AUS vs NED, ICC World Cup: ಅತಿ ವೇಗದ ಶತಕ, ಅತಿ ದೊಡ್ಡ ಗೆಲುವು: AUS vs NED ಪಂದ್ಯದಲ್ಲಿ ಸೃಷ್ಟಿಯಾದ ದಾಖಲೆಗಳು ನೋಡಿ
Australia Records: ಐಸಿಸಿ ಏಕದಿನ ವಿಶ್ವಕಪ್ 2023 ರ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಎಂಟು ವಿಕೆಟ್‌ಗಳ ನಷ್ಟಕ್ಕೆ 399 ರನ್‌ಗಳನ್ನು ಗಳಿಸಿತು. ಬಳಿಕ ನೆದರ್ಲೆಂಡ್ಸ್ ತಂಡವನ್ನು ಕೇವಲ 21 ಓವರ್‌ಗಳಲ್ಲಿ 90 ರನ್‌ಗಳಿಗೆ ಔಟ್ ಮಾಡಿದರು. ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರರು ಹಲವು ದಾಖಲೆಗಳನ್ನು ಮುರಿದಿದ್ದಾರೆ. ಅವು ಯಾವುವು ನೋಡೋಣ.
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಬುಧವಾರ (ಅಕ್ಟೋಬರ್ 25) ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia vs Netherlands) 309 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಸತತ ಮೂರನೇ ಜಯ ಕಂಡಿತು. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಡೇವಿಡ್ ವಾರ್ನರ್ ಅವರ ಅಮೋಘ ಶತಕಗಳ ನೆರವಿನಿಂದ ಐದು ಬಾರಿಯ ಚಾಂಪಿಯನ್ನರು ಎಂಟು ವಿಕೆಟ್‌ಗಳ ನಷ್ಟಕ್ಕೆ 399 ರನ್‌ಗಳನ್ನು ಗಳಿಸಿದರು. ಬಳಿಕ ನೆದರ್ಲೆಂಡ್ಸ್ ತಂಡವನ್ನು ಕೇವಲ 21 ಓವರ್‌ಗಳಲ್ಲಿ 90 ರನ್‌ಗಳಿಗೆ ಔಟ್ ಮಾಡಿದರು.
ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರರು ಹಲವು ದಾಖಲೆಗಳನ್ನು ಮುರಿದಿದ್ದಾರೆ. ಅವು ಯಾವುವು ನೋಡೋಣ:
- ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಇದೀಗ ಐಸಿಸಿ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಡಚ್ ತಂಡದ ವಿರುದ್ಧ ಕೇವಲ 40 ಎಸೆತಗಳಲ್ಲಿ 100 ರನ್‌ಗಳ ಗಡಿಯನ್ನು ತಲುಪುವ ಮೂಲಕ ಮ್ಯಾಕ್ಸ್‌ವೆಲ್ ದಕ್ಷಿಣ ಆಫ್ರಿಕಾದ ಬ್ಯಾಟರ್ ಏಡೆನ್ ಮಾರ್ಕ್ರಾಮ್ ಅವರ 48 ಎಸೆತಗಳಲ್ಲಿ ವಿಶ್ವಕಪ್ ಶತಕದ ದಾಖಲೆಯನ್ನು ಮುರಿದರು.
- ಬುಧವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನೆದರ್ಲೆಂಡ್ಸ್ ವಿರುದ್ಧ 309 ರನ್ ಗಳ ಜಯ ಸಾಧಿಸಿತು. ಈ ಮೂಲಕ ಏಕದಿನ ವಿಶ್ವಕಪ್ ಇತಿಹಾಸದಲ್ಲೇ ಅತಿ ದೊಡ್ಡ ಗೆಲುವಿನ ದಾಖಲೆ ಬರೆದಿದೆ. 2015 ರ ODI ವಿಶ್ವಕಪ್‌ನಲ್ಲಿ ಮಾರ್ಚ್ 4, 2015 ರಂದು ಪರ್ತ್‌ನಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿದಾಗ ಆಸ್ಟ್ರೇಲಿಯಾವು 275 ರನ್‌ಗಳಿಂದ ಗೆದ್ದಿದ್ದು ದಾಖಲೆಯಾಗಿತ್ತು.
- ಡೇವಿಡ್ ವಾರ್ನರ್ ಈ ಪಂದ್ಯದಲ್ಲಿ ತಮ್ಮ ಎರಡನೇ ಶತಕವನ್ನು ಗಳಿಸಿದರು. ಒಟ್ಟಾರೆಯಾಗಿ ಏಕದಿನ ವಿಶ್ವಕಪ್‌ನಲ್ಲಿ ಇದು ಅವರ ಆರನೇ ಶತಕ. ಇದೀಗ ಪಂದ್ಯಾವಳಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಆರು ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ರೋಹಿತ್ ಶರ್ಮಾ (7) ಮಾತ್ರ ಸದ್ಯ ವಿಶ್ವಕಪ್‌ನಲ್ಲಿ ವಾರ್ನರ್‌ಗಿಂತ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟರ್ ಆಗಿದ್ದಾರೆ.
- ನೆದರ್ಲೆಂಡ್ಸ್ ವಿರುದ್ಧ ವಾರ್ನರ್ ಅವರ 104 ರನ್ ಗಳಿಸುವ ಮೂಲಕ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದವರ ಪಟ್ಟಿಯಲ್ಲಿ ಐದನೇ ಸ್ಥಾನ ತಲುಪಿದ್ದಾರೆ. ಈ ಮೂಲಕ ಭಾರತೀಯ ನಾಯಕ ರೋಹಿತ್ ಶರ್ಮಾ ದಾಖಲೆ ಮುರಿದಿದ್ದಾರೆ. 23 ಪಂದ್ಯಗಳಲ್ಲಿ ವಾರ್ನರ್ 1324 ರನ್ ಗಳಿಸಿದ್ದರೆ, ರೋಹಿತ್ 22 ಪಂದ್ಯಗಳಲ್ಲಿ 1289 ರನ್ ಗಳಿಸಿ ಆರನೇ ಸ್ಥಾನದಲ್ಲಿದ್ದಾರೆ.
- ನೆದರ್ಲೆಂಡ್ಸ್ ವಿರುದ್ಧ 22 ರನ್‌ಗಳಿಗೆ ಒಂದು ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಇದೀಗ ಏಕದಿನ ವಿಶ್ವಕಪ್‌ನಲ್ಲಿ ದಂತಕಥೆ ವಾಸಿಂ ಅಕ್ರಂ ಅವರ 55 ವಿಕೆಟ್‌ಗಳ ದಾಖಲೆಯನ್ನು ಹಿಂದಿಕ್ಕಿ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಜಂಟಿ ಮೂರನೇ ಪ್ರಮುಖ ವಿಕೆಟ್ ಟೇಕರ್ ಆಗಿದ್ದಾರೆ.
- ನೆದರ್ಲೆಂಡ್ಸ್ ಆಲ್‌ರೌಂಡರ್ ಬಾಸ್ ಡಿ ಲೀಡೆ ಏಕದಿನ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸುವ ಮೂಲಕ ಅನಗತ್ಯ ದಾಖಲೆಯನ್ನು ಬರೆದರು. ಬಲಗೈ ಮಧ್ಯಮ ವೇಗಿ 10 ಓವರ್‌ಗಳಲ್ಲಿ 115 ರನ್‌ಗಳನ್ನು ನೀಡಿದರು.
- ನೆದರ್ಲೆಂಡ್ಸ್ ವಿರುದ್ಧದ ಗೆಲುವಿನೊಂದಿಗೆ, ಆಸೀಸ್ ಏಕದಿನ ವಿಶ್ವಕಪ್ 2023 ಅಂಕಗಳ ಪಟ್ಟಿಯಲ್ಲಿ ತಮ್ಮ ನಂ. 4 ಸ್ಥಾನವನ್ನು ಬಲಪಡಿಸಿದೆ. ಮುಂದಿನ ಶನಿವಾರ (ಅಕ್ಟೋಬರ್ 28) ಧರ್ಮಶಾಲಾದಲ್ಲಿ ತಮ್ಮ ಆರನೇ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಸೆಣಸಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ