ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್ ಆಡ್ತಾರಾ: ಗಂಭೀರ್ ಹೇಳಿದ್ದೇನು?

|

Updated on: Jul 22, 2024 | 11:56 AM

2027 ರಲ್ಲಿ ಸೌತ್ ಆಫ್ರಿಕಾ, ನಮೀಬಿಯಾ ಮತ್ತು ಝಿಂಬಾಬ್ವೆ ಜಂಟಿಯಾಗಿ ಆಯೋಜಿಸಲಿರುವ ಏಕದಿನ ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳಲು ಟೀಮ್ ಇಂಡಿಯಾದ ಕೋಚ್ ಗೌತಮ್ ಗಂಭೀರ್ ಕಡೆಯಿಂದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಬೆಂಬಲ ವ್ಯಕ್ತವಾಗಿದೆ. ಆದರೆ ಮುಂದಿನ ಮೂರು ವರ್ಷಗಳವರೆಗೆ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಕಾಣಿಸಿಕೊಳ್ಳಬೇಕಾದ ಸವಾಲು ರೋಹಿತ್ ಹಾಗೂ ವಿರಾಟ್ ಕೊಹ್ಲಿ ಮುಂದಿದೆ.

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್ ಆಡ್ತಾರಾ: ಗಂಭೀರ್ ಹೇಳಿದ್ದೇನು?
Virat-GG-Rohit
Follow us on

ಟೀಮ್ ಇಂಡಿಯಾದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ತಮ್ಮ ಕಾರ್ಯಾರಂಭಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ್ದಾರೆ. ಮುಂಬೈನಲ್ಲಿ ಸೋಮವಾರ ನಡೆದ ಈ ಪತ್ರಿಕಾಗೋಷ್ಠಿಯಲ್ಲಿ ಗಂಭೀರ್ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್​ ಭವಿಷ್ಯದ ಬಗ್ಗೆಯೂ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮುಂಬರುವ ಏಕದಿನ ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಗೌತಮ್ ಗಂಭೀರ್, ಇಬ್ಬರು ಆಟಗಾರರು ಪ್ರಮುಖ ಪಂದ್ಯಗಳ ವೇಳೆ ಅವರು ಏನು ಮಾಡಬಲ್ಲೆವು ಎಂಬುದನ್ನು ಈಗಾಗಲೇ ತೋರಿಸಿದ್ದಾರೆ. ಅದು ಟಿ20 ವಿಶ್ವಕಪ್ ಆಗಿರಲಿ ಅಥವಾ ಏಕದಿನ ವಿಶ್ವಕಪ್ ಆಗಿರಲಿ. ಎರಡು ಸ್ವರೂಪಗಳ ಪ್ರಮುಖ ಟೂರ್ನಿಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ.

ಹಾಗಾಗಿ ನಾನು ಈ ಬಗ್ಗೆ  ಸ್ಪಷ್ಟವಾಗಿ ಹೇಳಬಹುದಾದ ಒಂದು ವಿಷಯವೆಂದರೆ ಅವರಿಬ್ಬರಲ್ಲಿ ಸಾಕಷ್ಟು ಕ್ರಿಕೆಟ್ ಉಳಿದಿದೆ ಎಂಬುದಷ್ಟೇ. ಇಲ್ಲಿ ಮುಖ್ಯವಾಗಿ, ಚಾಂಪಿಯನ್ಸ್ ಟ್ರೋಫಿ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಬರುತ್ತಿದೆ. ಈ ಪಂದ್ಯಗಳಲ್ಲಿ ಅವರಿಂದ ಉತ್ತಮ ಕೊಡುಗೆ ಮೂಡಿಬರಲಿದೆ ಎಂಬುದು ನನ್ನ ಭಾವನೆ.

ಅಲ್ಲದೆ ಮುಂಬರುವ ದಿನಗಳಲ್ಲಿ ಅವರು ತಮ್ಮ ಫಿಟ್​ನೆಸ್ ಅನ್ನು ಉಳಿಸಿಕೊಳ್ಳಲು ಸಾಧ್ಯವಾದರೆ, 2027 ರ ವಿಶ್ವಕಪ್​ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಅದನ್ನು ನಿರ್ಧರಿಸುವುದು ನಾನಲ್ಲ ಎಂಬುದು. ಇದು ಅವರು ವೈಯಕ್ತಿಕ ನಿರ್ಧಾರವಾಗಿರುತ್ತದೆ ಎಂದು ಗಂಭೀರ್ ಹೇಳಿದ್ದಾರೆ.

ಏಕೆಂದರೆ ಅವರಲ್ಲಿ ಎಷ್ಟು ಕ್ರಿಕೆಟ್ ಉಳಿದಿದೆ ಎಂದು ನಾನು ಹೇಳಲಾರೆ. ಅಂತಿಮವಾಗಿ, ಅದು ಅವರಿಗೆ ಬಿಟ್ಟದ್ದು. ತಂಡದ ಯಶಸ್ಸಿಗೆ ಅವರು ಎಷ್ಟು ಕೊಡುಗೆ ನೀಡಬಹುದು ಎಂಬುದು ಆಟಗಾರರಿಗೆ ಬಿಟ್ಟದ್ದು. ಹೀಗಾಗಿ 2027ರ ಏಕದಿನ ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದು ಅವರೇ ನಿರ್ಧರಿಸಲಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ.

ನನ್ನ ಪ್ರಕಾರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮತ್ತಷ್ಟು ಕೊಡುಗೆ ನೀಡಬಲ್ಲ ಆಟಗಾರರು. ಪ್ರತಿ ತಂಡಗಳು ಇಂತಹ ಆಟಗಾರರನ್ನು ಹೊಂದಲು ಇಷ್ಟಪಡುತ್ತದೆ. ಹೀಗಾಗಿ 2027 ರವರೆಗೆ ಫಿಟ್​ನೆಸ್ ಉಳಿಸಿಕೊಂಡು ಏಕದಿನ ಕ್ರಿಕೆಟ್​ನಲ್ಲಿ ಮುಂದುವರೆದರೆ ಏಕದಿನ ವಿಶ್ವಕಪ್​ನಲ್ಲೂ ಕಾಣಿಸಿಕೊಳ್ಳಬಹುದು ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಏಕದಿನ ಮತ್ತು ಟೆಸ್ಟ್​ ತಂಡಗಳಲ್ಲಿ ಪ್ರಮುಖ ಆಟಗಾರರಾಗಿ ಮುಂದುವರೆಯಲಿದ್ದಾರೆ ಎಂದು ತಿಳಿಸಿರುವ ಗಂಭೀರ್, ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಬಳಿಕ ಟೀಮ್ ಇಂಡಿಯಾದಲ್ಲಿ ಮುಂದುವರೆಯುವುದು ಅವರಿಗೆ ಬಿಟ್ಟ ವಿಷಯ. ಹೀಗಾಗಿ 2025ರ ಬಳಿಕ ಅವರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಗೊತ್ತಿಲ್ಲ.

ಆದರೆ ವಿರಾಟ್ ಮತ್ತು ರೋಹಿತ್ ಇನ್ನೂ ವಿಶ್ವ ದರ್ಜೆಯ ಆಟಗಾರರು. ನಿಸ್ಸಂಶಯವಾಗಿ ಯಾವುದೇ ತಂಡವು ಸಾಧ್ಯವಾದಷ್ಟು ಕಾಲ ಅವರಿಬ್ಬರನ್ನು ಹೊಂದಲು ಬಯಸುತ್ತದೆ. ಹೀಗಾಗಿ ಏಕದಿನ ವಿಶ್ವಕಪ್ 2027 ರಲ್ಲಿ ಅವರಿಬ್ಬರು ಕಾಣಿಸಿಕೊಳ್ಳುವುದನ್ನು ಎದುರು ನೋಡುತ್ತಿರುವುದಾಗಿ ಗೌತಮ್ ಗಂಭೀರ್ ಹೇಳಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿದರೆ, ಯಾವ ತಂಡಕ್ಕೆ ಚಾನ್ಸ್?

2027ರ ಏಕದಿನ ವಿಶ್ವಕಪ್​ಗೆ ಆಫ್ರಿಕ್ ದೇಶಗಳು ಜಂಟಿಯಾಗಿ ಆತಿಥ್ಯವಹಿಸಲಿದೆ. ಅದರಂತೆ ಸೌತ್ ಆಫ್ರಿಕಾ, ನಮೀಬಿಯಾ ಹಾಗೂ ಝಿಂಬಾಬ್ವೆಯಲ್ಲಿ ಮುಂಬರುವ ಏಕದಿನ ವಿಶ್ವಕಪ್ ನಡೆಯಲಿದೆ. ಆದರೆ ಈ ವೇಳೆಗೆ 40 ವರ್ಷಕ್ಕೆ ಕಾಲಿಡಲಿರುವ ರೋಹಿತ್ ಶರ್ಮಾ ಹಾಗೂ 38 ವರ್ಷದವರಾಗಲಿರುವ ವಿರಾಟ್ ಕೊಹ್ಲಿ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರಾ ಎಂಬುದೇ ಈಗ ಕುತೂಹಲ.

 

 

Published On - 11:56 am, Mon, 22 July 24