Happy Birthday Anil Kumble: 52ನೇ ವಸಂತಕ್ಕೆ ಕಾಲಿಟ್ಟ ಅನಿಲ್ ಕುಂಬ್ಳೆಗೆ ‘ಜಂಬೋ’ ಎಂಬ ಹೆಸರಿಟ್ಟವರು ಯಾರು ಗೊತ್ತಾ?

| Updated By: ಪೃಥ್ವಿಶಂಕರ

Updated on: Oct 17, 2022 | 10:23 AM

Happy Birthday Anil Kumble: ನನ್ನ ಅಡ್ಡಹೆಸರು ಜಂಬೋ, ಈ ಹೆಸರನ್ನು ನನಗೆ ಕೊಟ್ಟಿದ್ದು ನವಜೋತ್ ಸಿಂಗ್ ಸಿಧು. ದೆಹಲಿಯ ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆದ ಇರಾನಿ ಟ್ರೋಫಿಯಲ್ಲಿ ಸಿಧು ನನಗೆ ಈ ಅಡ್ಡ ಹೆಸರನ್ನಿಟ್ಟರು.

Happy Birthday Anil Kumble: 52ನೇ ವಸಂತಕ್ಕೆ ಕಾಲಿಟ್ಟ ಅನಿಲ್ ಕುಂಬ್ಳೆಗೆ ‘ಜಂಬೋ’ ಎಂಬ ಹೆಸರಿಟ್ಟವರು ಯಾರು ಗೊತ್ತಾ?
anil kumble
Image Credit source: star sports
Follow us on

ಇಂದು ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ (Anil Kumble) 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಟೀಂ ಇಂಡಿಯಾ ಕಂಡ ಲೆಜೆಂಡರಿ ಸ್ಪಿನ್ನರ್​ಗಳಲ್ಲಿ ಕುಂಬ್ಳೆ ಮೊದಲಿಗರು. ಟೆಸ್ಟ್ ಕ್ರಿಕೆಟ್​ನಲ್ಲಿ ಪಾಕ್ ವಿರುದ್ಧದ ಪಂದ್ಯದಲ್ಲಿ ಕುಂಬ್ಳೆ ಮಾಡಿದ್ದ 10 ವಿಕೆಟ್​ಗಳ ದಾಖಲೆಯನ್ನು ಯಾರಾದರು ಮರೆಯುವುದುಂಟ. ಹೀಗೆ ದಶಕಗಳ ಕಾಲ ಟೀಂ ಇಂಡಿಯಾವನ್ನು ಆಳಿದ ಅನಿಲ್ ಕುಂಬ್ಳೆ, ಲೆಗ್ ಸ್ಪಿನ್‌ಗೆ ವೇಗ ಮತ್ತು ಬೌನ್ಸ್ ಸೇರಿಸಿ ಬ್ಯಾಟ್ಸ್‌ಮನ್‌ಗಳನ್ನು ಒತ್ತಡಕ್ಕೆ ಸಿಲುಕಿಸುವಲ್ಲಿ ಮಾಸ್ಟರ್ ಆಗಿದ್ದರು. ಇದರಿಂದಾಗಿಯೇ ಈ ಸ್ಪಿನ್ ಲೋಕದ ಮಾಂತ್ರಿಕನಿಗೆ ‘ಜಂಬೋ’ (Jumbo) ಎಂಬ ಅಡ್ಡ ಹೆಸರು ಕೂಡ ಇದೆ. ಅಷ್ಟಕ್ಕೂ ಕುಂಬ್ಳೆಗೆ ಜಂಬೋ ಎಂದು ಹೆಸರಿಟ್ಟವರು ಯಾರು ಗೊತ್ತ? ಹಾಗೆಯೇ ಈ ಹೆಸರನ್ನು ಅವರಿಗೆ ಯಾಕೆ ಇಡಲಾಯಿತು ಗೊತ್ತ? ಇಲ್ಲಿದೆ ನೋಡಿ ಕುತೂಹಲಕಾರಿ ಮಾಹಿತಿ.

ಅಭಿಮಾನಿಯೊಬ್ಬರ ಈ ಪ್ರಶ್ನೆಗೆ ಉತ್ತರಿಸಿದ್ದ ಅನಿಲ್ ಕುಂಬ್ಳೆ, “ನನ್ನ ಅಡ್ಡಹೆಸರು ಜಂಬೋ, ಈ ಹೆಸರನ್ನು ನನಗೆ ಕೊಟ್ಟಿದ್ದು ನವಜೋತ್ ಸಿಂಗ್ ಸಿಧು. ದೆಹಲಿಯ ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆದ ಇರಾನಿ ಟ್ರೋಫಿಯಲ್ಲಿ ಸಿಧು ನನಗೆ ಈ ಅಡ್ಡ ಹೆಸರನ್ನಿಟ್ಟರು. ಆ ಪಂದ್ಯದಲ್ಲಿ ನಾನು ರೆಸ್ಟ್ ಆಫ್ ಇಂಡಿಯಾ ಪರ ಆಡುತ್ತಿದ್ದೆ. ಸಿಧು ಕೂಡ ಈ ತಂಡದಲ್ಲಿ ಆಡುತ್ತಿದ್ದರು. ತಂಡದ ಪರ ನಾನು ಬೌಲಿಂಗ್ ಮಾಡುವ ವೇಳೆ ಸಿಧು, ಮಿಡ್ ಆನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಆಗ ನಾನು ಎಸೆದ ಒಂದು ಚೆಂಡು ತುಂಬಾ ಬೌನ್ಸ್ ಆಯಿತು. ಈ ಎಸೆತವನ್ನು ಕಂಡ ಸಿಧು, ‘ಜಂಬೋ ಜೆಟ್’ ಎಂದು ಕರೆದರು. ಅದರ ನಂತರ ‘ಜೆಟ್’ ಪದವನ್ನು ಕೈಬಿಟ್ಟು, ನನ್ನ ತಂಡದ ಸದಸ್ಯರು ನನ್ನನ್ನು ಜಂಬೋ ಎಂದು ಕರೆಯಲು ಪ್ರಾರಂಭಿಸಿದರು ಎಂಬ ಸ್ವಾರಸ್ಯಕರ ಮಾಹಿತಿಯನ್ನು ಕುಂಬ್ಳೆ ಹೊರಹಾಕಿದ್ದಾರೆ.

ಇದನ್ನೂ ಓದಿ:T20 World Cup 2022: ಕೊರೊನಾ ಸೋಂಕಿಗೆ ಒಳಗಾದರೂ ಟಿ20 ವಿಶ್ವಕಪ್ ಆಡಬಹುದು! ಐಸಿಸಿ ಮಹತ್ವದ ಘೋಷಣೆ

ವೃತ್ತಿ ಬದುಕು

ಕುಂಬ್ಳೆ ತಮ್ಮ 18 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಹಲವಾರು ಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಏಪ್ರಿಲ್ 1990 ರಲ್ಲಿ ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಕುಂಬ್ಳೆ ಆ ವರ್ಷದ ಆಗಸ್ಟ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. 132 ಟೆಸ್ಟ್ ಮತ್ತು 271 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕುಂಬ್ಳೆ ಕ್ರಮವಾಗಿ 619 ಮತ್ತು 337 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಅವರು 132 ಟೆಸ್ಟ್‌ಗಳಲ್ಲಿ 2506 ರನ್ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟೆಸ್ಟ್‌ನಲ್ಲಿ ಅವರ ಬ್ಯಾಟ್‌ನಿಂದ 1 ಶತಕ ಮತ್ತು 5 ಅರ್ಧ ಶತಕಗಳು ಬಂದಿವೆ. ಜೊತೆಗೆ 271 ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಕುಂಬ್ಳೆ 938 ರನ್ ಗಳಿಸಿದ್ದಾರೆ.

ಪಾಕ್ ವಿರುದ್ಧ 10 ವಿಕೆಟ್

ಕುಂಬ್ಳೆ ಎಂದೊಡನೆ ಎಲ್ಲರಿಗು ನೆನಪಾಗುವುದು ಅವರು ಪಾಕ್ ವಿರುದ್ಧ ತೋರಿದ ಅದೊಂದು ಪ್ರದರ್ಶನ. ಫೆಬ್ರವರಿ 7, 1999 ರಂದು, ಸ್ಟಾರ್ ಸ್ಪಿನ್ನರ್ ಅನಿಲ್ ಕುಂಬ್ಳೆ ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ನಲ್ಲಿ ಒಂದು ಇನ್ನಿಂಗ್ಸ್ನಲ್ಲಿ 10 ವಿಕೆಟ್ಗಳನ್ನು ಪಡೆದು ವಿಶ್ವ ದಾಖಲೆ ಬರೆದಿದ್ದರು. ಈ ಮೂಲಕ ಇಂಗ್ಲೆಂಡ್‌ನ ದಿಗ್ಗಜ ಕ್ರಿಕೆಟಿಗ ಜಿಮ್ ಲೇಕರ್ ನಂತರ ಈ ದಾಖಲೆ ಬರೆದ ಎರಡನೇ ಬೌಲರ್ ಎಂಬ ಖ್ಯಾತಿಗೆ ಕುಂಬ್ಳೆ ಭಾಜನರಾಗಿದ್ದರು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕೆ 420 ರನ್‌ಗಳ ಗುರಿ ನೀಡಿತ್ತು. ಕುಂಬ್ಳೆ ಅವರ 10 ವಿಕೆಟ್‌ಗಳ ನೆರವಿನಿಂದ ಟೀಂ ಇಂಡಿಯಾ ಪಾಕಿಸ್ತಾನವನ್ನು 212 ರನ್‌ಗಳಿಂದ ಸೋಲಿಸಿತು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:23 am, Mon, 17 October 22