T20 World Cup 2026: 10ನೇ ಆವೃತ್ತಿಯ ಟಿ20 ವಿಶ್ವಕಪ್ ಎಲ್ಲಿ ನಡೆಯಲ್ಲಿದೆ? ಎಷ್ಟು ತಂಡಗಳು ಭಾಗವಹಿಸಲಿವೆ? ಸ್ಪಷ್ಟನೆ ನೀಡಿದ ಐಸಿಸಿ
T20 World Cup 2026: 2026ರಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಮುಂಬರುವ ಆವೃತ್ತಿಯಲ್ಲಿ ಕೇವಲ 20 ತಂಡಗಳು ಭಾಗವಹಿಸಲಿವೆ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಆದರೆ 2026 ರ ಆವೃತ್ತಿಯ ನಂತರದ ಆವೃತ್ತಿಗಳಲ್ಲಿ ಎಷ್ಟು ತಂಡಗಳು ಆಡಲಿವೆ ಎಂಬುದರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದಿದೆ.
9ನೇ ಆವೃತ್ತಿಯ ಟಿ20 ವಿಶ್ವಕಪ್ ಅಂದರೆ 2024 ರ ಟಿ20 ವಿಶ್ವಕಪ್‌ಗೆ ಅದ್ಧೂರಿ ತೆರೆಬಿದ್ದಿದೆ. ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಆತಿಥ್ಯದಲ್ಲಿ ನಡೆದ ಈ ಆವೃತ್ತಿ ಬರೋಬ್ಬರಿ 1 ತಿಂಗಳುಗಳ ಕಾಲ ನಡೆಯಿತು. ಜೂನ್ 29 ರಂದು ನಡೆದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ವಿಶ್ವಕಪ್ ಎತ್ತಿ ಹಿಡಿದಿದೆ. ಇದರೊಂದಿಗೆ ಈ ಆವೃತ್ತಿಗೆ ವಿದಾಯ ಹೇಳಲಾಗಿದೆ. ಇನ್ನು 10ನೇ ಆವೃತ್ತಿಗೆ ಇನ್ನೂ 2 ವರ್ಷಗಳ ಸಮಯಾವಕಾಶವಿದೆ. ಅದಾಗ್ಯೂ ಮುಂದಿನ ಆವೃತ್ತಿಯ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಹೀಗಾಗಿ ಮುಂದಿನ ಆವೃತ್ತಿ ಎಲ್ಲಿ ನಡೆಯಲ್ಲಿದೆ? ಎಷ್ಟು ತಂಡಗಳು ಭಾಗವಹಿಸಲಿವೆ? ಎಂಬುದರ ಬಗ್ಗೆ ಐಸಿಸಿ ಸ್ಪಷ್ಟನೆ ನೀಡಿದೆ.
ವಾಸ್ತವವಾಗಿ ಇದೀಗ ಮುಕ್ತಾಯಗೊಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ಗೆ 20 ತಂಡಗಳು ಪ್ರವೇಶ ಪಡೆದಿದ್ದವು. ಇದನ್ನು ಪ್ರಕಟಿಸುವ ಸಂದರ್ಭದಲ್ಲಿ ಐಸಿಸಿ, ಕ್ರಿಕೆಟ್ ಅನ್ನು ಸಾಧ್ಯವಾದಷ್ಟು ದೇಶಗಳಿಗೆ ಕೊಂಡೊಯ್ಯುವುದು ತಮ್ಮ ಯೋಜನೆಯಾಗಿದ್ದು, ಈ ಆಟವು ಹೆಚ್ಚು ಜನಪ್ರಿಯವಾಗುತ್ತದೆ ಎಂದು ಹೇಳಿತ್ತು. ಇದೇ ವೇಳೆ ಮುಂದಿನ ಟಿ20 ವಿಶ್ವಕಪ್‌ನಲ್ಲಿ ಈ ಟೂರ್ನಿಯಲ್ಲಿ 20ರ ಬದಲಿಗೆ 24 ತಂಡಗಳು ಎಂಟ್ರಿ ಕೊಡಲಿವೆ ಎಂಬ ಊಹಪೋಹಗಳು ಶುರುವಾಗಿವೆ. ಇದೀಗ ಈ ಚರ್ಚೆಗೆ ಐಸಿಸಿ ಪ್ರತಿಕ್ರಿಯೆ ನೀಡಿದೆ.
ಐಸಿಸಿ ವಿಶ್ವಕಪ್ ಟ್ರೋಫಿಗಳ ತಯಾರಕರು ಯಾರು? ಇದರ ತೂಕ, ಎತ್ತರ, ಗಾತ್ರ, ಬೆಲೆ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ
ಮುಂದಿನ ಆವೃತ್ತಿ ಎಲ್ಲಿ ನಡೆಯಲ್ಲಿದೆ?
2026 ರಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್‌ನ 10ನೇ ಆವೃತ್ತಿಗೆ ಭಾರತ ಮತ್ತು ಶ್ರೀಲಂಕಾ ಆತಿಥ್ಯವಹಿಸಲಿವೆ. 2026ರ ಫುಟ್‌ಬಾಲ್ ವಿಶ್ವಕಪ್‌ಗೆ 48 ತಂಡಗಳು ಎಂಟ್ರಿ ಕೊಟ್ಟಿರುವಂತೆಯೇ 2026 ರ ಐಸಿಸಿ ಟಿ20 ವಿಶ್ವಕಪ್‌ಗೆ 24 ತಂಡಗಳಿಗೆ ಪ್ರವೇಶ ನೀಡಲಿವೆ ಎಂಬ ಚರ್ಚೆ ನಡೆಯುತ್ತಿದೆ. 2024 ರ ಟಿ20 ವಿಶ್ವಕಪ್‌ನಲ್ಲಿ ತಲಾ 5 ತಂಡಗಳ 4 ಗುಂಪುಗಳನ್ನು ರಚಿಸಲಾಗಿತ್ತು ಅದೇ ರೀತಿ ಮುಂದಿನ ವಿಶ್ವಕಪ್‌ನಲ್ಲಿ ತಲಾ 6 ತಂಡಗಳ 4 ಗುಂಪುಗಳು ರಚನೆಯಾಗಲಿವೆ ಎಂದು ಹೇಳಲಾಗುತ್ತಿದೆ. ಆದರೆ ಇದಕ್ಕೆಲ್ಲ ಸ್ಪಷ್ಟನೆ ನೀಡಿರುವ ಐಸಿಸಿ…
ಐಸಿಸಿ ಹೇಳಿದ್ದೇನು?
ಈ ಚರ್ಚೆಗೆ ಅಂತ್ಯ ಹಾಡಿರುವ ಐಸಿಸಿ, 2026ರಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಮುಂಬರುವ ಆವೃತ್ತಿಯಲ್ಲಿ ಕೇವಲ 20 ತಂಡಗಳು ಭಾಗವಹಿಸಲಿವೆ ಎಂದು ಸ್ಪಷ್ಟಪಡಿಸಿದೆ. ಆದರೆ 2026 ರ ಆವೃತ್ತಿಯ ನಂತರದ ಆವೃತ್ತಿಗಳಲ್ಲಿ ಎಷ್ಟು ತಂಡಗಳು ಆಡಲಿವೆ ಎಂಬುದರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದಿದೆ. ಉಳಿದಂತೆ 2026 ರ ನಂತರ, ಪಂದ್ಯಾವಳಿಯ ಮುಂದಿನ ಆವೃತ್ತಿಯನ್ನು 2028 ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆಸಲು ಪ್ರಸ್ತಾಪಿಸಲಾಗಿದೆ. ಇದರ ನಂತರ, 2030 ರ ಟಿ20 ವಿಶ್ವಕಪ್‌ಗೆ ಯುಕೆ, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಆತಿಥ್ಯ ವಹಿಸಲಿವೆ ಎಂದು ವರದಿಯಾಗಿದೆ.
2026 ರಲ್ಲಿ ಭಾಗವಹಿಸುವ ತಂಡಗಳು
ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2026 ರ ಟಿ20 ವಿಶ್ವಕಪ್‌ನಲ್ಲಿ ಎರಡೂ ತಂಡಗಳಿಗೆ ಆತಿಥೇಯರಾಗಿ ಪ್ರವೇಶ ನೀಡಲಾಗುವುದು. ಇದಲ್ಲದೆ, 2024 ರ ಟಿ20 ವಿಶ್ವಕಪ್‌ನಲ್ಲಿ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿದ್ದ ತಂಡಗಳು ಸಹ ನೇರ ಪ್ರವೇಶವನ್ನು ಪಡೆಯುತ್ತವೆ. ಇದು ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಯುಎಸ್ಎ ತಂಡಗಳನ್ನು ಒಳಗೊಂಡಿರುತ್ತದೆ. ಅದೇ ಸಮಯದಲ್ಲಿ, ಪ್ರಸ್ತುತ ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಐರ್ಲೆಂಡ್ ತಂಡಗಳನ್ನು ಒಳಗೊಂಡಿರುವ ಟಿ20 ಕ್ರಿಕೆಟ್‌ನ ಅಂತರರಾಷ್ಟ್ರೀಯ ಶ್ರೇಯಾಂಕದ ಮೂಲಕ 3 ತಂಡಗಳು ಪ್ರವೇಶ ಪಡೆಯುತ್ತವೆ. ಇವೆಲ್ಲವೂ ಸೇರಿ ಒಟ್ಟು 12 ತಂಡಗಳು ಟೂರ್ನಿಗೆ ನೇರ ಪ್ರವೇಶ ಪಡೆಯಲಿವೆ. ಅದೇ ಸಮಯದಲ್ಲಿ, ಉಳಿದ 8 ತಂಡಗಳು ಅರ್ಹತಾ ಸುತ್ತನ್ನು ಆಡುವ ಮೂಲಕ ಟೂರ್ನಿಗೆ ಅರ್ಹತೆ ಪಡೆಯಬೇಕಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ