲ್ ರಾಹುಲ್ ಆರಂಭಿಕನಲ್ವಾ: ಕೊಹ್ಲಿ ಸಜ್ಜಾಗಿರಲು ಹೇಳಿದ್ದು ಯಾರಿಗೆ?
Team India: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಇಶಾನ್ ಕಿಶನ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿದ್ದರು. ಈ ಅವಕಾಶವನ್ನು ಬಳಸಿಕೊಂಡ ಕಿಶನ್ ಕೇವಲ 25 ಎಸೆತಗಳಿಗೆ 50 ರನ್ ಬಾರಿಸಿ ಮಿಂಚಿದರು.
ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿಸಿ ಟೀಮ್ ಇಂಡಿಯಾ (Team India) ಆಟಗಾರರು ಟಿ20 ವಿಶ್ವಕಪ್ಗೆ (T20 World Cup 2021) ಸಜ್ಜಾಗಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಕೆಲ ಆಟಗಾರರು ಮಿಂಚಿದರೆ ಇನ್ನೂ ಕೆಲವರು ವಿಫಲರಾಗಿದ್ದಾರೆ. ಹೀಗಾಗಿಯೇ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ 11 (Team India Playing 11) ಹೇಗಿರಲಿದೆ ಎಂಬುದು ಇದೀಗ ಕುತೂಹಲ. ಅದರಲ್ಲೂ ಭಾರತದ ಪರ ಯಾರು ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆ. ಏಕೆಂದರೆ ಐಪಿಎಲ್ ವೇಳೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆ ಇದೀಗ ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳುವಂತೆ ಮಾಡಿದೆ. ಹೌದು, ಸೆಪ್ಟೆಂಬರ್ 26ರಂದು ದುಬೈನಲ್ಲಿ ಆರ್ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹೀನಾಯವಾಗಿ ಸೋತಿತ್ತು.
ಆ ಪಂದ್ಯದಲ್ಲಿ ಇಶಾನ್ ಕಿಶನ್ 12 ಎಸೆತಗಳಲ್ಲಿ ಕೇವಲ 9 ರನ್ ಬಾರಿಸಿ ಔಟಾಗಿದ್ದರು. ಹೀಗೆ ಕಳಪೆ ಫಾರ್ಮ್ನ ಟೆನ್ಶನ್ನಲ್ಲಿದ್ದ ಕಿಶನ್ ಅವರನ್ನು ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಸಮಾಧಾನಪಡಿಸಿದ್ದರು. ಆರ್ಸಿಬಿ ನಾಯಕ ಕೊಹ್ಲಿ ಯುವ ಆಟಗಾರನನ್ನು ಸಮಾಧಾನ ಪಡಿಸುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾಗ್ಯೂ ಅಂದು ವಿರಾಟ್ ಕೊಹ್ಲಿ ಇಶಾನ್ ಕಿಶಾನ್ ಬಳಿ ಮಾತನಾಡಿದ್ದೇನು ಎಂಬ ವಿಚಾರ ಮಾತ್ರ ಬಹಿರಂಗವಾಗಿರಲಿಲ್ಲ.
ಇದೀಗ ಅಂದು ಕೊಹ್ಲಿ ಹೇಳಿದ್ದೇನು ಎಂಬುದನ್ನು ಖುದ್ದು ಇಶಾನ್ ಕಿಶನ್ ಬಹಿರಂಗಪಡಿಸಿದ್ದಾರೆ. ಪಂದ್ಯದ ಬಳಿಕ ನಾನು ನನ್ನ ಕಳಪೆ ಫಾರ್ಮ್ ಬಗ್ಗೆ ವಿರಾಟ್ ಕೊಹ್ಲಿ ಜೊತೆ ನೋವು ತೋಡಿಕೊಂಡೆ. ಈ ವೇಳೆ ಕೊಹ್ಲಿ, ‘ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಓಪನರ್ ನೀನೇ ಎಂದಿದ್ದರು. ಅಲ್ಲದೆ ಅದಕ್ಕಾಗಿ ಈಗಲೇ ಸಿದ್ಧವಾಗಬೇಕಿದೆ. ಯಾವುದೇ ಟೆನ್ಶನ್ ತಗೋಬೇಡ…ಚೆನ್ನಾಗಿ ಆಡು ಎಂದು ಆತ್ಮ ವಿಶ್ವಾಸ ಹೆಚ್ಚಿಸಿದ್ದರು ಎಂದು ಇಶಾನ್ ಕಿಶನ್ ತಿಳಿಸಿದ್ದಾರೆ.
ಇದಾಗಿ 2 ಪಂದ್ಯಗಳಲ್ಲಿ ಕಿಶನ್ ಕಣಕ್ಕಿಳಿದಿರಲಿಲ್ಲ. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಇಶಾನ್ ಕಿಶನ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿದ್ದರು. ಈ ಅವಕಾಶವನ್ನು ಬಳಸಿಕೊಂಡ ಕಿಶನ್ ಕೇವಲ 25 ಎಸೆತಗಳಿಗೆ 50 ರನ್ ಬಾರಿಸಿ ಮಿಂಚಿದರು. ಅಷ್ಟೇ ಅಲ್ಲದೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 32 ಎಸೆತಗಳಿಗೆ 11 ಬೌಂಡರಿ ಮತ್ತು 4 ಸಿಕ್ಸರ್ನೊಂದಿಗೆ 84 ರನ್ ಚಚ್ಚಿದ್ದಾರೆ. ಕೊನೆಯ 2 ಪಂದ್ಯಗಳಲ್ಲಿ ಆರಂಭಿಕನಾಗಿ ಆರ್ಭಟಿಸಿದ ಕಿಶನ್ ಇದೀಗ ಟಿ20 ವಿಶ್ವಕಪ್ನಲ್ಲಿ ಓಪನರ್ ಆಗಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಒಂದು ವೇಳೆ ಕಿಶನ್ ರೋಹಿತ್ ಶರ್ಮಾ ಜೊತೆ ಆರಂಭಿಕನಾದರೆ, ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ. ಇತ್ತ ರಾಹುಲ್ ಕೂಡ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಯಾರನ್ನು ಆರಂಭಿಕನಾಗಿ ಕಣಕ್ಕಿಳಿಸಲಿದ್ದಾರೆ ಕಾದು ನೋಡಬೇಕಿದೆ.
ಇದನ್ನೂ ಓದಿ: 1985 ರಿಂದ 2021: 25 ಕ್ಕೂ ಹೆಚ್ಚು ಬಾರಿ ಬದಲಾದ ಟೀಮ್ ಇಂಡಿಯಾ ಜೆರ್ಸಿ
ಇದನ್ನೂ ಓದಿ: IPL 2021: ಈ ಬಾರಿಯ ಐಪಿಎಲ್ನಲ್ಲಿ ಕಾರು ಸಿಕ್ಕಿದ್ದು ಯಾರಿಗೆ ಗೊತ್ತಾ?
ಇದನ್ನೂ ಓದಿ: IPL 2021 award winners: ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಪಟ್ಟಿ
(Ishan Kishan to open for India in T20 World Cup 2021?)
Published On - 4:38 pm, Mon, 18 October 21