ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ್ದಾರೆ. ವೈಯುಕ್ತಿಕ ಕಾರಣಗಳಿಂದಾಗಿ ಗಂಭೀರ್ ಅವರು ತವರಿಗೆ ವಾಪಾಸ್ಸಾಗಿದ್ದಾರೆ. ಇದಾಗ್ಯೂ ಅವರು ಹಿಂತಿರುಗಲು ಕಾರಣವೇನು ಎಂಬುದು ಇನ್ನೂ ಸಹ ಬಹಿರಂಗವಾಗಿಲ್ಲ. ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯವು ಡಿಸೆಂಬರ್ 6 ರಿಂದ ಶುರುವಾಗಲಿದ್ದು, ಈ ವೇಳೆಗೆ ಗಂಭೀರ್ ಮತ್ತೆ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಅಡಿಲೇಡ್ನ ಓವಲ್ ಮೈದಾನದಲ್ಲಿ ಡಿಸೆಂಬರ್ 6 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಿಂಕ್ ಬಾಲ್ ಟೆಸ್ಟ್ ಆರಂಭವಾಗಲಿದೆ. ಇದಕ್ಕೂ ಕೆಲ ದಿನಗಳ ಮೊದಲು ಅವರು ಆಸ್ಟ್ರೇಲಿಯಾಗೆ ತೆರಳಲಿದ್ದಾರೆ. ಅಲ್ಲದೆ ಉಳಿದ ಪಂದ್ಯಗಳಿಗೆ ಅವರು ಲಭ್ಯರಿರಲಿದ್ದಾರೆ ಎಂದು ವರದಿಯಾಗಿದೆ.
ಭಾರತ ತಂಡವು ಪರ್ತ್ನಿದ ಬುಧವಾರ (ನ.27) ಕ್ಯಾನ್‌ಬೆರಾಗೆ ತೆರಳಲಿದ್ದು, ಅಲ್ಲಿ ಎರಡು ದಿನಗಳ ಕಾಲ ಪಿಂಕ್ ಬಾಲ್ ಅಭ್ಯಾಸ ಪಂದ್ಯವನ್ನು ಆಡಲಿದೆ. ಅತ್ತ ಮುಖ್ಯ ಕೋಚ್ ಗೌತಮ್ ಗಂಭೀರ್ ಅನುಪಸ್ಥಿತಿಯಲ್ಲಿ ಭಾರತ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್, ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಮುಂತಾದವರು ಟೀಮ್ ಇಂಡಿಯಾದ ಉಸ್ತುವಾರಿವಹಿಸಿಕೊಳ್ಳಲಿದ್ದಾರೆ.
ವೈಯುಕ್ತಿಕ ಕಾರಣಗಳಿಂದಾಗಿ ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈಗಾಗಲೇ ತಂಡವನ್ನು ಕೂಡಿಕೊಂಡಿದ್ದಾರೆ. ಅಲ್ಲದೆ ಕ್ಯಾನ್ಬೆರಾದಲ್ಲಿ ನಡೆಯಲಿರುವ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಾಗೆಯೇ ಅಡಿಲೇಡ್ನಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಹಿಟ್ಮ್ಯಾನ್ ಅನುಪಸ್ಥಿತಿಯಲ್ಲಿ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕನಾಗಿ ಜಸ್ಪ್ರೀತ್ ಬುಮ್ರಾ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: IPL 2025: ಐಪಿಎಲ್ ಅಖಾಡದಲ್ಲಿ 13 ಕನ್ನಡಿಗರು
ಬುಮ್ರಾ ಸಾರಥ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 295 ರನ್ಗಳಿಂದ ಸೋಲಿಸಿ ಭಾರತ ತಂಡ ಶುಭಾಂಭ ಮಾಡಿದೆ. ಇದೀಗ 5 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಅಂತರದಿಂದ ಮುನ್ನಡೆ ಸಾಧಿಸಿದ್ದು, ಈ ಮುನ್ನಡೆಯನ್ನು ಪಿಂಕ್ ಟೆಸ್ಟ್ನಲ್ಲೂ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ.
2ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ (D/N) | ಶುಕ್ರವಾರ, 6 ಡಿಸೆಂಬರ್ 2024 | 9:30 AM | ಅಡಿಲೇಡ್ |
3ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶನಿವಾರ, 14 ಡಿಸೆಂಬರ್ 2024 | 5:50 AM | ಬ್ರಿಸ್ಬೇನ್ |
4ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಗುರುವಾರ, 26 ಡಿಸೆಂಬರ್ 2024 | 5 AM | ಮೆಲ್ಬೋರ್ನ್ |
5ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶುಕ್ರವಾರ, 3 ಜನವರಿ 2025 | 5 AM | ಸಿಡ್ನಿ |