ZIM vs AFG: 24 ವರ್ಷಗಳ ನಂತರ ತವರಿನಲ್ಲಿ ಇತಿಹಾಸ ಸೃಷ್ಟಿಸಿದ ಜಿಂಬಾಬ್ವೆ
Zimbabwe vs Afghanistan Test: ಹರಾರೆ ಟೆಸ್ಟ್‌ನಲ್ಲಿ ಜಿಂಬಾಬ್ವೆ, ಅಫ್ಘಾನಿಸ್ತಾನವನ್ನು ಕೇವಲ 3 ದಿನಗಳಲ್ಲಿ ಇನ್ನಿಂಗ್ಸ್ ಅಂತರದಿಂದ ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದೆ. ಇದು ಜಿಂಬಾಬ್ವೆಗೆ 24 ವರ್ಷಗಳ ನಂತರ ಬಂದ ಇನ್ನಿಂಗ್ಸ್ ಗೆಲುವು. ಬೆನ್ ಕರನ್ ಭರ್ಜರಿ ಶತಕ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು. ಅಫ್ಘಾನಿಸ್ತಾನದ ಬ್ಯಾಟಿಂಗ್ ವಿಫಲವಾಗಿ ಜಿಂಬಾಬ್ವೆ ಸುಲಭ ಗೆಲುವು ಸಾಧಿಸಿತು.

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಜಿಂಬಾಬ್ವೆ ಮತ್ತು ಅಫ್ಘಾನಿಸ್ತಾನ (Zimbabwe vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯವನ್ನು ಆತಿಥೇಯ ಜಿಂಬಾಬ್ವೆ ಕೇವಲ ಮೂರು ದಿನಗಳಲ್ಲಿ ಗೆದ್ದುಕೊಂಡಿದೆ. ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿ ಅಫ್ಘಾನಿಸ್ತಾನದ ವಿರುದ್ಧ ಇನ್ನಿಂಗ್ಸ್ ಗೆಲುವು ಸಾಧಿಸಿದ್ದು ಈ ಪಂದ್ಯದ ಪ್ರಮುಖ ಹೈಲೇಟ್ಸ್ ಆಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ 127 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಆ ಬಳಿಕ ಜಿಂಬಾಬ್ವೆ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 359 ರನ್ ಕಲೆಹಾಕಿತು. ಇತ್ತ ಎರಡನೇ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನ್ 159ರನ್‌ಗಳಿಗೆ ಆಲೌಟ್ ಆಗುವ ಮೂಲಕ 79 ರನ್ಗಳ ಇನ್ನಿಂಗ್ಸ್ ಸೋಲು ಅನುಭವಿಸಿತು.
ಜಿಂಬಾಬ್ವೆಗೆ ಇನ್ನಿಂಗ್ಸ್ ಗೆಲುವು
ಈ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನವನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 127 ರನ್‌ಗಳಿಗೆ ಆಲೌಟ್ ಮಾಡಿತು. ಅಫ್ಘಾನ್ ಪರ ರಹಮಾನುಲ್ಲಾ ಗುರ್ಬಾಜ್ ಅತ್ಯಧಿಕ 33 ರನ್ಗಳ ಇನ್ನಿಂಗ್ಸ್ ಆಡಿದರೆ, ಅಬ್ದುಲ್ ಮಲಿಕ್ 30 ರನ್ ಕಲೆಹಾಕಿದರು. ಇತ್ತ ಜಿಂಬಾಬ್ವೆ ಪರ ಬ್ರಾಡ್ ಇವಾನ್ಸ್ ಐದು ವಿಕೆಟ್‌ಗಳನ್ನು ಪಡೆದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಜಿಂಬಾಬ್ವೆ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 359 ರನ್ ಕಲೆಹಾಕಿತು. ತಂಡದ ಪರ ಶತಕದ ಇನ್ನಿಂಗ್ಸ್ ಆಡಿದ ಬೆನ್ ಕರನ್ 256 ಎಸೆತಗಳಲ್ಲಿ 121 ರನ್ ಬಾರಿಸಿದರು. ಈ ಮೂಲಕ ಎಂಟು ವರ್ಷಗಳಲ್ಲಿ ಜಿಂಬಾಬ್ವೆ ಪರ ತವರಿನಲ್ಲಿ ನಡೆದ ಟೆಸ್ಟ್‌ನಲ್ಲಿ ಆರಂಭಿಕ ಆಟಗಾರನೊಬ್ಬ ಶತಕ ಬಾರಿಸಿದ ದಾಖಲೆ ಬರೆದರು.
ಇತ್ತ 232 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನದ ಬ್ಯಾಟಿಂಗ್ ವಿಭಾಗ ಮತ್ತೆ ವಿಫಲವಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಇಡೀ ತಂಡ 159 ರನ್‌ಗಳಿಗೆ ಆಲೌಟ್ ಆಯಿತು. ಇಬ್ರಾಹಿಂ ಜದ್ರಾನ್ ಅತ್ಯಧಿಕ 42 ರನ್ಗಳ ಇನ್ನಿಂಗ್ಸ್ ಆಡಿದರೆ, ಬಹೀರ್ ಷಾ 32 ರನ್ ಬಾರಿಸಿದರು. ಜಿಂಬಾಬ್ವೆ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ರಿಚರ್ಡ್ ನ್ಗರವಾ 37 ರನ್‌ಗಳಿಗೆ 5 ವಿಕೆಟ್ ಪಡೆದರು. ಉಳಿದಂತೆ ಬ್ಲೆಸಿಂಗ್ ಮುಜರಬಾನಿ 3 ವಿಕೆಟ್, ತನಕಾ ಚಿವಂಗಾ ಕೂಡ ಎರಡು ವಿಕೆಟ್ ಪಡೆದರು. ಪರಿಣಾಮವಾಗಿ, ಜಿಂಬಾಬ್ವೆ ಪಂದ್ಯವನ್ನು ಇನ್ನಿಂಗ್ಸ್ ಮತ್ತು 73 ರನ್‌ಗಳಿಂದ ಗೆದ್ದುಕೊಂಡಿತು.
24 ವರ್ಷಗಳ ದಾಖಲೆ ಉಡೀಸ್
ಇದರೊಂದಿಗೆ, ಜಿಂಬಾಬ್ವೆ 24 ವರ್ಷಗಳ ನಂತರ ಇನ್ನಿಂಗ್ಸ್ ಅಂತರದಿಂದ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡ ಸಾಧನೆ ಮಾಡಿದೆ. ಇದಕ್ಕೂ ಮೊದಲು, 2001 ರಲ್ಲಿ ಜಿಂಬಾಬ್ವೆ, ಬಾಂಗ್ಲಾದೇಶವನ್ನು ಇನ್ನಿಂಗ್ಸ್ ಅಂತರದಿಂದ ಸೋಲಿಸಿತ್ತು. ಹಾಗೆಯೇ 12 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಸಾಧನೆಯನ್ನು ಸಹ ಜಿಂಬಾಬ್ವೆ ಮಾಡಿತು. ಈ ಸ್ಮರಣೀಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಬೆನ್ ಕರನ್ ಅವರೊಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
