AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಷೇಕ್ ಅಬ್ಬರ; ಅಫ್ಘನ್ ವಿರುದ್ಧ ಸುಲಭವಾಗಿ ಗೆದ್ದ ಟೀಂ ಇಂಡಿಯಾ

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ T20 ಪಂದ್ಯದಲ್ಲಿ ಟೀಂ ಇಂಡಿಯಾ ಸುಲಭ ಗೆಲುವು ಸಾಧಿಸಿದೆ. ಅಭಿಷೇಕ್ ಶರ್ಮಾ ಅವರ ಆಕರ್ಷಕ 82 ರನ್‌ಗಳ ನೆರವಿನಿಂದ ಭಾರತ ಅಫ್ಘಾನಿಸ್ತಾನ ನೀಡಿದ್ದ 157 ರನ್‌ಗಳ ಗುರಿಯನ್ನು ಕೇವಲ 3 ವಿಕೆಟ್ ಕಳೆದುಕೊಂಡು ತಲುಪಿತು. ಅಫ್ಘಾನಿಸ್ತಾನದ ಪರ ಒಮರ್‌ಜೈ (64) ಮತ್ತು ನಬಿ (33) ಹೋರಾಟದ ಪ್ರದರ್ಶನ ನೀಡಿದರೂ ತಂಡ 156 ರನ್‌ಗಳಿಸಿತು. ಈ ಜಯದೊಂದಿಗೆ ಭಾರತ 1-0 ಮುನ್ನಡೆ ಸಾಧಿಸಿದೆ.

ಅಭಿಷೇಕ್ ಅಬ್ಬರ; ಅಫ್ಘನ್ ವಿರುದ್ಧ ಸುಲಭವಾಗಿ ಗೆದ್ದ ಟೀಂ ಇಂಡಿಯಾ
ಅಭಿಷೇಕ್ ಶರ್ಮಾ
ಪೃಥ್ವಿಶಂಕರ
|

Updated on:Sep 13, 2026 | 10:42 PM

Share

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಆತಿಥೇಯ ಅಫ್ಘಾನಿಸ್ತಾನವನ್ನು ಸುಲಭವಾಗಿ ಮಣಿಸಿದ ಟೀಂ ಇಂಡಿಯಾ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಭಾರತದ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 156 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಅಭಿಷೇಕ್ ಶರ್ಮಾರ ಸಿಡಿಲಬ್ಬರದ ಬ್ಯಾಟಿಂಗ್​ನಿಂದಾಗಿ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವು ಸಾಧಿಸಿತು. ಅಭಿಷೇಕ್ ಶರ್ಮಾ ಅತ್ಯಧಿಕ 82 ರನ್​ಗಳ ಇನ್ನಿಂಗ್ಸ್ ಆಡಿದರು.

ಒಮರ್‌ಜೈ  ಏಕಾಂಗಿ ಹೋರಾಟ

ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಜಸ್ಪ್ರೀತ್ ಬುಮ್ರಾ ಇನ್ನಿಂಗ್ಸ್​ನ ಮೊದಲ ಓವರ್ ಎರಡನೇ ಎಸೆತದಲ್ಲಿ ಆರಂಭಿಕ ರಹಮಾನುಲ್ಲಾ ಗುರ್ಬಾಜ್ ಅವರ ವಿಕೆಟ್ ಉರುಳಿಸಿದರು. ನಂತರ ಬಂದ ಬ್ಯಾಟ್ಸ್‌ಮನ್​ಗಳು ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇದರ ಪರಿಣಾಮವಾಗಿ ಅಫ್ಘಾನಿಸ್ತಾನ ತಂಡ 43 ರನ್​ಗಳಿಗೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಆದಾಗ್ಯೂ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಅಜ್ಮತುಲ್ಲಾ ಒಮರ್‌ಜೈ 44 ಎಸೆತಗಳಲ್ಲಿ 64 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು.

ದುಬಾರಿಯಾದ ದುಬೆ

ಒಮರ್‌ಜೈ ಜೊತೆಗೆ ಅನುಭವಿ ಮೊಹಮ್ಮದ್ ನಬಿ ಕೂಡ 33 ರನ್​ಗಳ ಕಾಣಿಕೆ ನೀಡುವ ಮೂಲಕ ತಂಡವನ್ನು ಈ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಆದಾಗ್ಯೂ ಅಫ್ಘನ್ ತಂಡ 150 ರನ್​ಗಳ ಗಡಿ ದಾಟುವುದು ಕಷ್ಟಕರವಾಗಿ ತೋರುತ್ತಿತ್ತು. ಆದರೆ 20ನೇ ಓವರ್​ನಲ್ಲಿ ಬೌಲಿಂಗ್ ಮಾಡಲು ಬಂದ ಶಿವಂ ದುಬೆ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 21 ರನ್​ಗಳನ್ನು ಬಿಟ್ಟುಕೊಟ್ಟು ದುಬಾರಿಯಾದರು. ಹೀಗಾಗಿ ಅಫ್ಘನ್ ತಂಡ 156 ರನ್ ಕಲೆಹಾಕಿತು. ಇತ್ತ ಭಾರತದ ಪರ ಅರ್ಷದೀಪ್ ಸಿಂಗ್ 3 ವಿಕೆಟ್‌ಗಳನ್ನು ಕಬಳಿಸಿದರೆ, ಜಸ್ಪ್ರೀತ್ ಬುಮ್ರಾ 4 ಓವರ್‌ಗಳಲ್ಲಿ 26 ರನ್‌ ನೀಡಿ 1 ವಿಕೆಟ್ ಪಡೆದರು. ಅಕ್ಷರ್ ಹಾಗೂ ವರುಣ್ ಕೂಡ ತಲಾ 1 ವಿಕೆಟ್ ಉರುಳಿಸಿದರು.

ಅಭಿಷೇಕ್ ಸ್ಫೋಟಕ ಬ್ಯಾಟಿಂಗ್

ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಕ್ಕೂ ಹೇಳಿಕೊಳ್ಳುವ ಆರಂಭ ಸಿಗಲಿಲ್ಲ. ಅನುಭವಿ ಸಂಜು ಸ್ಯಾಮ್ಸನ್ ದೊಡ್ಡ ಹೊಡೆತಕ್ಕೆ ಕೈಹಾಕಿ ಮೂರನೇ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಆದರೆ ಅಲ್ಲಿಂದ ಜೊತೆಯಾದ ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಅಫ್ಘನ್ ಬೌಲರ್​ಗಳ ಬೆವರಿಳಿಸಿದರು. ಅದರಲ್ಲೂ ಬರಿ ಬೌಂಡರಿ ಹಾಗೂ ಸಿಕ್ಸರ್​ಗಳಿಂದಲೇ ರನ್ ಕಲೆಹಾಕಿದ ಅಭಿಷೇಕ್ ಶರ್ಮಾ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ಟೀಂ ಇಂಡಿಯಾ 9ನೇ ಓವರ್‌ನಲ್ಲಿ 100 ರನ್‌ಗಳ ಗಡಿ ದಾಟಿತು.

ಭಾರತಕ್ಕೆ 7 ವಿಕೆಟ್ ಜಯ

ಅರ್ಧಶತಕದ ಬಳಿಕವೂ ಹೊಡಿಬಡಿ ಆಟ ಮುಂದುವರೆಸಿದ ಅಭಿಷೇಕ್ ಶರ್ಮಾ 32 ಎಸೆತಗಳಲ್ಲಿ 82 ರನ್ ಗಳಿಸಿ ಔಟಾದರು. ಅವರ ಇನ್ನಿಂಗ್ಸ್​ನಲ್ಲಿ 7 ಬೌಂಡರಿ ಹಾಗೂ 7 ಸಿಕ್ಸರ್​ಗಳು ಸೇರಿದ್ದವು. ಅಭಿಷೇಕ್ ಔಟಾದಾಗ ಭಾರತದ ಮೊತ್ತ 139 ರನ್​ಗಳಾಗಿತ್ತು. ಹೀಗಾಗಿ ಅಭಿಷೇಕ್ ತಂಡದ ಗೆಲುವನ್ನು ಖಚಿತಪಡಿಸಿ ತಮ್ಮ ವಿಕೆಟ್ ಒಪ್ಪಿಸಿದರು. ಅಭಿಷೇಕ್ ಜೊತೆಗೆ ಇಶಾನ್ ಕಿಶನ್ ಕೂಡ 42 ರನ್​ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ಶ್ರೇಯಸ್ ಹಾಗೂ ತಿಲಕ್ ಕ್ರಮವಾಗಿ 8 ಮತ್ತು 3 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:37 pm, Sun, 13 September 26

Follow Us