Happy Birthday Virat Kohli: 34ನೇ ವಸಂತಕ್ಕೆ ಕಾಲಿಕ ಕಿಂಗ್ ಕೊಹ್ಲಿಯ 34 ಅದ್ಭುತ ದಾಖಲೆಗಳಿವು..!

| Updated By: ಪೃಥ್ವಿಶಂಕರ

Updated on: Nov 05, 2022 | 11:32 AM

Happy Birthday Virat Kohli: ಟೀಂ ಇಂಡಿಯಾ ಪರ ಇದುವರೆಗೆ 102 ಟೆಸ್ಟ್, 262 ಮತ್ತು 113 ಟಿ20 ಪಂದ್ಯಗಳನ್ನಾಡಿದ್ದು, ಈ ಪಂದ್ಯಗಳಲ್ಲಿ ಸಾಕಷ್ಟು ದಾಖಲೆಗಳ ಸುರಿಮಳೆಗೈದಿದ್ದಾರೆ.

Happy Birthday Virat Kohli: 34ನೇ ವಸಂತಕ್ಕೆ ಕಾಲಿಕ ಕಿಂಗ್ ಕೊಹ್ಲಿಯ 34 ಅದ್ಭುತ ದಾಖಲೆಗಳಿವು..!
ವಿರಾಟ್ ಕೊಹ್ಲಿ
Image Credit source: thequint
Follow us on

ವಿಶ್ವ ಕ್ರಿಕೆಟ್​ನ ಸದ್ಯದ ಸುಲ್ತಾನ ಕಿಂಗ್ ಕೊಹ್ಲಿಗೆ (Virat Kohli) ಇಂದು 34ರ ಸಂಭ್ರಮ. ತನ್ನ ಕ್ರಿಕೆಟ್ ಪಾಂಡಿತ್ಯದಿಂದ ಇಡೀ ವಿಶ್ವದಲ್ಲೇ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ವಿರಾಟ್​ಗೆ ಪ್ರಪಂಚದ ಮೂಲೆ ಮೂಲೆಯಿಂದ ಶುಭಾಷಯಗಳ ಮಹಾಪೂರವೇ ಹರಿದಬರುತ್ತಿದೆ. 2008 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದೊಂದಿಗೆ ಭಾರತದ ಪರ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನಾಡಿದ ಕೊಹ್ಲಿ ಆನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ಇಂದು ತಮ್ಮ 34ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ರನ್ ಸಾಮ್ರಾಟ, ಟೀಂ ಇಂಡಿಯಾ (team india) ಪರ ಇದುವರೆಗೆ 102 ಟೆಸ್ಟ್, 262 ಮತ್ತು 113 ಟಿ20 ಪಂದ್ಯಗಳನ್ನಾಡಿದ್ದು, ಈ ಪಂದ್ಯಗಳಲ್ಲಿ ಸಾಕಷ್ಟು ದಾಖಲೆಗಳ ಸುರಿಮಳೆಗೈದಿದ್ದಾರೆ. ಅಂತಹ ದಾಖಲೆಗಳಲ್ಲಿ ಪ್ರಮುಖವಾದ 34 ದಾಖಲೆಗಳ ವಿವರ ಹೀಗಿದೆ.

ಭಾರತದ ಪರ 102 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ, ಇದರಲ್ಲಿ 27 ಶತಕ ಮತ್ತು 28 ಅರ್ಧಶತಕಗಳನ್ನು ಒಳಗೊಂಡಂತೆ 8 ಸಾವಿರದ 74 ರನ್‌ ಬಾರಿಸಿದ್ದಾರೆ. ಹಾಗೆಯೇ ಏಕದಿನ ಪಂದ್ಯಗಳಲ್ಲಿ 43 ಶತಕ ಹಾಗೂ 64 ಅರ್ಧ ಶತಕ ಸೇರಿದಂತೆ ಒಟ್ಟು 12 ಸಾವಿರದ 344 ರನ್ ಗಳಿಸಿದ್ದಾರೆ. ಸದ್ಯ ಟಿ20 ಕ್ರಿಕೆಟ್‌ನಲ್ಲಿ ರನ್ ಮಳೆ ಹರಿಸುತ್ತಿರುವ ವಿರಾಟ್, 1 ಶತಕ ಮತ್ತು 36 ಅರ್ಧಶತಕಗಳನ್ನು ಒಳಗೊಂಡಂತಡ 3 ಸಾವಿರದ 932 ರನ್ ಗಳಿಸಿದ್ದಾರೆ.

  1. ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯನ್ನು ಕೊಹ್ಲಿ ಹೊಂದಿದ್ದು, ಅವರು ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿಯವರೆಗೆ ಬರೋಬ್ಬರಿ 9 ಶತಕಗಳನ್ನು ಸಿಡಿಸಿದ್ದಾರೆ.
  2. ಟಿ20ಯಲ್ಲಿ ಅತಿ ಹೆಚ್ಚು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದ ದಾಖಲೆಯನ್ನೂ ಕೊಹ್ಲಿ ಮಾಡಿದ್ದು, ಇದುವರೆಗೂ ಈ ಪ್ರಶಸ್ತಿಯನ್ನು 7 ಬಾರಿ ಗೆದ್ದಿದ್ದಾರೆ.
  3. ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಸರಾಸರಿ ದಾಖಲೆ ಹೊಂದಿರುವ ಕೊಹ್ಲಿ 113 ಪಂದ್ಯಗಳಲ್ಲಿ 53.13 ಸರಾಸರಿ ರನ್ ಬಾರಿಸಿದ್ದಾರೆ.
  4. ಟಿ20ಯಲ್ಲಿ ಅತಿ ಹೆಚ್ಚು ಅರ್ಧಶತಕಗಳು ಕೊಹ್ಲಿ ಬ್ಯಾಟ್‌ನಿಂದ ಬಂದಿದ್ದು, ವಿರಾಟ್ ಚುಟುಕು ಮಾದರಿಯಲ್ಲಿ 36 ಅರ್ಧಶತಕಗಳನ್ನು ಗಳಿಸಿದ್ದಾರೆ.
  5. ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 3500 ರನ್ ಗಳಿಸಿದ ದಾಖಲೆ  ಕೊಹ್ಲಿ ಹೆಸರಿನಲ್ಲಿದ್ದು, ಅವರು ಕೇವಲ 96 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
  6. 2021 ರಲ್ಲಿ ನ್ಯೂಜಿಲೆಂಡ್ ತಂಡವನ್ನು 372 ರನ್‌ಗಳಿಂದ ಸೋಲಿಸುವುದರೊಂದಿಗೆ ಟೀಂ ಇಂಡಿಯಾ ಟೆಸ್ಟ್ ಇತಿಹಾಸದಲ್ಲಿ ತನ್ನ ಅತಿದೊಡ್ಡ ಗೆಲುವನ್ನು ಸಾಧಿಸಿತ್ತು. ಈ ಮೂಲಕ ಕೊಹ್ಲಿ ಟೀಂ ಇಂಡಿಯಾ ನಾಯಕನಾಗಿ ಅತಿದೊಡ್ಡ ಟೆಸ್ಟ್ ಗೆಲುವಿನ ದಾಖಲೆಯನ್ನು ಬರೆದಿದ್ದಾರೆ.
  7. ಅತಿ ವೇಗವಾಗಿ 8 ಸಾವಿರ, 9 ಸಾವಿರ, 10 ಸಾವಿರ, 11 ಸಾವಿರ, 12 ಸಾವಿರ ರನ್ ಗಳಿಸಿದ ದಾಖಲೆಯೂ ಕಿಂಗ್ ಕೊಹ್ಲಿ ಹೆಸರಿನಲ್ಲಿದೆ.
  8. ಹೆಚ್ಚಿನ ಟಿ20 ರನ್‌ಗಳು ಕೂಡ ಕೊಹ್ಲಿ ಖಾತೆಗೆ ಲಿಂಕ್ ಆಗಿದ್ದು, ಅವರು ಇಲ್ಲಿಯವರೆಗೆ 3932 ರನ್ ಗಳಿಸಿದ್ದಾರೆ.
  9. ಟಿ20ಯಲ್ಲಿ ಕೊಹ್ಲಿ 15 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ.
  10. ಟಿ20 ವಿಶ್ವಕಪ್ ಇತಿಹಾಸದಲ್ಲಿ ಕೊಹ್ಲಿ ಗರಿಷ್ಠ 1065 ರನ್ ಗಳಿಸಿದ್ದಾರೆ.
  11. ಟಿ20 ವಿಶ್ವಕಪ್‌ನಲ್ಲಿ ಎರಡು ಬಾರಿ ಪಂದ್ಯಾವಳಿಯ ಆಟಗಾರ ಪ್ರಶಸ್ತಿ ಪಡೆದ ವಿಶ್ವದ ಏಕೈಕ ಕ್ರಿಕೆಟಿಗ ಕೊಹ್ಲಿ.
  12. ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 10,000 ರನ್ ಗಳಿಸಿದ ದಾಖಲೆ ಬರೆದಿದ್ದು, 262 ಪಂದ್ಯಗಳಲ್ಲಿ ಇದುವರೆಗೆ 12 ಸಾವಿರದ 344 ರನ್ ಗಳಿಸಿದ್ದಾರೆ.
  13. ಒಂದು ಕ್ಯಾಲೆಂಡರ್ ವರ್ಷದಲ್ಲಿ 11 ಇನ್ನಿಂಗ್ಸ್‌ಗಳಲ್ಲಿ 1000 ರನ್ ಗಳಿಸಿದ ದಾಖಲೆಯೂ ವಿರಾಟ್ ಹೆಸರಿನಲ್ಲಿದ್ದು, ಅವರು 2018 ರಲ್ಲಿ ಈ ಅದ್ಭುತ ದಾಖಲೆ ಬರೆದಿದ್ದರು.
  14. ಏಕದಿನ ರ‍್ಯಾಂಕಿಂಗ್‌ನಲ್ಲಿ 890 ರೇಟಿಂಗ್ ಅಂಕಗಳನ್ನು ಗಳಿಸಿದ ಮೊದಲ ಭಾರತೀಯ ಕೊಹ್ಲಿ.
  15. ಹಾಗೆಯೇ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅತ್ಯಧಿಕ 922 ರೇಟಿಂಗ್ ಪಾಯಿಂಟ್‌ಗಳನ್ನು ಕೊಹ್ಲಿ ಹೊಂದಿದ್ದಾರೆ.
  16. ಕೊಹ್ಲಿ ನಾಯಕನಾಗಿ 9 ಬಾರಿ 150ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
  17. 2 ತಂಡಗಳ ವಿರುದ್ಧ ಸತತ 3 ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆ ಕೊಹ್ಲಿಯದ್ದು.
  18. ಎಲ್ಲಾ ಮೂರು ಮಾದರಿಯ ಕ್ರಿಕೆಟ್‌ನಲ್ಲಿ 50 ಗೆಲುವು ಸಾಧಿಸಿದ ಮೊದಲ ಆಟಗಾರ ಕೊಹ್ಲಿ.
  19. 2 ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದ ಭಾರತದ ಮೊದಲ ನಾಯಕ ಕೊಹ್ಲಿ.
  20. ಕಿಂಗ್ ಕೊಹ್ಲಿ ಅವರ ಏಕದಿನ ರೇಟಿಂಗ್ 911 ಆಗಿದ್ದು, ಇದು ಭಾರತೀಯ ಆಟಗಾರನ ಅತ್ಯುತ್ತಮ ರೇಟಿಂಗ್ ಆಗಿದೆ.
  21. ಒಂದು  ಐಪಿಎಲ್‌ ಸೀಸನ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಬರೆದಿರುವ ಕೊಹ್ಲಿ 4 ಶತಕ ಸೇರಿದಂತೆ 973 ರನ್ ಗಳಿಸಿದ್ದಾರೆ.
  22. 2018 ರಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿರುವ ವಿರಾಟ್,  13 ಏಕದಿನ ಪಂದ್ಯಗಳಲ್ಲಿ 1322 ರನ್ ಮತ್ತು  14 ಟೆಸ್ಟ್‌ ಪಂದ್ಯಗಳಲ್ಲಿ 1202 ರನ್ ಗಳಿಸಿದ್ದಾರೆ.
  23. ಟಿ20 ವಿಶ್ವಕಪ್‌ನಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೊಹ್ಲಿ ಹೊಂದಿದ್ದು, ಪಾಕಿಸ್ತಾನ ವಿರುದ್ಧ 308 ರನ್ ಗಳಿಸಿದ ದಾಖಲೆ ಬರೆದಿದ್ದಾರೆ.
  24. ಕಿಂಗ್ ಕೊಹ್ಲಿ ಅತಿ ವೇಗದ 30 ಮತ್ತು 35 ಏಕದಿನ ಶತಕ ಬಾರಿಸಿ ಹೆಸರು ಮಾಡಿದ್ದಾರೆ.
  25. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 15 ಸಾವಿರ ಮತ್ತು 17 ಸಾವಿರ ರನ್ ಗಳಿಸಿದ ಕೀರ್ತಿ ಕೊಹ್ಲಿಯದ್ದು.
  26. ಅತಿ ಕಡಿಮೆ ಇನ್ನಿಂಗ್ಸ್‌ನಲ್ಲಿ 22 ಸಾವಿರ ಅಂತಾರಾಷ್ಟ್ರೀಯ ರನ್ ಗಳಿಸಿದ ದಾಖಲೆ ಈ ಅದ್ಭುತ ಬ್ಯಾಟ್ಸ್‌ಮನ್ ಹೆಸರಿನಲ್ಲಿದೆ. ಅವರು 493 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
  27. ಟಿ20ಯಲ್ಲಿ 10,000 ರನ್ ಗಳಿಸಿದ ಭಾರತದ ಮೊದಲ ಆಟಗಾರ ಕೊಹ್ಲಿ. ಅವರು ಇದುವರೆಗೆ 358 ಟಿ20 ಪಂದ್ಯಗಳಲ್ಲಿ 11 ಸಾವಿರದ 250 ರನ್ ಗಳಿಸಿದ್ದಾರೆ.
  28. ನಾಯಕನಾಗಿ ಗರಿಷ್ಠ 6 ದ್ವಿಶತಕಗಳು ಕೂಡ ಕೊಹ್ಲಿ ಬ್ಯಾಟ್‌ನಿಂದ ಹೊರಹೊಮ್ಮಿವೆ.
  29. ನಾಯಕನಾಗಿ, ಟೆಸ್ಟ್‌ನಲ್ಲಿ ವೇಗವಾಗಿ 4000 ರನ್ ಗಳಿಸಿದ ಸಾಧನೆ ಕೊಹ್ಲಿಯ ಬ್ಯಾಟ್‌ನಿಂದ ಹೊರಬಿತ್ತು. ಅವರು 65 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
  30. ಕಿಂಗ್ ಕೊಹ್ಲಿ ಏಕದಿನ ಪಂದ್ಯದಲ್ಲಿ ವೇಗವಾಗಿ ಶತಕ ಬಾರಿಸಿದ ಭಾರತೀಯ ಆಟಗಾರನೆನಿಸಕೊಂಡಿದ್ದಾರೆ. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ 52 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
  31. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಕೊಹ್ಲಿ ಹೆಸರಿನಲ್ಲಿದೆ. ಅವರು ಇಲ್ಲಿಯವರೆಗೆ 6411 ರನ್ ಗಳಿಸಿದ್ದಾರೆ.
  32. ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಗರಿಷ್ಠ ಬ್ಯಾಟಿಂಗ್ ಸರಾಸರಿ ಹೊಂದಿದ್ದು, ಅವರ ಸರಾಸರಿ 80 ಮೀರಿದೆ.
  33. ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ಭಾರತದ ನಾಯಕ ಕೊಹ್ಲಿ. ಅವರ ನಾಯಕತ್ವದಲ್ಲಿ ಭಾರತ 40 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ.
  34. ಅಷ್ಟೇ ಅಲ್ಲ, ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಏಷ್ಯನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಅವರು 221 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

Published On - 11:30 am, Sat, 5 November 22