ಸೇಡಿನ ಸಮರದಲ್ಲಿ ಗೆದ್ದು ಏಷ್ಯನ್ ಕಿರೀಟ ತೊಟ್ಟ ಭಾರತದ ವನಿತೆಯರು
ದುಬೈನಲ್ಲಿ ನಡೆದ 2026ರ ಮಹಿಳಾ ಟಿ20 ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ತಂಡ ಶ್ರೀಲಂಕಾವನ್ನು ಮಣಿಸಿ ದಾಖಲೆಯ 8ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು. ಶಫಾಲಿ ವರ್ಮಾ ಕೇವಲ 24 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿ ಇತಿಹಾಸ ನಿರ್ಮಿಸಿದರು. ಮಂಧಾನ ಜೊತೆ ಸೇರಿ 129 ರನ್‌ಗಳ ಬೃಹತ್ ಜೊತೆಯಾಟವಾಡಿ ಭಾರತದ ಭರ್ಜರಿ 183 ರನ್‌ಗಳಿಗೆ ಅಡಿಪಾಯ ಹಾಕಿದರು. ಬೃಹತ್ ಗುರಿ ಬೆನ್ನಟ್ಟಿದ ಲಂಕಾ ತಂಡ ಒತ್ತಡಕ್ಕೆ ಸಿಲುಕಿ ಭಾರತಕ್ಕೆ ಸುಲಭ ಗೆಲುವು ದಕ್ಕಿಸಿತು.

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2026 ರ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾ ತಂಡವನ್ನು ಮಣಿಸಿದ ಟೀಂ ಇಂಡಿಯಾ ದಾಖಲೆಯ 8ನೇ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿದಿದೆ. ಇದು ಏಷ್ಯಾಕಪ್ನ 10ನೇ ಆವೃತ್ತಿಯಾಗಿದ್ದು, ಟೀಂ ಇಂಡಿಯಾ ಪ್ರತಿ ಆವೃತ್ತಿಯಲ್ಲೂ ಫೈನಲ್ ತಲುಪಿದೆ. ಆದರೆ ಕಳೆದ ಆವೃತ್ತಿಯಲ್ಲಿ ಮಾತ್ರ ಇದೇ ಶ್ರೀಲಂಕಾ ವಿರುದ್ಧ ಸೋತು ಚಾಂಪಿಯನ್ ಪಟ್ಟದಿಂದ ವಂಚಿತವಾಗಿತ್ತು. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ದಾಖಲೆಯ 183 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಬೃಹತ್ ಟಾರ್ಗೆಟ್ನ ಒತ್ತಡಕ್ಕೆ ಸಿಲುಕಿ ಸೋಲಿಗೆ ಕೊರಳೊಡ್ಡಿತು.
ಭಾರತಕ್ಕೆ ಅಬ್ಬರದ ಆರಂಭ
ಈ ಪಂದ್ಯದಲ್ಲಿ ಮಂಧಾನ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಶಫಾಲಿ ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಶಫಾಲಿ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ನಿಂದಾಗಿ ಟೀಂ ಇಂಡಿಯಾ ಪವರ್‌ಪ್ಲೇನ ಮೊದಲ ಆರು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 57 ರನ್ ಗಳಿಸಿತು. ಇದಾದ ಬಳಿಕ ಶಫಾಲಿ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಹಿಳಾ ಟಿ20 ಏಷ್ಯಾಕಪ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ದಾಖಲೆಯನ್ನು ನಿರ್ಮಿಸಿದರು. ಇದಕ್ಕೂ ಮೊದಲು, ಈ ದಾಖಲೆ ಸ್ಮೃತಿ ಮಂಧಾನ (25 ಎಸೆತಗಳು, 2022) ಅವರ ಹೆಸರಿನಲ್ಲಿತ್ತು.
ಶಫಾಲಿ, ಸ್ಮೃತಿ ಜೊತೆಯಾಟ
ಅಂತಿಮವಾಗಿ ಶಫಾಲಿ 39 ಎಸೆತಗಳಲ್ಲಿ 68 ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿ ಔಟಾದರು. ಈ ಇನ್ನಿಂಗ್ಸ್‌ನಲ್ಲಿ, ಅವರು 9 ಬೌಂಡರಿಗಳು ಮತ್ತು 2 ಅಗಾಧ ಸಿಕ್ಸರ್‌ಗಳನ್ನು ಬಾರಿಸಿದರು. ಶಫಾಲಿ ವಿಕೆಟ್ ಪತನದ ಬೆನ್ನಲ್ಲೇ ಸ್ಮೃತಿ ಮಂಧಾನ ಕೂಡ ರನೌಟ್ಗೆ ಬಲಿಯಾದರು. ಮಂಧಾನ 39 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 59 ರನ್ ಬಾರಿಸಿ ಔಟಾದರು. ಇವರಿಬ್ಬರು ಮೊದಲ ವಿಕೆಟ್ಗೆ 129 ರನ್‌ಗಳ ಜೊತೆಯಾಟವನ್ನಾಡುವ ಮೂಲಕ ದಾಖಲೆಯನ್ನು ನಿರ್ಮಿಸಿದರು.
𝗖. 𝗛. 𝗔. 𝗠. 𝗣. 𝗜. 𝗢. 𝗡. 𝗦 🏆
A flawless campaign capped by sheer brilliance 🇮🇳🥳
Congratulations to #TeamIndia on winning the #WomensAsiaCup 👏👏
Scorecard ▶️ https://t.co/knKLXGSfOd #INDvSL pic.twitter.com/O3KaZ0oA3p
— BCCI Women (@BCCIWomen) September 13, 2026
ಅಲ್ಪ ರನ್‌ಗಳ ಕಾಣಿಕೆ
ಇವರಿಬ್ಬರ ವಿಕೆಟ್ ಪತನದ ಬಳಿಕ ಬಂದವರೆಲ್ಲರೂ ಅಲ್ಪ ಕಾಣಿಕೆ ನೀಡಲಷ್ಟೇ ಶಕ್ತರಾದರು. ನಾಯಕಿ ಹರ್ಮನ್‌ಪ್ರೀತ್ ಕೌರ್ 14 ರನ್ ಗಳಿಸಿದರೆ, ರಿಚಾ ಘೋಷ್ 17 ರನ್ ಗಳಿಸಿ ಔಟಾದರು. ದೀಪ್ತಿ ಶರ್ಮಾ 5 ರನ್ ಗಳಿಸಿ ರನೌಟ್ ಆದರೆ, ಕಮಲಿನಿ ಕೇವಲ 5 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ ಅಜೇಯ 15 ರನ್ ಬಾರಿದರು. ಭಾರತಿ ಫುಲ್ಮಾಲಿ 2 ರನ್ ಗಳಿಸಿ ಅಜೇಯರಾಗಿ ಉಳಿದರು. ಶ್ರೀಲಂಕಾ ಪರ ಮಿಥಾಲಿ ಅಯೋಧ್ಯೆ, ಚಾಮರಿ ಅಟಪಟ್ಟು ಮತ್ತು ಚಾಮುಡಿ ಪ್ರಬೋಧ ತಲಾ 1 ವಿಕೆಟ್ ಪಡೆದರು.
ಗೆಲುವು ಖಚಿತಪಡಿಸಿದ ಚಾಮರಿ ವಿಕೆಟ್
ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಮೊದಲ ಓವರ್ನಲ್ಲೇ ಆಘಾತ ಎದುರಾಯಿತು. ಇಮೇಶಾ ದುಲಾನಿ 4ರನ್ಗೆ ವಿಕೆಟ್ ಒಪ್ಪಿಸಿದರು. ನಾಯಕಿ ಚಾಮರಿ ಅಟಾಪಟ್ಟು ಆರಂಭದಲ್ಲಿ ರನ್ಗಾಗಿ ಪರದಾಡಿದರಾದರೂ ಆ ಬಳಿಕ ಸ್ಕೋರ್ ಬೋರ್ಡ್ ವೇಗ ಹೆಚ್ಚಿಸುವ ಕೆಲಸ ಮಾಡಿದರು. ಆದರೆ ದೊಡ್ಡ ಮೊತ್ತದ ಒತ್ತಡಕ್ಕೆ ಒಳಗಾದ ಚಾಮರಿ 32 ಎಸೆತಗಳಲ್ಲಿ 36 ರನ್ ಬಾರಿಸಿ ಔಟಾದರು. ಚಾಮರಿ ವಿಕೆಟ್ ಪತನದೊಂದಿಗೆ ಟೀಂ ಇಂಡಿಯಾದ ಗೆಲುವು ಖಚಿತವಾಯಿತು. ಆ ಬಳಿಕ ಬಂದವರ್ಯಾರಿಗೂ ಭಾರತದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಶ್ರೀಲಂಕಾ 111 ರನ್ ಕಲೆಹಾಕಲಷ್ಟೇ ಶಕ್ತವಾಗಿ 72 ರನ್ಗಳಿಂದ ಸೋಲೊಪ್ಪಿಕೊಂಡಿತು. ಭಾರತದ ಪರ ಶ್ರೀಚರಣಿ ಅತ್ಯಧಿಕ 4 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 3 ವಿಕೆಟ್ ಕಬಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:21 pm, Sun, 13 September 26




