ವಿಶ್ವಕಪ್ನಲ್ಲಿ ತನ್ನದೇ ದಾಖಲೆ ಮುರಿದು ಇತಿಹಾಸ ನಿರ್ಮಿಸಿದ ಆಸ್ಟ್ರೇಲಿಯಾ
Australia vs Netherlands: ಏಕದಿನ ಕ್ರಿಕೆಟ್ನಲ್ಲಿ ಬೃಹತ್ ಅಂತರದ ಗೆಲುವು ದಾಖಲಿಸಿದ ವಿಶ್ವ ದಾಖಲೆ ಟೀಮ್ ಇಂಡಿಯಾ ಹೆಸರಿನಲ್ಲಿದೆ. 2023 ರಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ 317 ರನ್ಗಳ ಜಯ ಸಾಧಿಸಿ ಈ ವಿಶ್ವ ದಾಖಲೆ ನಿರ್ಮಿಸಿದೆ. ಇದೀಗ ನೆದರ್ಲೆಂಡ್ಸ್ ವಿರುದ್ಧ 309 ರನ್ಗಳ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ನ 24ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಆಸ್ಟ್ರೇಲಿಯಾ ತಂಡ ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ಆರಂಭದಿಂದಲೇ ನೆದರ್ಲೆಂಡ್ಸ್ ಬೌಲರ್ಗಳ ಬೆಂಡೆತ್ತಿದ ಡೇವಿಡ್ ವಾರ್ನರ್ (104) ಭರ್ಜರಿ ಶತಕ ಸಿಡಿಸಿ ಮಿಂಚಿದರು. ಮತ್ತೊಂದೆಡೆ ಸ್ಟೀವ್ ಸ್ಮಿತ್ 71 ರನ್ಗಳನ್ನು ಬಾರಿಸಿದರೆ, ಮಾರ್ನಸ್ ಲಾಬುಶೇನ್ 62 ರನ್ಗಳ ಕೊಡುಗೆ ನೀಡಿದರು.
ಇನ್ನು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 40 ಎಸೆತಗಳಲ್ಲಿ ಶತಕ ಪೂರೈಸಿ ವಿಶ್ವ ದಾಖಲೆ ನಿರ್ಮಿಸಿದರು. ಅಲ್ಲದೆ 44 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 106 ರನ್ ಬಾರಿಸಿದರು. ಈ ಸ್ಪೋಟಕ ಇನಿಂಗ್ಸ್ ಪರಿಣಾಮ ಆಸ್ಟ್ರೇಲಿಯಾ ತಂಡವು ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 399 ರನ್ ಕಲೆಹಾಕಿತು.
400 ರನ್ಗಳ ಗುರಿ ಪಡೆದ ನೆದರ್ಲೆಂಡ್ಸ್ ತಂಡವು ಯಾವುದೇ ಹಂತದಲ್ಲೂ ಆಸೀಸ್ ದಾಳಿಯನ್ನು ಎದುರಿಸಲು ಯಶಸ್ವಿಯಾಗಿರಲಿಲ್ಲ. ಪರಿಣಾಮ 21 ಓವರ್ಗಳಲ್ಲಿ ಕೇವಲ 90 ರನ್ಗಳಿಸಿ ಆಲೌಟ್ ಆದರು. ಈ ಮೂಲಕ ಆಸ್ಟ್ರೇಲಿಯಾ ತಂಡವು 309 ರನ್ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿತು.
ವಿಶ್ವಕಪ್ ದಾಖಲೆ ಬರೆದ ಆಸ್ಟ್ರೇಲಿಯಾ:
ಈ ಗೆಲುವಿನೊಂದಿಗೆ ಏಕದಿನ ವಿಶ್ವಕಪ್ನಲ್ಲಿ ಬೃಹತ್ ಅಂತರದ ಜಯ ಸಾಧಿಸಿದ ವಿಶ್ವ ದಾಖಲೆಯನ್ನು ಆಸ್ಟ್ರೇಲಿಯಾ ಪುನರಚ್ಚಿಸಿದರು. ಅಂದರೆ 2015 ರ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ್ ವಿರುದ್ಧ 275 ರನ್ಗಳ ಗೆಲುವು ಸಾಧಿಸಿದ ದಾಖಲೆ ನಿರ್ಮಿಸಿದ್ದ ಆಸೀಸ್ ಪಡೆ ಈ ಬಾರಿ 309 ರನ್ಗಳ ಅಂತರದಿಂದ ನೆದರ್ಲೆಂಡ್ಸ್ಗೆ ಸೋಲುಣಿಸಿ ಹೊಸ ಇತಿಹಾಸ ನಿರ್ಮಿಸಿದೆ.
ಟೀಮ್ ಇಂಡಿಯಾ ಹೆಸರಿನಲ್ಲಿದೆ ವಿಶ್ವ ದಾಖಲೆ:
ಏಕದಿನ ಕ್ರಿಕೆಟ್ನಲ್ಲಿ ಬೃಹತ್ ಅಂತರದ ಗೆಲುವು ದಾಖಲಿಸಿದ ವಿಶ್ವ ದಾಖಲೆ ಟೀಮ್ ಇಂಡಿಯಾ ಹೆಸರಿನಲ್ಲಿದೆ. 2023 ರಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ 317 ರನ್ಗಳ ಜಯ ಸಾಧಿಸಿ ಈ ವಿಶ್ವ ದಾಖಲೆ ನಿರ್ಮಿಸಿದೆ. ಇದೀಗ ನೆದರ್ಲೆಂಡ್ಸ್ ವಿರುದ್ಧ 309 ರನ್ಗಳ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೋನ್ ಗ್ರೀನ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್‌ವುಡ್, ಆ್ಯಡಂ ಝಂಪಾ.
ಇದನ್ನೂ ಓದಿ: Glenn Maxwell: ತೂಫಾನ್ ಶತಕ…ವಿಶ್ವ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್‌ವೆಲ್
ನೆದರ್ಲೆಂಡ್ಸ್ (ಪ್ಲೇಯಿಂಗ್ XI): ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಸೈಬ್ರಾಂಡ್ ಎಂಗಲ್ಬ್ರೆಕ್ಟ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವ್, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.