ಹೆಡ್ ಕೋಚ್ ಹುದ್ದೆಗೆ ಗುಡ್ಬೈ ಹೇಳ್ತಾರಾ ಗಂಭೀರ್? 4 ಫ್ರಾಂಚೈಸಿಗಳಿಂದ ಭರ್ಜರಿ ಆಫರ್
ಗೌತಮ್ ಗಂಭೀರ್ ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನದಿಂದ ನಿರ್ಗಮಿಸಿದ ನಂತರ, ಹಲವು ಐಪಿಎಲ್ ಫ್ರಾಂಚೈಸಿಗಳು ಅವರನ್ನು ತಮ್ಮ ತಂಡಕ್ಕೆ ಮೆಂಟರ್ ಅಥವಾ ಕೋಚ್ ಆಗಿ ಸೇರಿಸಿಕೊಳ್ಳಲು ಆಸಕ್ತಿ ತೋರಿವೆ. ಕೆಕೆಆರ್ ಸೇರಿದಂತೆ ಕನಿಷ್ಠ ನಾಲ್ಕು ತಂಡಗಳು ಗಂಭೀರ್ ಅವರನ್ನು ಪಡೆಯಲು ಸಿದ್ಧವಾಗಿವೆ. ಗಂಭೀರ್ ಅವರ ಐಪಿಎಲ್ ಯಶಸ್ಸು ಇದಕ್ಕೆ ಕಾರಣ. ಅವರ ಮುಂದಿನ ನಡೆ, ಟೀಂ ಇಂಡಿಯಾ ಒಪ್ಪಂದ ಮುಂದುವರಿಯುವುದೇ ಅಥವಾ ಐಪಿಎಲ್ಗೆ ಮರಳುವರೇ ಎಂಬ ಕುತೂಹಲವಿದೆ.

ಕಳೆದ ಕೆಲವು ತಿಂಗಳುಗಳಿಂದ ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಭವಿಷ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. 2027ರ ಏಕದಿನ ವಿಶ್ವಕಪ್ವರೆಗೆ ಗಂಭೀರ್ ಅವರ ಕೋಚ್ ಹುದ್ದೆಯ ಅವಧಿ ಇದ್ದರೂ, ಅದಕ್ಕೂ ಮೊದಲೇ ಅವರನ್ನು ಹುದ್ದೆಯಿಂದ ಕೆಳಗಿಳಿಸಬಹುದು ಎಂಬ ಮಾತುಗಳು ಆಗಾಗ ಕೇಳಿಬರುತ್ತಿದ್ದವು. ಆದರೆ, ಮಾಜಿ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿದ ಬಳಿಕ ಗಂಭೀರ್ ಅವರ ಭವಿಷ್ಯದ ಕುರಿತ ಊಹಾಪೋಹಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿವೆ. ಇದರ ನಡುವೆಯೇ ಮತ್ತೊಂದು ಕುತೂಹಲಕಾರಿ ಸುದ್ದಿ ಹೊರಬಿದ್ದಿದೆ. ಗಂಭೀರ್ ಟೀಂ ಇಂಡಿಯಾದ ಕೋಚ್ ಹುದ್ದೆ ತೊರೆದ ಬಳಿಕ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಕೆಲವು ಐಪಿಎಲ್ ಫ್ರಾಂಚೈಸಿಗಳು ಈಗಿನಿಂದಲೇ ಆಸಕ್ತಿ ತೋರಿಸುತ್ತಿವೆ ಎನ್ನಲಾಗಿದೆ.
ವರದಿಯ ಪ್ರಕಾರ, ಕೆಲವು ಐಪಿಎಲ್ ತಂಡಗಳು ಗೌತಮ್ ಗಂಭೀರ್ ಅವರನ್ನು ತಮ್ಮ ತಂಡದ ಮೆಂಟರ್ ಅಥವಾ ಕೋಚ್ ಆಗಿ ನೇಮಿಸಿಕೊಳ್ಳಲು ಪ್ರಯತ್ನ ಆರಂಭಿಸಿವೆ. ಗಂಭೀರ್ ಟೀಂ ಇಂಡಿಯಾದ ಕೋಚ್ ಹುದ್ದೆಯಿಂದ ಹೊರಬಂದ ತಕ್ಷಣವೇ ಅವರನ್ನು ತಮ್ಮ ತಂಡಕ್ಕೆ ಕರೆತರಲು ಕನಿಷ್ಠ ನಾಲ್ಕು ಫ್ರಾಂಚೈಸಿಗಳು ಆಸಕ್ತಿ ಹೊಂದಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಟೀಂ ಇಂಡಿಯಾ ಹಾಗೂ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಗಂಭೀರ್ ನೀಡಿರುವ ಕೊಡುಗೆ ಮತ್ತು ಅವರ ಯಶಸ್ಸೇ ಈ ಆಸಕ್ತಿಗೆ ಪ್ರಮುಖ ಕಾರಣವಾಗಿದೆ.
ಆ 4 ಐಪಿಎಲ್ ತಂಡಗಳು ಯಾವುವು?
ಗೌತಮ್ ಗಂಭೀರ್ ಅವರನ್ನು ಮೆಂಟರ್ ಅಥವಾ ಕೋಚ್ ಆಗಿ ನೇಮಿಸಿಕೊಳ್ಳಲು ಆಸಕ್ತಿ ಹೊಂದಿರುವ ತಂಡಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಕೋಲ್ಕತ್ತಾ ನೈಟ್ ರೈಡರ್ಸ್. ಈ ತಂಡದೊಂದಿಗೆ ಗಂಭೀರ್ ಹಲವು ವರ್ಷಗಳ ನಂಟು ಹೊಂದಿದ್ದಾರೆ. ವರದಿಗಳ ಪ್ರಕಾರ, ಗಂಭೀರ್ ಅವರನ್ನು ಮತ್ತೊಮ್ಮೆ ಮೆಂಟರ್ ಆಗಿ ನೇಮಿಸಿಕೊಳ್ಳಲು ಕೆಕೆಆರ್ ಉತ್ಸುಕವಾಗಿದೆ. 2028ರ ಐಪಿಎಲ್ ಆವೃತ್ತಿಯಲ್ಲಿ ಅವರೊಂದಿಗೆ ಹೊಸ ಪಯಣ ಆರಂಭಿಸುವ ನಿರೀಕ್ಷೆಯಲ್ಲಿದೆ.
2024ರ ಐಪಿಎಲ್ನಲ್ಲಿ ಕೆಕೆಆರ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದ ಗಂಭೀರ್, ಬರೋಬ್ಬರಿ 10 ವರ್ಷಗಳ ಬಳಿಕ ತಂಡಕ್ಕೆ ಪ್ರಶಸ್ತಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಯಶಸ್ಸಿನ ಬೆನ್ನಲ್ಲೇ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಿಸಲಾಗಿತ್ತು.
ಕೆಕೆಆರ್ ಹೊರತುಪಡಿಸಿ ರಾಜಸ್ಥಾನ್ ರಾಯಲ್ಸ್ ತಂಡವೂ ಗಂಭೀರ್ ಅವರನ್ನು ತನ್ನ ತಂಡಕ್ಕೆ ಕರೆತರಲು ಆಸಕ್ತಿ ಹೊಂದಿದೆ ಎನ್ನಲಾಗಿದೆ. ಈ ಹಿಂದೆ ಕೂಡ ಈ ವಿಚಾರವಾಗಿ ಫ್ರಾಂಚೈಸಿ ಗಂಭೀರ್ ಅವರೊಂದಿಗೆ ಮಾತುಕತೆ ನಡೆಸಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನುಳಿದ ಎರಡು ತಂಡಗಳ ಹೆಸರುಗಳನ್ನು ಬಹಿರಂಗಪಡಿಸಲಾಗಿಲ್ಲ. ಆದರೆ, ಈ ಪೈಕಿ ಒಂದು ತಂಡ ಐಪಿಎಲ್ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಿದೆ ಎನ್ನಲಾಗಿದೆ. ಅದು ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಮುಂಬೈ ಇಂಡಿಯನ್ಸ್ ತಂಡವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮತ್ತೊಂದು ತಂಡ ಈವರೆಗೆ ಐಪಿಎಲ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ.
‘ರ್ಯಾಂಕ್ ಮುಖ್ಯವಲ್ಲ, ಟ್ರೋಫಿಗಳಷ್ಟೇ ಮುಖ್ಯ’; ಗೌತಮ್ ಗಂಭೀರ್
ಮತ್ತೆ ಐಪಿಎಲ್ಗೆ ಬರ್ತಾರಾ ಗಂಭೀರ್?
ಗೌತಮ್ ಗಂಭೀರ್ ಮತ್ತೆ ಐಪಿಎಲ್ಗೆ ಮರಳುತ್ತಾರೆಯೇ ಎಂಬ ಪ್ರಶ್ನೆಗೆ ಸದ್ಯಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. 2024ರಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಂಡಾಗ ಬಿಸಿಸಿಐ ಅವರಿಗೆ 2027ರ ಏಕದಿನ ವಿಶ್ವಕಪ್ವರೆಗಿನ ಒಪ್ಪಂದ ನೀಡಿತ್ತು. ಹೀಗಾಗಿ ಸದ್ಯದ ಒಪ್ಪಂದದ ಪ್ರಕಾರ ಅವರು 2027ರ ವಿಶ್ವಕಪ್ವರೆಗೆ ಕೋಚ್ ಆಗಿ ಮುಂದುವರಿಯಲಿದ್ದಾರೆ.
ಇದರ ನಡುವೆ 2028ರ ಒಲಿಂಪಿಕ್ಸ್ವರೆಗೂ ಗಂಭೀರ್ ಅವರ ಅಧಿಕಾರಾವಧಿಯನ್ನು ವಿಸ್ತರಿಸಲು ಬಿಸಿಸಿಐ ಮುಂದಾಗುತ್ತದೆಯೇ ಎಂಬ ಕುತೂಹಲವೂ ಇದೆ. ಒಂದು ವೇಳೆ ಬಿಸಿಸಿಐ ಒಪ್ಪಂದ ವಿಸ್ತರಿಸಿದರೆ ಗಂಭೀರ್ ಅದನ್ನು ಒಪ್ಪಿಕೊಳ್ಳುತ್ತಾರೆಯೇ ಅಥವಾ ಐಪಿಎಲ್ಗೆ ಮರಳಲು ನಿರ್ಧರಿಸುತ್ತಾರೆಯೇ ಎಂಬುದರ ಮೇಲೆ ಅವರ ಮುಂದಿನ ನಡೆ ನಿರ್ಧಾರವಾಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:07 am, Fri, 30 October 26




