Champions Trophy 2025: ಪಾಕಿಸ್ತಾನದಿಂದ ಚಾಂಪಿಯನ್ಸ್​ ಟ್ರೋಫಿ ಎತ್ತಂಗಡಿ ಸಾಧ್ಯತೆ

Champions Trophy 2025: 2008 ರಿಂದ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸಿಲ್ಲ. ಕಳೆದ 12 ವರ್ಷಗಳಲ್ಲಿ ಉಭಯ ತಂಡಗಳು ಯಾವುದೇ ದ್ವಿಪಕ್ಷೀಯ ಸರಣಿಯನ್ನು ಸಹ ಆಡಿಲ್ಲ. ಇದೀಗ ಐಸಿಸಿ ಟೂರ್ನಿಗೆ ಪಾಕಿಸ್ತಾನ್ ಆತಿಥ್ಯವಹಿಸಲು ಸಜ್ಜಾಗಿದೆ. ಆದರೆ ಪಾಕ್​ನಲ್ಲಿ ಟೂರ್ನಿ ನಡೆದರೆ ಭಾರತ ತಂಡ ಪಾಲ್ಗೊಳ್ಳುವ ಸಾಧ್ಯತೆಯಿಲ್ಲ.

Champions Trophy 2025: ಪಾಕಿಸ್ತಾನದಿಂದ ಚಾಂಪಿಯನ್ಸ್​ ಟ್ರೋಫಿ ಎತ್ತಂಗಡಿ ಸಾಧ್ಯತೆ
Champions Trophy 2025
Follow us
TV9 Web
| Updated By: ಝಾಹಿರ್ ಯೂಸುಫ್

Updated on: Oct 10, 2024 | 11:58 AM

ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಂಗಡಿ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಪ್ರಸ್ತುತ ವರದಿಗಳ ಪ್ರಕಾರ, ಐಸಿಸಿ ಪಾಕ್​ನಲ್ಲಿ ಟೂರ್ನಿಯನ್ನು ಅಯೋಜಿಸಲು ಇನ್ನೂ ಸಹ ಅನುಮೋದನೆ ನೀಡಿಲ್ಲ. ಪಾಕಿಸ್ತಾನದಲ್ಲಿ ಟೂರ್ನಿ ನಡೆದರೆ ಭಾರತ ತಂಡವು ಹಿಂದೆ ಸರಿಯುವ ಸಾಧ್ಯತೆಯಿದ್ದು, ಹೀಗಾಗಿ ಇದೀಗ ಚಾಂಪಿಯನ್ಸ್ ಟ್ರೋಫಿಯನ್ನು ಪಂದ್ಯಾವಳಿಯನ್ನು ಸ್ಥಳಾಂತರಿಸುವ ಬಗ್ಗೆ ಚಿಂತಿಸಲಾಗಿದೆ.

ಇದಕ್ಕಾಗಿ ಐಸಿಸಿ ಮೂರು ಪರ್ಯಾಯ ಸ್ಥಳಗಳನ್ನು ನಿಗದಿ ಮಾಡಿದೆ. ಅದರಂತೆ ಪಾಕಿಸ್ತಾನದಲ್ಲಿ ಟೂರ್ನಿ ಆಯೋಜಿಸಲು ಐಸಿಸಿ ಅನುಮೋದನೆ ನೀಡದಿದ್ದರೆ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಥವಾ ಶ್ರೀಲಂಕಾ ಅಥವಾ ಸೌತ್ ಆಫ್ರಿಕಾದಲ್ಲಿ ಚಾಂಪಿಯನ್ಸ್​ ಟ್ರೋಫಿ ನಡೆಯಬಹುದು ಎಂದು ವರದಿಯಾಗಿದೆ.

ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ:

ಐಸಿಸಿ ಪಾಕಿಸ್ತಾನದಿಂದ ಚಾಂಪಿಯನ್ಸ್ ಟ್ರೋಫಿಯನ್ನು ಸ್ಥಳಾಂತರಿಸುವ ಪ್ರಸ್ತಾಪವನ್ನು ಮುಂದಿಟ್ಟರೆ ಪಾಕ್ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲು ಮುಂದಾಗಲಿದೆ. ಅದರಂತೆ ಭಾರತದ ಪಂದ್ಯಗಳಿಗೆ ಶ್ರೀಲಂಕಾ ಅಥವಾ ಯುಎಇ ಆತಿಥ್ಯವಹಿಸುವ ಸಾಧ್ಯತೆಯಿದ್ದು, ಉಳಿದ ಪಂದ್ಯಗಳು ಪಾಕಿಸ್ತಾನದಲ್ಲೇ ಜರುಗಲಿದೆ.

ಏಕೆಂದರೆ ಕಳೆದ ಬಾರಿಯ ಏಷ್ಯಾಕಪ್ ಆಯೋಜನೆಯ ಹಕ್ಕನ್ನು ಪಾಕ್ ಕ್ರಿಕೆಟ್ ಮಂಡಳಿ ಹೊಂದಿತ್ತು. ಆದರೆ ಭಾರತ ತಂಡವು ಪಾಕ್​ಗೆ ತೆರಳಲು ಹಿಂದೇಟು ಹಾಕಿದ್ದರಿಂದ ಟೂರ್ನಿಯನ್ನು ಹೈಬ್ರೀಡ್ ಮಾದರಿಯಲ್ಲಿ ಆಯೋಜಿಸಲಾಗಿತ್ತು. ಅದರಂತೆ ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ಏಷ್ಯಾಕಪ್​ನ್ನು ಆಯೋಜಿಸಲಾಗಿತ್ತು.

ಇಲ್ಲಿ ಭಾರತ ತಂಡವು ಫೈನಲ್ ಸೇರಿದಂತೆ ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಇದೀಗ ಚಾಂಪಿಯನ್ಸ್​ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಬರಲು ಟೀಮ್ ಇಂಡಿಯಾ ಹಿಂದೇಟು ಹಾಕುವ ಸಾಧ್ಯತೆಯಿದ್ದು, ಹೀಗಾಗಿ ಚಾಂಪಿಯನ್ಸ್ ಟ್ರೋಫಿಯನ್ನು ಕೂಡ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಬೇಕಾದ ಅನಿವಾರ್ಯತೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮುಂದಿದೆ.

ಕರುಡು ವೇಳಾಪಟ್ಟಿ ರೆಡಿ:

ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಈಗಾಗಲೇ ಚಾಂಪಿಯನ್ಸ್ ಟ್ರೋಫಿಯ ಕರಡು ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ವೇಳಾಪಟ್ಟಿಯಂತೆ 2025ರ ಫೆಬ್ರವರಿ 19 ರಿಂದ ಚಾಂಪಿಯನ್ಸ್ ಟ್ರೋಫಿ ಶುರುವಾಗಲಿದ್ದು, ಮಾರ್ಚ್ 9 ರಂದು ಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ: Joe Root: ಡಬಲ್ ಸೆಂಚುರಿ ಸಿಡಿಸಿ ಸಚಿನ್ ದಾಖಲೆ ಸರಿಗಟ್ಟಿದ ಜೋ ರೂಟ್

ಇಲ್ಲಿ ಟೀಮ್ ಇಂಡಿಯಾದ ಪಂದ್ಯಗಳಿಗೆ ಲಾಹೋರ್​ನ ಗಡ್ಡಾಫಿ ಸ್ಟೇಡಿಯಂ ಅನ್ನು ನಿಗದಿ ಮಾಡಲಾಗಿದೆ. ಅದರಂತೆ ಮೊದಲ ಸುತ್ತಿನಲ್ಲಿ ಭಾರತ ತಂಡವು ಲಾಹೋರ್​ನಲ್ಲಿ ಮೂರು ಪಂದ್ಯಗಳನ್ನಾಡಲಿದೆ ಎಂದು ಪಿಸಿಬಿ ತಿಳಿಸಿದೆ. ಆದರೆ ಟೂರ್ನಿಯ ಆಯೋಜನೆಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಸಿದ್ಧತೆಗಳನ್ನು ಶುರು ಮಾಡಿದರೂ, ಬಿಸಿಸಿಐ ಟೀಮ್ ಇಂಡಿಯಾ ಭಾಗವಹಿಸುವಿಕೆಯನ್ನು ಇನ್ನೂ ಸಹ ಖಚಿತಪಡಿಸಿಲ್ಲ ಎಂಬುದು ವಿಶೇಷ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿರುವ ತಂಡಗಳು:

  • ಭಾರತ
  • ಸೌತ್ ಆಫ್ರಿಕಾ
  • ಆಸ್ಟ್ರೇಲಿಯಾ
  • ನ್ಯೂಝಿಲ್ಯಾಂಡ್
  • ಪಾಕಿಸ್ತಾನ್ (ಆತಿಥೇಯ ರಾಷ್ಟ್ರ)
  • ಅಫ್ಘಾನಿಸ್ತಾನ್
  • ಇಂಗ್ಲೆಂಡ್
  • ಬಾಂಗ್ಲಾದೇಶ್