ಐಪಿಎಲ್ 2022ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಗುಜರಾತ್ ಟೈಟನ್ಸ್ ಬುಧವಾರ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಗುಜರಾತ್ ತಂಡ ಈ ಪಂದ್ಯದ ಮೂಲಕ ಎಸ್ಆರ್ಹೆಚ್ ವಿರುದ್ದ ಏಕೈಕ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ತಂಡ ಏಳು ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದ್ದು, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಲೀಗ್‌ನಲ್ಲಿ ಏಕೈಕ ಸೋಲನ್ನು ಎದುರಿಸಿದೆ. ಮತ್ತೊಂದೆಡೆ, ಮೊದಲೆರಡು ಪಂದ್ಯಗಳಲ್ಲಿ ಸೋಲಿನ ರುಚಿ ಅನುಭವಿಸಿದ ನಂತರ, ಸತತ ಐದು ಪಂದ್ಯಗಳನ್ನು ಗೆದ್ದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವು ಈ ಪಂದ್ಯದಲ್ಲೂ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೇಲೇರುವ ವಿಶ್ವಾಸದಲ್ಲಿದೆ.
ಈ ಪಂದ್ಯದಲ್ಲಿ ಉಭಯ ತಂಡಗಳ ವೇಗದ ಬೌಲರ್‌ಗಳ ನಡುವೆ ಭರ್ಜರಿ ಹಣಾಹಣಿ ನಡೆಯಲಿದೆ. ಹೈದರಾಬಾದ್‌ನ ಭಾರತದ ಯುವ ಬೌಲರ್ ಉಮ್ರಾನ್ ಮಲಿಕ್ ವೇಗದ ಅಸ್ತ್ರವಾಗಿದ್ದರೆ, ಗುಜರಾತ್ ತಂಡದ ಲಾಕಿ ಫರ್ಗುಸನ್ ಅವರು ಕೂಡ 150 ಕಿ.ಮೀ ವೇಗದಲ್ಲಿ ಚೆಂಡೆಸೆಯುತ್ತಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಇಬ್ಬರಲ್ಲಿ ಯಾರು ವೇಗವಾಗಿ ಚೆಂಡೆಸೆಯಲಿದ್ದಾರೆ ಕಾದು ನೋಡಬೇಕಿದೆ.
ಬೌಲರ್‌ಗಳ ಕದನ:
ಇನ್ನು ದಕ್ಷಿಣ ಆಫ್ರಿಕಾದ ಯುವ ವೇಗಿ ಮಾರ್ಕೊ ಯಾನ್ಸೆನ್ (ಐದು ಪಂದ್ಯಗಳಲ್ಲಿ 6 ವಿಕೆಟ್) ಬೌನ್ಸ್‌ನೊಂದಿಗೆ ಚೆಂಡನ್ನು ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದರೆ. ಉಮ್ರಾನ್ (ಏಳು ಪಂದ್ಯಗಳಲ್ಲಿ 10 ವಿಕೆಟ್) ಉತ್ತಮ ವೇಗವನ್ನು ಹೊಂದಿದ್ದಾರೆ. ಯಾರ್ಕರ್ ಸ್ಪೆಷಲಿಸ್ಟ್ ಟಿ.ನಟರಾಜನ್ (ಏಳು ಪಂದ್ಯಗಳಲ್ಲಿ 15 ವಿಕೆಟ್) ಮತ್ತು ಅನುಭವಿ ಭುವನೇಶ್ವರ್ ಕುಮಾರ್ (ಏಳು ಪಂದ್ಯಗಳಲ್ಲಿ ಒಂಬತ್ತು ವಿಕೆಟ್) ಕೂಡ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಗಾಯಗೊಂಡಿರುವ ವಾಷಿಂಗ್ಟನ್ ಸುಂದರ್ ಬದಲಿಗೆ ಜಗದೀಶ್ ಸುಚಿತ್ ಅವರು ಸ್ಪಿನ್ ಬೌಲಿಂಗ್ ಜವಾಬ್ದಾರಿವಹಿಸಿಕೊಂಡಿದ್ದಾರೆ.
ಹಾಗೆಯೇ ಗುಜರಾತ್ ತಂಡದಲ್ಲಿ ಅನುಭವಿ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಇದ್ದು, ಪ್ರಸಕ್ತ ಸೀಸನ್ನಲ್ಲಿ ಹೆಚ್ಚು ವಿಕೆಟ್ ಪಡೆಯದಿದ್ದರೂ ರನ್ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ (ಏಳು ಪಂದ್ಯಗಳಲ್ಲಿ 10 ವಿಕೆಟ್), ಅಲ್ಝಾರಿ ಜೋಸೆಫ್ ಅತ್ಯುತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಒಂದಾರ್ಥದಲ್ಲಿ ಎಸ್ಆರ್ಹೆಚ್-ಗುಜರಾತ್ ಟೈಟನ್ಸ್ ನಡುವಣ ಪಂದ್ಯ ಬೌಲರ್‌ಗಳ ಕಾಳಗವಾಗಿ ಮಾರ್ಪಟ್ಟಿದೆ.
ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಪ್ರಿಯಮ್ ಗಾರ್ಗ್, ವಿಷ್ಣು ವಿನೋದ್, ಗ್ಲೆನ್ ಫಿಲಿಪ್ಸ್, ಆರ್ ಸಮರ್ಥ್, ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ರೊಮೆರೊ ಶೆಫರ್ಡ್, ಮಾರ್ಕೊ ಯಾನ್ಸನ್, ಜೆ ಸುಚಿತ್ , ಶ್ರೇಯಸ್ ಗೋಪಾಲ್, ಭುವನೇಶ್ವರ್ ಕುಮಾರ್, ಸೀನ್ ಅಬಾಟ್, ಕಾರ್ತಿಕ್ ತ್ಯಾಗಿ, ಸೌರಭ್ ತಿವಾರಿ, ಫಜಲ್ಹಾಕ್ ಫಾರೂಕಿ, ಉಮ್ರಾನ್ ಮಲಿಕ್, ಟಿ ನಟರಾಜನ್.
ಗುಜರಾತ್ ಟೈಟಾನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ರಶೀದ್ ಖಾನ್, ಶುಭಮನ್ ಗಿಲ್, ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ಅಭಿನವ್ ಸದಾರಂಗನಿ, ರಾಹುಲ್ ತೆವಾಟಿಯಾ, ನೂರ್ ಅಹ್ಮದ್, ಸಾಯಿ ಕಿಶೋರ್, ವಿಜಯ್ ಶಂಕರ್, ಜಯಂತ್ ಯಾದವ್, ಡೊಮಿನಿಕ್ ಡ್ರೇಕ್ಸ್, ದರ್ಶನ್ ನಲ್ಕಂಡೆ, ಯಶ್ ದಯಾಳ್, ಪ್ರದೀಪ್ ಸಾಂಗ್ವಾನ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ವರುಣ್ ಆರೋನ್, ಬಿ ಸಾಯಿ ಸುದರ್ಶನ್.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ