ಕ್ರಿಕೆಟ್ ಮೈದಾನದಲ್ಲಿ ನೂರು-ನೂರು ರನ್ ಗಳಿಸುತ್ತಿದ್ದ ಗಂಭೀರ್ ಈಗ ಒಂದು ರೂಪಾಯಿಯಲ್ಲಿ ಬಡವರಿಗೆ ಊಟ ಒದಗಿಸುತ್ತಿದ್ದಾರೆ!
39 ವರ್ಷ ವಯಸ್ಸಿನ ಗಂಭೀರ್ ಅವರ ಸಂಸತ್ ಕ್ಷೇತ್ರದಲ್ಲಿ 10 ವಿಧಾನ ಸಭಾ ಮತಕ್ಷೇತ್ರಗಳಿವೆ. ಈ ಎಲ್ಲಾ 10 ಕ್ಷೇತ್ರಗಳಲ್ಲೂ ಜನ್ ರಸೋಯಿ ಕ್ಯಾಂಟೀನ್ ಆರಂಭಿಸುವ ಗುರಿ ಅವರು ಇಟ್ಟುಕೊಂಡಿದ್ದಾರೆ. ಹಸಿವಿನ ವಿರುದ್ಧ ಅವರು ಸಾರಿರುವ ಸಮರವನ್ನು ಜನ ಪ್ರಶಂಸಿಸುತ್ತಿದ್ದಾರೆ.

ನವದೆಹಲಿ: ಭಾರತದ ಮಾಜಿ ಅರಂಭ ಆಟಗಾರ ಗೌತಮ್ ಗಂಭೀರ್ ಕ್ರಿಕೆಟ್ ಮೈದಾನದಲ್ಲಿರಲಿ ಅಥವಾ ಅವರ ಎರಡನೇ ಇನ್ನಿಂಗ್ಸ್ ಅಗಿರುವ ರಾಜಕೀಯ-ಗಂಭೀರವಾಗಿ ಯೋಚಿಸುವುದನ್ನು ಅವರು ಬಿಡಲಾರರು. ಬಡವರ ಬಗ್ಗೆ ಇವರಿಗಿರುವಷ್ಟು ಕಾಳಜಿ ಬೇರೆ ರಾಜಕಾರಣಿಗಳಿಗೂ ಇದ್ದಿದ್ದರೆ, ದೇಶದ ಎಲ್ಲ ನಿರ್ಗತಿಕರು ಹೊಟ್ಟೆ ತುಂಬಾ ಊಟ ಮಾಡಿ ಕಣ್ತುಂಬಾ ನಿದ್ರೆ ಮಾಡಿರೋರು. ಗಂಭೀರ್ ಅವರ ‘ಜನ್ ರಸೋಯಿ’ ಅಭಿಯಾನ ನಿಮಗೆ ಗೊತ್ತಿರಬಹುದು. ಇದು ತಮ್ಮ ಸಂಸತ್ ಕ್ಷೇತ್ರ ಪೂರ್ವ ದೆಹಲಿಯಲ್ಲಿ ಅವರು ಆರಂಭಿಸಿರುವ ಕ್ಯಾಂಟೀನ್ ವ್ಯವಸ್ಥೆ. ಇಲ್ಲಿ ಬಡವರಿಗೆ ಕೇವಲ ರೂ 1 ರಲ್ಲಿ ಊಟ ಸಿಗುತ್ತದೆ. ‘ಜನ್ ರಸೋಯಿ’ ಕ್ಯಾಂಟೀನನ್ನು ಗಂಭೀರ್ ಮೊದಲ ಬಾರಿಗೆ ಗಾಂಧಿನಗರದಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ ಆರಂಭಿಸಿದರು. ನಂತರ ಈ ವರ್ಷ ಫೆಬ್ರುವರಿಯಲ್ಲಿ ನ್ಯೂ ಅಶೋಕ್ ನಗರ್ನಲ್ಲಿ ಎರಡನೇ ಶಾಖೆ ಶುರುಮಾಡಿದರು. ಇಂದು (ಶುಕ್ರವಾರ) ಅವರ ಕಚೇರಿ ನೀಡಿರುವ ಮಾಹಿತಿ ಪ್ರಕಾರ ಪತ್ಪರ್ಗಂಜ್ನಲ್ಲಿ ಮೂರನೇ ಬ್ರ್ಯಾಂಚ್ ಆರಂಭಗೊಂಡಿದೆ.
39 ವರ್ಷ ವಯಸ್ಸಿನ ಗಂಭೀರ್ ಅವರ ಸಂಸತ್ ಕ್ಷೇತ್ರದಲ್ಲಿ 10 ವಿಧಾನ ಸಭಾ ಮತಕ್ಷೇತ್ರಗಳಿವೆ. ಈ ಎಲ್ಲಾ 10 ಕ್ಷೇತ್ರಗಳಲ್ಲೂ ಜನ್ ರಸೋಯಿ ಕ್ಯಾಂಟೀನ್ ಆರಂಭಿಸುವ ಗುರಿ ಅವರು ಇಟ್ಟುಕೊಂಡಿದ್ದಾರೆ. ಹಸಿವಿನ ವಿರುದ್ಧ ಅವರು ಸಾರಿರುವ ಸಮರವನ್ನು ಜನ ಪ್ರಶಂಸಿಸುತ್ತಿದ್ದಾರೆ.
ಜನ್ ರಸೋಯಿ ಅಭಿಯಾನದ ಮೂಲಕ ಬಡ ಜನರಿಗೆ ಶುದ್ಧ, ಆರೋಗ್ಯ ಪೂರ್ಣ ಆಹಾರ ಸಿಗುವ ಏರ್ಪಾಟು ಅವರು ಮಾಡಿದ್ದಾರೆ. ‘ಕೇವಲ ನೆಪಮಾತ್ರಕ್ಕೆ ಟೋಕನ್ ರೂಪದಲ್ಲಿ ಅವರಿಂದ ಒಂದು ರೂಪಾಯಿ ತೆಗೆದುಕೊಳ್ಳಲಾಗುತ್ತದೆ. ನಮ್ಮ ವಲಂಟೀರ್ಗಳು ಅವರಿಗೆ ಘನತೆ ಮತ್ತು ಗೌರವದಿಂದ ಊಟ ಸರಬರಾಜು ಮಾಡುತ್ತಾರೆ. ಬಡವರೆಂದ ಮಾತ್ರಕ್ಕೆ ಅವರನ್ನು ಕೀಳಾಗಿ ಕಾಣುವುದಿಲ್ಲ, ಅವರ ಸ್ವಾಬಿಮಾನ ನಮಗೆ ಮುಖ್ಯ. ಅದಕ್ಕೆಂದೇ ನಾವು ಅವರಿಂದ ಒಂದು ರೂಪಾಯಿ ತೆಗೆದುಕೊಳ್ಳುತ್ತೇವೆ. ಅವರು ಹೊಟ್ಟೆ ತುಂಬಾ ಊಟ ಮಾಡಿ ತೃಪ್ತರಾಗಿ ಹೋಗುವದನ್ನು ನಮ್ಮ ಸ್ವಸಹಾಯಕರು ಖಚಿತಪಡಿಸಿಕೊಳ್ಳುತ್ತಾರೆ,’ ಎಂದು ತಮ್ಮ ಹೇಳಿಕೆಯೊಂದರಲ್ಲಿ ಗಂಭೀರ್ ತಿಳಿಸಿದ್ದರು.
ಗೌತಿ ಅವರ ಅಭಿಯಾನವನ್ನು ಅವರ ಜೊತೆ ಆಟಗಾರ ಮತ್ತು ಸೆಲಿಬ್ರಿಟಿ ಕ್ರಿಕೆಟರ್ ಹರ್ಭಜನ್ ಸಿಂಗ್ ಮುಕ್ಕ ಕಂಠದಿಂದ ಕೊಂಡಾಡಿದ್ದಾರೆ. ತನ್ನ ಟ್ವಿಟರ್ ಹ್ಯಾಂಡಲ್ ಮೂಲಕ ಭಜ್ಜಿ ಅವರು ಈ ಪರೋಪಕಾರಿ ಕಾರ್ಯಕ್ರಮವನ್ನು ಅಭಿನಂದಿಸಿದ್ದಾರೆ.
‘ನಿಮ್ಮನ್ನು ಅಭಿನಂದಿಸುತ್ತೇನೆ. ಬಡವರು ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎಂಬ ಕಳಕಳಿಯೊಂದಿಗೆ ಜನ್ ರಸೋಯಿ ಯೋಜನೆ ಮೂಲಕ ಒಂದು ರೂಪಾಯಿಯಲ್ಲಿ ಊಟ ಒದಗಿಸುತ್ತಿರುವಿರಿ. ಆಹಾರ ಮಾನವ ಬದುಕಿನ ಅತಿ ಮುಖ್ಯ ಭಾಗವಾಗಿದೆ. ಅದನ್ನು ಪೂರೈಸುವವರು ನಿಜಕ್ಕೂ ಆದರ್ಶನೀಯ ಮತ್ತು ಗೌರವಾನ್ವಿತ ಜನರೆನಿಸಿಕೊಳ್ಳುತ್ತಾರೆ,’ ಎಂದು ಟರ್ಬನೇಟರ್ ಹೇಳಿದ್ದಾರೆ.
Well done @GautamGambhir keep up the good work.. #GautamjanRasoi more power to you .. God bless you pic.twitter.com/VgpTKzV8r5
— Harbhajan Turbanator (@harbhajan_singh) August 20, 2021
‘ಇಂಥ ಮಹತ್ಕಾರ್ಯಗಳನ್ನು ಮಾಡುತ್ತಲೇ ಇರಿ. ನಿಮ್ಮ ಉತ್ತಮ ಆರೋಗ್ಯಕ್ಕಾಗಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ದೇವರು ನಿಮಗೆ ಒಳ್ಳೆಯ ಆರೋಗ್ಯ ಮತ್ತು ಶಕ್ತಿಯನ್ನು ನೀಡಲಿ. ನಿಮ್ಮ ಬಗ್ಗೆ ಕಾಳಜಿ ಇರಲಿ ಬ್ರದರ್,’ ಎಂದು ಬಜ್ಜಿ ಹೇಳಿದ್ದಾರೆ.
ಇದನ್ನೂ ಓದಿ: T20 World Cup: ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತದ ಈ ಇಬ್ಬರು ಕ್ರಿಕೆಟಿಗರು ಜವಬ್ದಾರಿ ಹೊರಬೇಕು; ಗೌತಮ್ ಗಂಭೀರ್
