Gautam Gambhir: ಮುಖ್ಯ ಕೋಚ್ ಆಗುವ ಮುನ್ನವೇ ಯೋ-ಯೋ ಟೆಸ್ಟ್ ಬಗ್ಗೆ ಗೌತಮ್ ಗಂಭೀರ್ ಅಪಸ್ವರ..!

|

Updated on: Jun 13, 2024 | 10:37 PM

Gautam Gambhir: ಪ್ರಸ್ತುತ ಟೀಂ ಇಂಡಿಯಾದ ಮುಖ್ಯ ಕೋಚ್ ರೇಸ್​ನಲ್ಲಿ ಮುಂಚೂಣಿಯಲ್ಲಿರುವ ಗಂಭೀರ್ ಈ ಟೆಸ್ಟ್ ಅನ್ನು ಟೀಕಿಸಿದ್ದಾರೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲ ಎಂಬ ಕಾರಣಕ್ಕೆ ಆಟಗಾರರನ್ನು ತಂಡದಿಂದ ಕೈಬಿಡುವುದು ತಪ್ಪು. ಫಿಟ್ನೆಸ್ ಒಂದು ಅಳತೆಗೋಲಾಗಿರಬೇಕು. ಆದರೆ ಆಟಗಾರ ಫುಲ್ ಫಿಟ್ ಆಗಿದ್ದಾನೆ ಎಂಬುದನ್ನು ಸಾಭಿತು ಪಡಿಸಲು ಈ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂಬುದನ್ನು ನಾನು ಸಹ ಒಪ್ಪುವುದಿಲ್ಲ ಎಂದಿದ್ದಾರೆ.

Gautam Gambhir: ಮುಖ್ಯ ಕೋಚ್ ಆಗುವ ಮುನ್ನವೇ ಯೋ-ಯೋ ಟೆಸ್ಟ್ ಬಗ್ಗೆ ಗೌತಮ್ ಗಂಭೀರ್ ಅಪಸ್ವರ..!
ಗೌತಮ್ ಗಂಭೀರ್
Follow us on

ಭಾರತ ತಂಡದ (Team India) ಮುಂದಿನ ಮುಖ್ಯ ಕೋಚ್ ಯಾರು ಎಂಬುದು ಸದ್ಯದ ಕೋಟ್ಯಂತರ ಭಾರತೀಯ ಅಭಿಮಾನಿಗಳ ಪ್ರಶ್ನೆಯಾಗಿದೆ. ಏಕೆಂದರೆ ಟಿ20 ವಿಶ್ವಕಪ್ (T20 World Cup 2024) ನಂತರ ಪ್ರಸ್ತುತ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯು ಕೊನೆಗೊಳ್ಳುತ್ತದೆ. ಹೀಗಾಗಿ ವಿಶ್ವದ ಬಲಿಷ್ಠ ಕ್ರಿಕೆಟ್ ತಂಡದ ಸಾರಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ. ಈ ನಡುವೆ ಈ ಸ್ಥಾನಕ್ಕೆ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ (Gautam Gambhir) ಆಯ್ಕೆಯಾಗುವುದು ಖಚಿತ ಎಂದು ಹೇಳಲಾಗುತ್ತಿದೆ. ಆದರೆ ತಂಡದ ಮುಖ್ಯ ಕೋಚ್ ಆಗುವ ಮುನ್ನವೇ ಗೌತಮ್ ಗಂಭೀರ್ ಟೀಂ ಇಂಡಿಯಾದಲ್ಲಿ ಆಯ್ಕೆಯ ಮಾನದಂಡವಾಗಿರುವ ಯೋ-ಯೋ ಟೆಸ್ಟ್ (Yo-Yo Test) ಅನ್ನು ಟೀಕಿಸಿದ್ದಾರೆ.

ಅನೇಕ ಆಟಗಾರರಿಗೆ ಗೇಟ್​ಪಾಸ್

ಕಳೆದ ಹಲವು ವರ್ಷಗಳಿಂದ ಭಾರತೀಯ ಕ್ರಿಕೆಟ್‌ನಲ್ಲಿ ಯೋ-ಯೋ ಟೆಸ್ಟ್ ಚರ್ಚೆಯ ವಿಷಯವಾಗಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಈ ಪರೀಕ್ಷೆಯನ್ನು ಆಯ್ಕೆಯ ಮಾನದಂಡವಾಗಿ ಅಳವಡಿಸಲಾಯಿತು. ಕೊರೊನಾ ಮೊದಲು, ಟೀಂ ಇಂಡಿಯಾದಲ್ಲಿ ಆಯ್ಕೆ ಮಾಡಲು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅಗತ್ಯವಾಗಿತ್ತು. ಆದರೆ ಕೊರೊನಾ ಸಮಯದಲ್ಲಿ ಈ ನಿಯಮವನ್ನು ಸಡಿಲಗೊಳಿಸಲಾಯಿತು. ಆದಾಗ್ಯೂ ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ಯುವರಾಜ್ ಸಿಂಗ್, ಸುರೇಶ್ ರೈನಾ, ಅಂಬಟಿ ರಾಯುಡು, ಮೊಹಮ್ಮದ್ ಶಮಿ, ಸಂಜು ಸ್ಯಾಮ್ಸನ್ ಮತ್ತು ವರುಣ್ ಚಕ್ರವರ್ತಿ ಅವರಂತಹ ಅನೇಕ ಆಟಗಾರರು ಈ ಟೆಸ್ಟ್‌ನಲ್ಲಿ ವಿಫಲರಾಗಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.

Gautam Gambhir: ಮುಖ್ಯ ಕೋಚ್ ಹುದ್ದೆಯ ಬಗ್ಗೆ ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್

ಯೋ-ಯೋ ಟೆಸ್ಟ್ ಟೀಕಿಸಿದ ಗಂಭೀರ್

ಪ್ರಸ್ತುತ ಟೀಂ ಇಂಡಿಯಾದ ಮುಖ್ಯ ಕೋಚ್ ರೇಸ್​ನಲ್ಲಿ ಮುಂಚೂಣಿಯಲ್ಲಿರುವ ಗಂಭೀರ್ ಈ ಟೆಸ್ಟ್ ಅನ್ನು ಟೀಕಿಸಿದ್ದಾರೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲ ಎಂಬ ಕಾರಣಕ್ಕೆ ಆಟಗಾರರನ್ನು ತಂಡದಿಂದ ಕೈಬಿಡುವುದು ತಪ್ಪು. ಫಿಟ್ನೆಸ್ ಒಂದು ಅಳತೆಗೋಲಾಗಿರಬೇಕು. ಆದರೆ ಆಟಗಾರ ಫುಲ್ ಫಿಟ್ ಆಗಿದ್ದಾನೆ ಎಂಬುದನ್ನು ಸಾಭಿತು ಪಡಿಸಲು ಈ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂಬುದನ್ನು ನಾನು ಸಹ ಒಪ್ಪುವುದಿಲ್ಲ. ನಾನು ಇದನ್ನು ಒಪ್ಪುವುದಿಲ್ಲ. ಫಿಟ್ನೆಸ್ ನೇರವಾಗಿ ತರಬೇತುದಾರರಿಗೆ ಸಂಬಂಧಿಸಿರಬೇಕು ಎಂದಿದ್ದಾರೆ.

ಆದರೆ ನೀವು ಯೋ-ಯೋ ಪರೀಕ್ಷೆಯ ಕಾರಣದಿಂದ ಯಾರನ್ನಾದರೂ ಆಯ್ಕೆ ಮಾಡದಿದ್ದರೆ, ಅದು ಸರಿಯಾದ ಮಾರ್ಗ ಎಂದು ನಾನು ಭಾವಿಸುವುದಿಲ್ಲ. ನೀವು ಆಟಗಾರರನ್ನು ಅವರ ಪ್ರತಿಭೆ, ಅವರ ಹೋರಾಟದ ಕೌಶಲ್ಯ, ಅವರ ಬೌಲಿಂಗ್ ಕೌಶಲ್ಯದ ಆಧಾರದ ಮೇಲೆ ಆಯ್ಕೆ ಮಾಡಬೇಕು. ಅವರ ಫಿಟ್‌ನೆಸ್‌ ಮೇಲೆ ಕೆಲಸ ಮಾಡುವುದನ್ನು ಮುಂದುವರಿಸುವುದು ಮತ್ತು ದೈಹಿಕವಾಗಿ ಅವರನ್ನು ಸುಧಾರಿಸುವುದು ತರಬೇತುದಾರನ ಕೆಲಸ. ಯಾರಾದರೂ ಯೋ-ಯೋ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ ಎಂದು ತಂಡಕ್ಕೆ ಆಯ್ಕೆಯಾಗದಿದ್ದರೆ, ಅದು ಅವರಿಗೆ ಅನ್ಯಾಯವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಯೋ-ಯೋ ಟೆಸ್ಟ್ ಎಂದರೇನು?

ಯೋ-ಯೋ ಪರೀಕ್ಷೆಯಲ್ಲಿ ಒಟ್ಟು 23 ಹಂತಗಳಿವೆ. ಕ್ರಿಕೆಟಿಗರಿಗೆ ಇದು 5ನೇ ಹಂತದಿಂದ ಪ್ರಾರಂಭವಾಗುತ್ತದೆ. ಇದರ ಪ್ರಕಾರ ಪ್ರತಿಯೊಬ್ಬ ಆಟಗಾರನು ಮೊದಲು 20 ಮೀಟರ್‌ನಷ್ಟು ಅಂತರವನ್ನು ಕ್ರಮಿಸಿ, ಬಳಿಕ ಆರಂಭಿಸಿದ ಜಾಗಕ್ಕೆ ಮತ್ತೆ ವಾಪಸ್ ಬರಬೇಕು. ಅಂದರೆ ಒಟ್ಟು 40 ಮೀಟರ್ ದೂರವನ್ನು ನಿಗದಿತ ಸಮಯದೊಳಗೆ ಓಡಿ ಮುಗಿಸಿರಬೇಕು. ಹಂತಗಳ ಸಂಖ್ಯೆ ಹೆಚ್ಚಾದಂತೆ, ಈ ದೂರವನ್ನು ಕ್ರಮಿಸುವ ಸಮಯವೂ ಕಡಿಮೆಯಾಗುತ್ತದೆ. ಇದರ ಆಧಾರದ ಮೇಲೆ, ಸ್ಕೋರ್ ಅನ್ನು ಸಂಪೂರ್ಣವಾಗಿ ಸಾಫ್ಟ್‌ವೇರ್‌ನಲ್ಲಿ ನಿರ್ಧರಿಸಲಾಗುತ್ತದೆ. ಯೋ-ಯೋ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕನಿಷ್ಠ ಪಕ್ಷ 16.1 ಅಂಕಗಳನ್ನು ಪಡೆಯಲೇಬೇಕು. ಇದಕ್ಕಿಂತ ಕಡಿಮೆ ಅಂಕವನ್ನು ಗಳಿಸಿದವರನ್ನು ಅನುತೀರ್ಣ ಎಂದು ನಿರ್ಧರಿಸಲಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:34 pm, Thu, 13 June 24