ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಮುಂಬರುವ ಟಿ20 ಸರಣಿಗಳಲ್ಲಿ ಭಾರತ ತಂಡವನ್ನು ಹೊಸ ನಾಯಕ ಮುನ್ನಡೆಸಲಿದ್ದಾರೆ. ಅದರಂತೆ ಭಾರತ ತಂಡದ ಸಾರಥ್ಯವಹಿಸುವ ಆಟಗಾರ ಯಾರು ಎಂಬ ಪ್ರಶ್ನೆಗೆ ಹಾರ್ದಿಕ್ ಪಾಂಡ್ಯ ಹೆಸರು ಕೇಳಿ ಬಂದಿದೆ.
ಈ ಹಿಂದೆ ಭಾರತ ಟಿ20 ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಟಿ20 ವಿಶ್ವಕಪ್ಗೂ ಮುಂಚಿತವಾಗಿ ಕೆಳಗಿಳಿಸಲಾಗಿತ್ತು. ಅಲ್ಲದೆ ರೋಹಿತ್ ಶರ್ಮಾಗೆ ಕ್ಯಾಪ್ಟನ್ ಪಟ್ಟ ನೀಡಲಾಗಿತ್ತು. ಇದೀಗ ಟಿ20 ವಿಶ್ವಕಪ್ ಗೆಲುವಿನೊಂದಿಗೆ ಹಿಟ್ಮ್ಯಾನ್ ಟಿ20ಐ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಹೀಗಾಗಿ ಟಿ20 ವಿಶ್ವಕಪ್ನಲ್ಲಿ ಉಪನಾಯಕರಾಗಿ ಕಾಣಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಮುಂಬರುವ ಸರಣಿಗಳಲ್ಲಿ ಕ್ಯಾಪ್ಟನ್ ಆಗುವುದು ಬಹುತೇಕ ಖಚಿತ. ಇದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಪುಷ್ಠೀಕರಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಜಯ್ ಶಾ, ಭಾರತ ತಂಡದ ನಾಯಕನ ಆಯ್ಕೆಯನ್ನು ಆಯ್ಕೆದಾರರು ನಿರ್ಧರಿಸುತ್ತಾರೆ. ಅವರೊಂದಿಗೆ ಚರ್ಚಿಸಿದ ನಂತರ ನಾವು ಅದನ್ನು ಘೋಷಿಸುತ್ತೇವೆ. ನೀವು ಹಾರ್ದಿಕ್ ಬಗ್ಗೆ ಕೇಳಿದ್ದೀರಿ, ಅವರ ಫಾರ್ಮ್ ಬಗ್ಗೆ ಸಾಕಷ್ಟು ಪ್ರಶ್ನೆಗಳಿದ್ದವು.
ಇದಾಗ್ಯೂ ನಾವು ಮತ್ತು ಆಯ್ಕೆದಾರರು ಅವರ ಮೇಲೆ ನಂಬಿಕೆಯಿಟ್ಟೆವು. ಅದರಂತೆ ಟಿ20 ವಿಶ್ವಕಪ್ಗೆ ಆಯ್ಕೆ ಮಾಡಿದೆವು. ಇದೀಗ ಅದ್ಭುತ ಪ್ರದರ್ಶನ ನೀಡಿ ಹಾರ್ದಿಕ್ ಪಾಂಡ್ಯ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ಜಯ್ ಶಾ ಹೇಳಿದ್ದಾರೆ.
ಇಲ್ಲಿ ಜಯ್ ಶಾ ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕಾರಣ, ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿಯಾಗಿ ಪಾಂಡ್ಯ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಭಾರತ ಮತ್ತು ಝಿಂಬಾಬ್ವೆ ನಡುವೆ ಟಿ20 ಸರಣಿಯು ಜುಲೈ 6 ರಿಂದ ಶುರುವಾಗಲಿದೆ. ಟಿ20 ವಿಶ್ವಕಪ್ನಲ್ಲಿ ಕಾಣಿಸಿಕೊಂಡ ಬಹುತೇಕ ಆಟಗಾರರು ಈ ಸರಣಿಯಿಂದ ಹೊರಗುಳಿದಿದ್ದಾರೆ. ಅಲ್ಲದೆ 5 ಪಂದ್ಯಗಳ ಈ ಸರಣಿಗಾಗಿ ಯುವ ಪಡೆಯನ್ನು ಆಯ್ಕೆ ಮಾಡಲಾಗಿದ್ದು, ಈ ತಂಡದ ನಾಯಕತ್ವವನ್ನು ಶುಭ್ಮನ್ ಗಿಲ್ಗೆ ವಹಿಸಲಾಗಿದೆ.
ಇದನ್ನೂ ಓದಿ: Shoaib Akhtar: ಭಗವದ್ಗೀತೆ ಶ್ಲೋಕ ಹಂಚಿಕೊಂಡ ಶೊಯೇಬ್ ಅಖ್ತರ್
ಇನ್ನು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಕಾಣಿಸಿಕೊಳ್ಳಲಿದ್ದು, ಈ ಸರಣಿ ವೇಳೆ ಭಾರತ ಟಿ20 ತಂಡದ ನೂತನ ನಾಯಕನನ್ನು ಘೋಷಣೆ ಮಾಡಲಾಗುತ್ತದೆ. ಅದರಂತೆ ರೋಹಿತ್ ಶರ್ಮಾ ಉತ್ತರಾಧಿಕಾರಿಯಾಗಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು.
Published On - 2:32 pm, Mon, 1 July 24