ODI World Cup 2023: ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಿಂದ ವೆಸ್ಟ್ ಇಂಡೀಸ್ (West Indies) ತಂಡವು ಹೊರಬಿದ್ದಿದೆ. ಝಿಂಬಾಬ್ವೆಯಲ್ಲಿ ನಡೆದ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಮೂರು ಪಂದ್ಯಗಳನ್ನು ಸೋತಿರುವ ಕೆರಿಬಿಯನ್ ತಂಡ ಏಕದಿನ ವಿಶ್ವಕಪ್ 2023 ಕ್ಕೆ ಅರ್ಹತೆ ಪಡೆಯಲು ವಿಫಲವಾಗಿದೆ. ಇದಾಗ್ಯೂ ವಿಂಡೀಸ್ ಪಡೆ ಕಂಬ್ಯಾಕ್ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್.
ಈ ಬಗ್ಗೆ ಟ್ವೀಟ್ ಮಾಡಿರುವ ಗೌತಮ್ ಗಂಭೀರ್, ನಾನು ವೆಸ್ಟ್ ಇಂಡೀಸ್ ಅನ್ನು ಪ್ರೀತಿಸುತ್ತೇನೆ. ನಾ ವೆಸ್ಟ್ ಇಂಡಿಯನ್ ಕ್ರಿಕೆಟ್ ಅನ್ನು ಇಷ್ಟಪಡುತ್ತೇನೆ. ಅವರು ಮತ್ತೆ ವಿಶ್ವ ಕ್ರಿಕೆಟ್‌ನಲ್ಲಿ ನಂಬರ್ 1 ತಂಡವಾಗಲಿದೆ ಎಂದು ವಿಶ್ವಾಸವಿದೆ ಎಂದು ಬರೆದುಕೊಂಡಿದ್ದಾರೆ.
ಇತ್ತ ವರ್ಷದಿಂದ ವರ್ಷಕ್ಕೆ ಕುಸಿತದತ್ತ ಸಾಗುತ್ತಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಬೆಂಬಲ ಸೂಚಿಸಿ ಗೌತಮ್ ಗಂಭೀರ್ ಮಾಡಿರುವ ಟ್ವೀಟ್ ಪರ ಹಾಗೂ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಏಕೆಂದರೆ ಕಳೆದ ಐದಾರು ವರ್ಷಗಳಿಂದ ವೆಸ್ಟ್ ಇಂಡೀಸ್ ಯಾವುದೇ ಟೂರ್ನಿಗಳಲ್ಲೂ ಉತ್ತಮ ಪ್ರದರ್ಶನ ನೀಡಿಲ್ಲ.
ಅದರಲ್ಲೂ ಈ ಬಾರಿಯ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಝಿಂಬಾಬ್ವೆ, ನೆದರ್ಲ್ಯಾಂಡ್ಸ್ ಹಾಗೂ ಸ್ಕಾಟ್ಲ್ಯಾಂಡ್ ವಿರುದ್ಧ ಹೀನಾಯವಾಗಿ ಸೋತಿದೆ. ಇದಾಗ್ಯೂ ಗಂಭೀರ್ ಅವರು ನಂಬರ್ 1 ತಂಡವಾಗಿ ಹೊರಹೊಮ್ಮಲಿದೆ ಎಂದಿರುವುದು ಎಷ್ಟು ವರ್ಷಗಳ ಬಳಿಕ ಎಂದು ಅನೇಕರು ಕಾಲೆಳೆದಿದ್ದಾರೆ.
ಅಂದಹಾಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡ ವಿಶ್ವಕಪ್ನ ಭಾಗವಾಗಿಲ್ಲ. ಅಂದರೆ 1975 ಹಾಗೂ 1979 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ವೆಸ್ಟ್ ಇಂಡೀಸ್ ಕಳೆದ 12 ವಿಶ್ವಕಪ್ಗಳಲ್ಲಿ ಕಣಕ್ಕಿಳಿದಿತ್ತು. ಆದರೆ ಈ ಬಾರಿ ಅರ್ಹತಾ ಸುತ್ತಿನಲ್ಲೇ ನಿರ್ಗಮಿಸುವ ಮೂಲಕ ಭಾರೀ ಮುಖಭಂಗಕ್ಕೆ ಒಳಗಾಗಿದೆ.
ಇದನ್ನೂ ಓದಿ: IND vs AUS: ಏಕದಿನ ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾದ ಮಾಸ್ಟರ್ ಪ್ಲ್ಯಾನ್..!
ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ವೆಸ್ಟ್ ಇಂಡೀಸ್ ತಂಡ ಹೀಗಿದೆ:
ಬ್ರಾಂಡನ್ ಕಿಂಗ್ , ಜಾನ್ಸನ್ ಚಾರ್ಲ್ಸ್ , ಶಮರ್ ಬ್ರೂಕ್ಸ್ , ಶಾಯ್ ಹೋಪ್ (ನಾಯಕ) , ನಿಕೋಲಸ್ ಪೂರನ್ , ಕೈಲ್ ಮೇಯರ್ಸ್ , ಕೆವಿನ್ ಸಿಂಕ್ಲೇರ್ , ಜೇಸನ್ ಹೋಲ್ಡರ್ , ರೊಮಾರಿಯೋ ಶೆಫರ್ಡ್ , ಅಕೀಲ್ ಹೋಸೇನ್ , ಅಲ್ಝಾರಿ ಜೋಸೆಫ್, ರೋವ್ಮನ್ ಪೊವೆಲ್ , ಕೀಸಿ ಕಾರ್ಟಿ , ಯಾನಿಕ್ ಕ್ಯಾರಿಯಾ , ಕೀಮೋ ಪಾಲ್ , ರೋಸ್ಟನ್ ಚೇಸ್.