Hardik Pandya: 8 ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯಗೆ ವಿಶೇಷ ಸವಾಲು..!
Team India: ಏಕದಿನ ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ ಬಲಿಷ್ಠ ಬಳಗವನ್ನು ರೂಪಿಸುವ ಇರಾದೆಯಲ್ಲಿದೆ. ಅದರಲ್ಲೂ ಪ್ಲೇಯಿಂಗ್ ಇಲೆವೆನ್ನಲ್ಲಿ ಹೆಚ್ಚಿನ ಆಲ್ರೌಂಡರ್ಗೆ ಮಣೆ ಹಾಕಲು ಮುಂಬರುವ ಸರಣಿಗಳಲ್ಲಿ ಪ್ರಯೋಗ ನಡೆಸಲಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವಣ ಸೀಮಿತ ಓವರ್ಗಳ ಸರಣಿಯು ಗುರುವಾರದಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಮೊದಲು 3 ಏಕದಿನ ಪಂದ್ಯಗಳನ್ನು ಆಡಲಾಗುತ್ತಿದ್ದು, ಇದಾದ ಬಳಿಕ 5 ಪಂದ್ಯಗಳ ಟಿ20 ಸರಣಿ ಜರುಗಲಿದೆ. ಅಂದರೆ ಮುಂದಿನ 18 ದಿನಗಳಲ್ಲಿ ಟೀಮ್ ಇಂಡಿಯಾ ಒಟ್ಟು 8 ಪಂದ್ಯಗಳನ್ನಾಡಲಿದೆ. ಈ ಎಂಟು ಪಂದ್ಯಗಳು ಭಾರತ ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಪಾಲಿಗೆ ಫಿಟ್ನೆಸ್ ಟೆಸ್ಟ್.
ಏಕೆಂದರೆ ಮುಂಬರುವ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಹಾರ್ದಿಕ್ ಪಾಂಡ್ಯರನ್ನು ಪೂರ್ಣ ಪ್ರಮಾಣದ ಬೌಲರ್ ಆಗಿ ಈ ಸರಣಿಯಲ್ಲಿ ಪರೀಕ್ಷಿಸಲಾಗುತ್ತದೆ. ಈ ಹಿಂದೆ ಗಾಯದ ಸಮಸ್ಯೆಯ ಕಾರಣ 10 ಓವರ್ ಬೌಲಿಂಗ್ ಮಾಡಲು ಪಾಂಡ್ಯ ಹಿಂದೇಟು ಹಾಕಿದ್ದರು. ಆ ಬಳಿಕ ಸಂಪೂರ್ಣ ಫಿಟ್ನೆಸ್ನೊಂದಿಗೆ ಮರಳಿದ್ದ ಪಾಂಡ್ಯ ಐಪಿಎಲ್ ಹಾಗೂ ಟಿ20 ಸರಣಿಗಳಲ್ಲಿ ಬೌಲಿಂಗ್ ಮಾಡಿದ್ದರು.
ಆದರೆ ಇದೀಗ ಏಕದಿನ ಸರಣಿಯಲ್ಲಿ 10 ಓವರ್ಗಳನ್ನು ಎಸೆಯುವ ಸವಾಲು ಹಾರ್ದಿಕ್ ಪಾಂಡ್ಯ ಮುಂದಿದೆ. ಏಕದಿನ ವಿಶ್ವಕಪ್ ದೃಷ್ಟಿಯಲ್ಲಿ ಪಾಂಡ್ಯ ಅವರ ಫಿಟ್ನೆಸ್ ಬಹುಮುಖ್ಯ. ಅದರಲ್ಲೂ ಅವರು ಪೂರ್ಣ ಪ್ರಮಾಣದ ವೇಗದ ಬೌಲರ್ ಆಲ್ರೌಂಡರ್ ಆಗಿ ಕಾಣಿಸಿಕೊಳ್ಳಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾ ಮುಂದಿದೆ.
ಹೀಗಾಗಿ ಏಕದಿನ ವಿಶ್ವಕಪ್ಗೂ ಮುನ್ನ ವೆಸ್ಟ್ ಇಂಡೀಸ್ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯರಿಂದ 10 ಓವರ್ಗಳನ್ನು ಬೌಲಿಂಗ್ ಮಾಡಿಸುವ ಇರಾದೆಯಲ್ಲಿದ್ದಾರೆ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್. ಒಂದು ವೇಳೆ ವೆಸ್ಟ್ ಇಂಡೀಸ್ ವಿರುದ್ಧ ಹಾರ್ದಿಕ್ ಪಾಂಡ್ಯ ನಿರಾಳವಾಗಿ 10 ಓವರ್ ಎಸೆಯುವಲ್ಲಿ ಯಶಸ್ವಿಯಾದರೆ, ಟೀಮ್ ಇಂಡಿಯಾದ ಪ್ಲೇಯಿಂಗ್ 11 ಮತ್ತಷ್ಟು ಬಲಿಷ್ಠವಾಗುವುದರಲ್ಲಿ ಅನುಮಾನವೇ ಇಲ್ಲ.
ಇದನ್ನೂ ಓದಿ: Hardik Pandya: ಟೆಸ್ಟ್ ಕ್ರಿಕೆಟ್ಗೆ ಹಾರ್ದಿಕ್ ಪಾಂಡ್ಯ ಕಂಬ್ಯಾಕ್..?
ಏಕೆಂದರೆ ಸ್ಪಿನ್ ಆಲ್ರೌಂಡರ್ ಆಗಿ ರವೀಂದ್ರ ಜಡೇಜಾ ಈಗಾಗಲೇ 10 ಓವರ್ಗಳನ್ನು ಬೌಲಿಂಗ್ ಮಾಡುತ್ತಿದ್ದಾರೆ. ಇದೀಗ ವೇಗದ ಬೌಲರ್ ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಕೂಡ 10 ಓವರ್ಗಳನ್ನು ಬೌಲಿಂಗ್ ಮಾಡುವಲ್ಲಿ ಯಶಸ್ವಿಯಾದರೆ, ಟೀಮ್ ಇಂಡಿಯಾ ಏಕದಿನ ವಿಶ್ವಕಪ್ನಲ್ಲಿ 6 ಬೌಲರ್ಗಳನ್ನು ಬಳಸಿಕೊಳ್ಳಬಹುದು. ಹೀಗಾಗಿಯೇ ಮುಂದಿನ 8 ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಪೂರ್ಣ ಪ್ರಮಾಣದ ಬೌಲರ್ ಆಗಿ ಕಾಣಿಸಿಕೊಳ್ಳುತ್ತಾರಾ ಎಂಬುದೇ ಕುತೂಹಲ.