‘3 ಬಾರಿ ಆತ್ಮಹತ್ಯೆಗೆ ಮುಂದಾಗಿದ್ದೆ’! ರೋಹಿತ್ ಬಳಿ ಅಳಲು ತೋಡಿಕೊಂಡಿದ್ರು ಮೊಹಮ್ಮದ್ ಶಮಿ; ವಿಡಿಯೋ ನೋಡಿ

|

Updated on: Nov 03, 2023 | 5:58 PM

Mohammed Shami: ಟೀಂ ಇಂಡಿಯಾದಲ್ಲಿ ಇಂದು ಸೂಪರ್ ಸ್ಟಾರ್ ಎನಿಸಿಕೊಂಡಿರುವ ಶಮಿ ಒಂದಲ್ಲ, ಎರಡಲ್ಲ.. ಬರೋಬ್ಬರಿ ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಚಿಂತಿಸಿದ್ದರಂತೆ. ಕೋವಿಡ್ ಸಮಯದಲ್ಲಿ ಲಾಕ್‌ಡೌನ್ ವಿಧಿಸಿದ್ದಾಗ, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿದ್ದ ಶಮಿ, ಸ್ವತಃ ಈ ವಿಚಾರವನ್ನು ಬಹಿರಂಗಪಡಿಸಿದ್ದರು.

‘3 ಬಾರಿ ಆತ್ಮಹತ್ಯೆಗೆ ಮುಂದಾಗಿದ್ದೆ’! ರೋಹಿತ್ ಬಳಿ ಅಳಲು ತೋಡಿಕೊಂಡಿದ್ರು ಮೊಹಮ್ಮದ್ ಶಮಿ; ವಿಡಿಯೋ ನೋಡಿ
ಮೊಹಮ್ಮದ್ ಶಮಿ
Follow us on

ಗುರುವಾರ ನಡೆದ ವಿಶ್ವಕಪ್ (ICC World Cup 2023) ಪಂದ್ಯದಲ್ಲಿ ಟೀಂ ಇಂಡಿಯಾ, ಶ್ರೀಲಂಕಾ (India vs Sri Lanka) ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯವನ್ನು ರೋಹಿತ್ ಪಡೆ 302 ರನ್‌ಗಳ ಅಂತರದಿಂದ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 357 ರನ್​ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಕೇವಲ 55 ರನ್​ಗಳಿಗೆ ಆಲೌಟ್ ಆಯಿತು. ಭಾರತದ ಪರ ವೇಗಿ ಮೊಹಮ್ಮದ್ ಶಮಿ (Mohammed Shami) ಶ್ರೀಲಂಕಾವನ್ನು ಅಲ್ಪ ರನ್​ಗಳಿಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಶಮಿ ಕೇವಲ 18 ರನ್ ನೀಡಿ ಪ್ರಮುಖ ಐದು ವಿಕೆಟ್‌ಗಳನ್ನು ಪಡೆದರು. ಇದರೊಂದಿಗೆ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.

ಇಂದು ಶಮಿ ಭಾರತ ಮಾತ್ರವಲ್ಲದೆ ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಆದರೆ ಇದೇ ಶಮಿ ಕೆಲವೇ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದ ಸಮಯವೊಂದಿತ್ತು ಎಂದರೆ ನೀವು ನಂಬುತ್ತೀರಾ. ಹೌದು ಇಂದು ಟೀಂ ಇಂಡಿಯಾದಲ್ಲಿ ಸೂಪರ್ ಸ್ಟಾರ್ ಎನಿಸಿಕೊಂಡಿರುವ ಶಮಿ ಒಂದಲ್ಲ, ಎರಡಲ್ಲ.. ಬರೋಬ್ಬರಿ ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಚಿಂತಿಸಿದ್ದರಂತೆ. ಕೋವಿಡ್ ಸಮಯದಲ್ಲಿ ಲಾಕ್‌ಡೌನ್ ವಿಧಿಸಿದ್ದಾಗ, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿದ್ದ ಶಮಿ, ಸ್ವತಃ ಈ ವಿಚಾರವನ್ನು ಬಹಿರಂಗಪಡಿಸಿದ್ದರು.

ವಿಶ್ವಕಪ್​ಗೂ ಮುನ್ನ ಶಮಿಗೆ ಬಿಗ್ ರಿಲೀಫ್; ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಜಾಮೀನು ಮಂಜೂರು

ಆತ್ಮಹತ್ಯೆಗೆ ಚಿಂತಿಸಿದ್ದೆ; ಶಮಿ

ವಿಶ್ವಕಪ್​ನಲ್ಲಿ ಟೀಂ ಇಂಡಿಯಾದ ಅಜೇಯ ಓಟಕ್ಕೆ ಪ್ರಮುಖ ಕೊಡುಗೆ ನೀಡಿದವರ ಪೈಕಿ ಮೊಹಮ್ಮದ್ ಶಮಿ ಕೂಡ ಒಬ್ಬರು. ಆದರೆ ಕೆಲವು ದಿನಗಳ ಹಿಂದೆ ಶಮಿ ವೃತ್ತಿ ಬದುಕು ಹೀಗಿರಲಿಲ್ಲ. ಅವರಿಗೆ ಟೀಂ ಇಂಡಿಯಾದಲ್ಲಿ ಅಪರೂಪಕ್ಕೊಮ್ಮೆ ಅವಕಾಶಗಳು ಸಿಗಲಾರಂಭಿಸಿದವು. ಇದರಿಂದ ಶಮಿ ಸಾಕಷ್ಟು ದಿನಗಳವರೆಗೆ ಟೀಂ ಇಂಡಿಯಾದಿಂದ ಹೊರಗುಳಿಯಬೇಕಾಯಿತು. ಅಲ್ಲದೆ ಕೌಟುಂಬಿಕ ಜೀವನವೂ ಸರಿಯಾಗಿರಲಿಲ್ಲ. ಇದರಿಂದ ನಾನು ಆತ್ಮಹತ್ಯೆಗೆ ಚಿಂತಿಸಿದ್ದೆ. ಆದರೆ ನನ್ನ ಕುಟುಂಬದವರು ನನ್ನನ್ನು ಕಾಪಾಡಿದರು ಎಂದಿದ್ದಾರೆ.

ಈ ಬಗ್ಗೆ ವಿಸ್ತೃತವಾಗಿ ಮಾತನಾಡಿರುವ ಶಮಿ, 2015 ರ ವಿಶ್ವಕಪ್ ನಂತರ ನಾನು ಇಂಜುರಿಗೆ ಒಳಗಾದೆ. ಇದರಿಂದ ಚೇತರಿಸಿಕೊಳ್ಳಲು 18 ತಿಂಗಳುಗಳನ್ನು ತೆಗೆದುಕೊಂಡವು. ಇಂಜುರಿಯಿಂದ ಚೇತರಿಸಿಕೊಂಡ ಬಳಿಕ ಐಪಿಎಲ್‌ಗೆ ಕೆಲವು ದಿನಗಳ ಮೊದಲು ಮತ್ತೆ ಅಪಘಾತಕ್ಕೀಡಾದೆ . ಏತನ್ಮಧ್ಯೆ, ಕುಟುಂಬದಲ್ಲಿ ಸಮಸ್ಯೆಗಳು ಎದ್ದವು. ಇದರಿಂದಾಗಿ ಕೌಟುಂಬಿಕ ವಿಚಾರಗಳು ಮಾಧ್ಯಮಗಳಲ್ಲಿ ಬರಲಾರಂಭಿಸಿದವು. ಇದರಿಂದ ನಾನು ತುಂಬಾ ಕುಗ್ಗಿ ಹೋದೆ. ಈ ಅವಧಿಯಲ್ಲಿ ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆ ಎಂದು ಶಮಿ ಹೇಳಿದ್ದಾರೆ.

ಹೆಂಡತಿಯೊಂದಿಗೆ ವಿವಾದ

ವಾಸ್ತವವಾಗಿ ಕೆಲವು ವರ್ಷಗಳ ಹಿಂದೆ ಶಮಿ ತಮ್ಮ ಪತ್ನಿ ಹಸಿನ್ ಜಹಾನ್ ಜೊತೆ ಜಗಳ ಮಾಡಿಕೊಂಡಿದ್ದರು. ಹೀಗಾಗಿ ಶಮಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಅವರ ಪತ್ನಿ ಕೌಟುಂಬಿಕ ದೌರ್ಜನ್ಯ ಸೇರಿದಂತೆ ಹಲವು ಆರೋಪಗಳನ್ನು ಮಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ವಿಷಯ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಆ ಬಳಿಕ ಇಬ್ಬರೂ ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು. ಈಗಲೂ ಈ ಇಬ್ಬರ ಪ್ರಕರಣ ನ್ಯಾಯಾಲಯದಲ್ಲಿ ಇನ್ನೂ ನಡೆಯುತ್ತಿದೆ. ಇದು ಶಮಿಗೆ ಸಾಕಷ್ಟು ಮಾನಸಿಕ ಹಿಂಸೆ ನೀಡಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:54 pm, Fri, 3 November 23