Gautam Gambhir: ಕೋಚ್ ಆಗಲು ಗೌತಮ್ ಗಂಭೀರ್​ ಡಿಮ್ಯಾಂಡ್ ಕೇಳಿ ತಲೆ ಕೆರೆದುಕೊಂಡ ಬಿಸಿಸಿಐ

|

Updated on: Jun 24, 2024 | 9:34 AM

Gautam Gambhir: ಈ ಬಾರಿಯ ಟಿ20 ವಿಶ್ವಕಪ್​ನ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರ ಕಾರ್ಯಾವಧಿ ಮುಗಿಯಲಿದೆ. ಅಲ್ಲದೆ ಆ ಬಳಿಕ ಕೋಚ್ ಹುದ್ದೆಯಲ್ಲಿ ಮುಂದುವರೆಯುವುದಿಲ್ಲ ಎಂದು ದ್ರಾವಿಡ್ ಕೂಡ ಸ್ಪಷ್ಟಪಡಿಸಿದ್ದಾರೆ. ಹೀಗಾಗಿಯೇ ಇದೀಗ ಬಿಸಿಸಿಐ ಹೊಸ ಕೋಚ್ ಆಯ್ಕೆಗೆ ಮುಂದಾಗಿದ್ದು, ಅದರಂತೆ ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ನೂತನ ತರಬೇತುದಾರರಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.

Gautam Gambhir: ಕೋಚ್ ಆಗಲು ಗೌತಮ್ ಗಂಭೀರ್​ ಡಿಮ್ಯಾಂಡ್ ಕೇಳಿ ತಲೆ ಕೆರೆದುಕೊಂಡ ಬಿಸಿಸಿಐ
Gautam Gambhir
Follow us on

ಟೀಮ್ ಇಂಡಿಯಾದ ಹೊಸ ಕೋಚ್ ಆಗಿ ಗೌತಮ್ ಗಂಭೀರ್ (Gautam Gambhir) ಆಯ್ಕೆಯಾಗುವುದು ಬಹುತೇಕ ಖಚಿತ. ಆದರೆ ಅದಕ್ಕೂ ಮುನ್ನ ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ಡಿಮ್ಯಾಂಡ್​ಗಳಿಗೆ ಒಪ್ಪಿಗೆ ನೀಡುವುದೇ ಈಗ ಬಿಸಿಸಿಐ ಮುಂದಿರುವ ದೊಡ್ಡ ಸವಾಲು. ಹೀಗಾಗಿಯೇ ಹೊಸ ಕೋಚ್​ನ ಅಧಿಕೃತ ಘೋಷಣೆ ವಿಳಂಬವಾಗುತ್ತಿದೆ ಎಂದು ವರದಿಯಾಗಿದೆ.

ಗೌತಮ್ ಗಂಭೀರ್ ಅವರು ಮುಂದಿನ ಕೋಚ್ ಆಗಲು ಬಿಸಿಸಿಐ ಮತ್ತು ಇತರ ಸಂಬಂಧಿತ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಈ ವೇಳೆ ಅವರು ಐದು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ಬೇಡಿಕೆಯಲ್ಲಿ ಗೌತಮ್ ಗಂಭೀರ್ ಯಾವುದೇ ಹಸ್ತಕ್ಷೇಪವಿಲ್ಲದೆ ತಂಡದ ಸಂಪೂರ್ಣ ನಿಯಂತ್ರಣವನ್ನು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ಆ ಐದು ಬೇಡಿಕೆಗಳಾವುವು ಎಂದು ನೋಡುವುದಾದರೆ…

  • ತಮ್ಮದೇ ಆದ ಇತರೆ ಸಿಬ್ಬಂದಿ ವರ್ಗವನ್ನು ಆಯ್ಕೆ ಮಾಡಲು ಅವಕಾಶ ನೀಡಬೇಕೆಂದು ಕೇಳಿಕೊಂಡಿದ್ದಾರೆ.
  • ಟೀಮ್ ಇಂಡಿಯಾದ ಸಂಪೂರ್ಣ ನಿಯಂತ್ರಣ ತಮ್ಮ ಬಳಿಯಿರಬೇಕೆಂದು ಆಗ್ರಹಿಸಿದ್ದಾರೆ.
  • ಹಾಗೆಯೇ ಟೆಸ್ಟ್‌ಗೆ ಪ್ರತ್ಯೇಕ ತಂಡವನ್ನು ರೂಪಿಸಲು ಅವಕಾಶ ನೀಡಬೇಕೆಂದು ತಿಳಿಸಿದ್ದಾರೆ.
  • 2027ರ ಏಕದಿನ ವಿಶ್ವಕಪ್​ಗಾಗಿ ಈಗಿಂದಲೇ ಹೊಸ ತಂಡವನ್ನು ಕಟ್ಟಲು ಸಂಪೂರ್ಣ ಸ್ವಾತಂತ್ರ ನೀಡಬೇಕೆಂದು ಆಗ್ರಹಿಸಿದ್ದಾರೆ.
  • ಹಿರಿಯ ಆಟಗಾರರಿಗೆ ಚಾಂಪಿಯನ್ಸ್ ಟ್ರೋಫಿ 2025 ಕೊನೆಯ ಟೂರ್ನಿ ಎಂದು ಪರಿಗಣಿಸಬೇಕೆಂದು ಗಂಭೀರ್ ಬೇಡಿಕೆ ಮುಂದಿಟ್ಟಿದ್ದಾರೆ.

ಈ ಐದು ಡಿಮ್ಯಾಂಡ್​ಗಳೊಂದಿಗೆ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆ ಅಲಂಕರಿಸಲು ಬಯಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬೇಡಿಕೆಯನ್ನು ಬಿಸಿಸಿಐ ಈಡೇರಿಸಲಿದೆಯಾ ಎಂಬುದೇ ಈಗ ಕುತೂಹಲ.

ಒಟ್ಟಿನಲ್ಲಿ ಟೀಮ್ ಇಂಡಿಯಾ ಕೋಚ್ ಆಗುವ ಮುನ್ನವೇ ಗೌತಮ್ ಗಂಭೀರ್ ಭಾರತ ತಂಡದ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಬಯಸಿರುವುದು ಸ್ಪಷ್ಟ. ಹೀಗಾಗಿ ಮುಂಬರುವ ದಿನಗಳಲ್ಲಿ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

ಇದನ್ನೂ ಓದಿ: T20 World Cup 2024: ಒಂದೇ ಪಂದ್ಯದಲ್ಲಿ ಹಲವು ವಿಶ್ವ ದಾಖಲೆ ಬರೆದ ವೆಸ್ಟ್ ಇಂಡೀಸ್

ಕೆಲ ಬೇಡಿಕೆಗಳಿಗೆ ಗ್ರೀನ್ ಸಿಗ್ನಲ್:

ಸದ್ಯ ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆಯ ಸಂದರ್ಶನದ ಮೊದಲ ಸುತ್ತು ಮುಗಿಸಿರುವ ಗೌತಮ್ ಗಂಭೀರ್ ಅವರ ಕೆಲ ಬೇಡಿಕೆಗಳಿಗೆ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ತಿಳಿದು ಬಂದಿದೆ. ಇದಾಗ್ಯೂ ಕೆಲ ಬೇಡಿಕೆಗಳ ಬಗ್ಗೆ ಗಂಭೀರ್ ಜೊತೆ ಬಿಸಿಸಿಐ ಅಧಿಕಾರಿಗಳು ಮತ್ತೊಮ್ಮೆ ಚರ್ಚಿಸುವ ಸಾಧ್ಯತೆಯಿದೆ. ಹೀಗಾಗಿಯೇ ನೂತನ ಕೋಚ್​ನ ಘೋಷಣೆ ವಿಳಂಬವಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.