VIDEO: ಒಂದೇ ಕೈಯಲ್ಲಿ ಸ್ಟನ್ನಿಂಗ್ ಕ್ಯಾಚ್: ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್​ಗೆ ಪ್ರೇಕ್ಷಕರು ನಿಬ್ಬೆರಗು

|

Updated on: Oct 10, 2024 | 10:33 AM

India vs Bangladesh: ಬಾಂಗ್ಲಾದೇಶ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ 2-0 ಅಂತರದಿಂದ ವಶಪಡಿಸಿಕೊಂಡಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ 7 ವಿಕೆಟ್​ಗಳ ಜಯ ಸಾಧಿಸಿದ್ದ ಭಾರತ ತಂಡವು ಇದೀಗ ದ್ವಿತೀಯ ಪಂದ್ಯವನ್ನು 86 ರನ್​ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಕೊನೆಯ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಸರಣಿ ಜಯಿಸಿದೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಜಯಭೇರಿ ಬಾರಿಸಿದೆ. ಈ ಗೆಲುವಿನ ರೂವಾರಿಗಳಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಒಬ್ಬರು. ಏಕೆಂದರೆ ಈ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಾಂಡ್ಯ ಕೇವಲ 19 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 32 ರನ್ ಚಚ್ಚಿದ್ದರು. ಇದಾದ ಬಳಿಕ ಫೀಲ್ಡಿಂಗ್​ನಲ್ಲೂ ಪಾಂಡ್ಯ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅದರಲ್ಲೂ 14ನೇ ಓವರ್​ನಲ್ಲಿ ಡೀಪ್ ಬೌಂಡರಿ ಲೈನ್​ನಲ್ಲಿ ಅತ್ಯುತ್ತಮ ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ್ದರು. ವರುಣ್ ಚಕ್ರವರ್ತಿ ಎಸೆದ ಈ ಓವರ್​ನ 3ನೇ ಎಸೆತದಲ್ಲಿ ರಿಶಾದ್ ಹೊಸೈನ್ ಡೀಪ್ ಮಿಡ್ ವಿಕೆಟ್​ನತ್ತ ಬಾರಿಸಿದ್ದರು.

ಇನ್ನೇನು ಚೆಂಡು ಬೌಂಡರಿ ಗೆರೆ ದಾಟಿ ಸಿಕ್ಸ್ ಆಗಲಿದೆ ಅನ್ನುವಷ್ಟರಲ್ಲಿ ಓಡಿ ಬಂದ ಹಾರ್ದಿಕ್ ಪಾಂಡ್ಯ ಒಂದೇ ಕೈಯಲ್ಲಿ ಚೆಂಡನ್ನು ಬಂಧಿಸಿದ ಡೈವ್ ಹೊಡೆದರು. ಈ ಸ್ಟನ್ನಿಂಗ್ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪಾಂಡ್ಯ ಅವರ ಪರಾಕ್ರಮದ ಫೀಲ್ಡಿಂಗ್​ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ನಿತೇಶ್ ರೆಡ್ಡಿ (74) ಹಾಗೂ ರಿಂಕು ಸಿಂಗ್ (53) ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 221 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 135 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 86 ರನ್​ಗಳ ಭರ್ಜರಿ ಜಯ ಸಾಧಿಸಿ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.

 

 

Published on: Oct 10, 2024 10:32 AM