IND vs AUS: 41 ರನ್ ಅಥವಾ 32 ಎಸೆತಗಳು: ಟೀಮ್ ಇಂಡಿಯಾನ ಹೊರದಬ್ಬಲು ಆಸ್ಟ್ರೇಲಿಯಾ ಪ್ಲ್ಯಾನ್
T20 World Cup 2024: ಟಿ20 ವಿಶ್ವಕಪ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಒಟ್ಟು 5 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ ಮೂರು ಬಾರಿ ಜಯ ಸಾಧಿಸಿದರೆ, ಆಸ್ಟ್ರೇಲಿಯಾ ಗೆದ್ದಿರುವುದು ಕೇವಲ 2 ಬಾರಿ ಮಾತ್ರ. ಹೀಗಾಗಿಯೇ ಇಂದಿನ ಪಂದ್ಯದಲ್ಲೂ ಗೆಲ್ಲುವ ಫೇವರೇಟ್ ತಂಡವಾಗಿ ಟೀಮ್ ಇಂಡಿಯಾ ಗುರುತಿಸಿಕೊಂಡಿದೆ.
T20 World Cup 2024: ಟಿ20 ವಿಶ್ವಕಪ್ನ 51ನೇ ಪಂದ್ಯದಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಕಣಕ್ಕಿಳಿಯಲಿದೆ. ಡಾರೆನ್ ಸ್ಯಾಮಿ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಏಕೆಂದರೆ ಗ್ರೂಪ್-1 ರಲ್ಲಿ ನಾಲ್ಕು ತಂಡಗಳು ಸೆಮಿಫೈನಲ್ ರೇಸ್ನಲ್ಲಿದೆ. ಈ ತಂಡಗಳ ಸೆಮಿಫೈನಲ್ ಸ್ಥಾನ ನಿರ್ಧಾರವಾಗುವುದು ನೆಟ್ ರನ್ ರೇಟ್ ಮೂಲಕ ಎಂಬುದು ವಿಶೇಷ.
ಇಲ್ಲಿ ಟೀಮ್ ಇಂಡಿಯಾ ಗೆದ್ದರೆ ನೇರವಾಗಿ ಸೆಮಿಫೈನಲ್ ಹಂತಕ್ಕೇರಲಿದೆ. ಆದರೆ ಸೋತರೆ ಎಲ್ಲಾ ಲೆಕ್ಕಾಚಾರಗಳು ತಲೆ ಕೆಳಗಾಗಬಹುದು. ಏಕೆಂದರೆ ಪ್ರಸ್ತುತ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡವನ್ನು ದ್ವಿತೀಯ ಸ್ಥಾನಕ್ಕೆ ಇಳಿಸಲು ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದರೆ ಸಾಕು. ಒಂದು ವೇಳೆ ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಅಮೋಘ ಗೆಲುವು ದಾಖಲಿಸಿದರೆ, ಅಗ್ರಸ್ಥಾನದೊಂದಿಗೆ ಆಸೀಸ್ ಪಡೆ ಸೆಮಿಫೈನಲ್ಗೇರಲಿದೆ. ಇತ್ತ ಭಾರತ ಮತ್ತು ಅಫ್ಘಾನಿಸ್ತಾನ್ ನಡುವೆ ನೆಟ್ ರನ್ ರೇಟ್ ಲೆಕ್ಕಾಚಾರ ಮುನ್ನಲೆಗೆ ಬರಲಿದೆ.
ಹೀಗಾಗಿಯೇ ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 41 ರನ್ಗಳು ಮತ್ತು 32 ಎಸೆತಗಳ ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯಲಿದೆ. ಈ ಮೂಲಕ ಟಿ20 ವಿಶ್ವಕಪ್ನಿಂದ ಟೀಮ್ ಇಂಡಿಯಾವನ್ನು ಹೊರದಬ್ಬಲು ಆಸ್ಟ್ರೇಲಿಯಾ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.
ಹೇಗಿದೆ ನೆಟ್ ರನ್ ರೇಟ್ ಲೆಕ್ಕಾಚಾರ?
- ಇಂದಿನ ಪಂದ್ಯದಲ್ಲಿ ಭಾರತ ತಂಡವನ್ನು ಆಸ್ಟ್ರೇಲಿಯಾ ಕನಿಷ್ಠ 41 ರನ್ಗಳ ಅಂತರದಿಂದ ಸೋಲಿಸಿದರೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದೆ.
- ಹಾಗೆಯೇ ಕನಿಷ್ಠ 32 ಎಸೆತಗಳು ಬಾಕಿಯಿರುವಂತೆ ಟೀಮ್ ಇಂಡಿಯಾ ನೀಡಿದ ಗುರಿಯನ್ನು ಚೇಸ್ ಮಾಡಿದರೂ ಆಸ್ಟ್ರೇಲಿಯಾ ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಈ ಮೂಲಕ ಸೆಮಿಫೈನಲ್ಗೇರಬಹುದು.
- 41 ರನ್ಗಳ ಅಥವಾ 32 ಎಸೆತಗಳ ಅಂತರದ ಟೀಮ್ ಇಂಡಿಯಾ ಸೋತರೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಕುಸಿಯಲಿದೆ. ಇದರಿಂದ ಅಫ್ಘಾನಿಸ್ತಾನ್ ತಂಡಕ್ಕೆ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನಕ್ಕೇರಲು ಅವಕಾಶ ಹೆಚ್ಚಾಗಲಿದೆ.
- ಅದರಂತೆ ಬಾಂಗ್ಲಾದೇಶ್ ವಿರುದ್ಧ ಅಫ್ಘಾನಿಸ್ತಾನ್ ತಂಡ 81 ರನ್ಗಳ ಅಂತರದಿಂದ ಗೆದ್ದರೆ ನೆಟ್ ರನ್ ರೇಟ್ ಸಹಾಯದಿಂದ ಟೀಮ್ ಇಂಡಿಯಾವನ್ನು ಹಿಂದಿಕ್ಕಿ ಸೆಮಿಫೈನಲ್ಗೇರಬಹುದು.
ಆಸ್ಟ್ರೇಲಿಯಾ ಸೋತರೆ?
- ಭಾರತದ ವಿರುದ್ಧ ಆಸ್ಟ್ರೇಲಿಯಾ ಸೋತರೆ, ಟೀಮ್ ಇಂಡಿಯಾ ನೇರವಾಗಿ ಸೆಮಿಫೈನಲ್ಗೇರಲಿದೆ.
- ಆಸ್ಟ್ರೇಲಿಯಾ ಸೋತರೆ, ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಅಫ್ಘಾನಿಸ್ತಾನ್ ಜಯ ಸಾಧಿಸಿ ಸೆಮಿಫೈನಲ್ಗೇರಬಹುದು.
- ಒಂದು ವೇಳೆ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 55 ರನ್ಗಳ ಅಥವಾ 41 ಎಸೆತಗಳ ಅಂತರದಿಂದ ಗೆದ್ದರೆ ಬಾಂಗ್ಲಾದೇಶ್ ತಂಡಕ್ಕೂ ಸೆಮಿಫೈನಲ್ಗೇರಲು ಅವಕಾಶ ಇರಲಿದೆ.
- ಅದರಂತೆ ಅಫ್ಘಾನಿಸ್ತಾನ್ ವಿರುದ್ಧ ಬಾಂಗ್ಲಾದೇಶ್ ತಂಡ 31 ರನ್ಗಳ ಅಥವಾ 23 ಎಸೆತಗಳ ಅಂತರದಿಂದ ಗೆಲ್ಲಬೇಕು. ಈ ಮೂಲಕ ನೆಟ್ ರನ್ ರೇಟ್ ಸಹಾಯದಿಂದ ಸೆಮಿಫೈನಲ್ಗೆ ಪ್ರವೇಶಿಸಬಹುದು.
ಇದನ್ನೂ ಓದಿ: T20 World Cup 2024: ಹಳೆಯ ದಾಖಲೆ ಅಳಿಸಿ ಹಾಕಿದ ಟೀಮ್ ಇಂಡಿಯಾ
ಹೀಗಾಗಿಯೇ ಇಂದಿನ ಪಂದ್ಯದ ಫಲಿತಾಂಶವು ನಾಲ್ಕು ತಂಡಗಳ ಟಿ20 ವಿಶ್ವಕಪ್ ಭವಿಷ್ಯವನ್ನು ನಿರ್ಧರಿಸಲಿದೆ ಎಂದರೆ ತಪ್ಪಾಗಲಾರದು.
Published On - 7:59 am, Mon, 24 June 24