2ನೇ ಸ್ಥಾನಕ್ಕೇರಿದ ಟೀಮ್ ಇಂಡಿಯಾ: ಮುಂದಿನ ಪಂದ್ಯದಲ್ಲಿ ಸೆಮಿಫೈನಲ್ ಭವಿಷ್ಯ ನಿರ್ಧಾರ
ICC Womens T20 World Cup, 2024: ವುಮೆನ್ಸ್ ಟಿ20 ವಿಶ್ವಕಪ್ನ 18ನೇ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್ನಲ್ಲಿ ಭಾರತ ತಂಡವು ಅಮೋಘ ಗೆಲುವು ದಾಖಲಿಸಿದರೆ, ಸೆಮಿಫೈನಲ್ ಎಂಟ್ರಿಯನ್ನು ಬಹುತೇಕ ಖಚಿತಪಡಿಸಿಕೊಳ್ಳಬಹುದು.
ಮಹಿಳಾ ಟಿ20 ವಿಶ್ವಕಪ್ನ 12ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಗೆಲುವು ದಾಖಲಿಸಿದೆ. ಈ ಭರ್ಜರಿ ಜಯದೊಂದಿಗೆ ಭಾರತ ತಂಡವು ತನ್ನ ಸೆಮಿಫೈನಲ್ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಇದಕ್ಕೂ ಮುನ್ನ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸೋತಿದ್ದ ಟೀಮ್ ಇಂಡಿಯಾ, ಇದೀಗ ಪಾಕಿಸ್ತಾನ್ ಹಾಗೂ ಶ್ರೀಲಂಕಾ ತಂಡಗಳನ್ನು ಬಗ್ಗು ಬಡಿದಿದೆ.
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿತ್ತು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ನಾಯಕಿಯ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟಿಂಗ್ ಪ್ರದರ್ಶಿಸಿದ ಶಫಾಲಿ ವರ್ಮಾ (43) ಹಾಗೂ ಸ್ಮೃತಿ ಮಂಧಾನ (50) ಮೊದಲ ವಿಕೆಟ್ಗೆ 98 ರನ್ಗಳ ಜೊತೆಯಾಟವಾಡಿದರು.
ಆ ಬಳಿಕ ಬಂದ ಹರ್ಮನ್ಪ್ರೀತ್ ಕೌರ್ ಕೇವಲ 27 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 52 ರನ್ ಚಚ್ಚಿದರು. ಈ ಬಿರುಸಿನ ಅರ್ಧಶತಕದೊಂದಿಗೆ ಟೀಮ್ ಇಂಡಿಯಾ 20 ಓವರ್ಗಳಲ್ಲಿ 3 ವಿಕೆಟ್ ನಷ್ಟದೊಂದಿಗೆ 173 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವು 19.5 ಓವರ್ಗಳಲ್ಲಿ ಕೇವಲ 90 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 82 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡದ ನೆಟ್ ರನ್ ರೇಟ್ ಕೂಡ ಉತ್ತಮಗೊಂಡಿದೆ.
ದ್ವಿತೀಯ ಸ್ಥಾನಕ್ಕೇರಿದ ಟೀಮ್ ಇಂಡಿಯಾ:
ಬ್ಯಾಕ್ ಟು ಬ್ಯಾಕ್ ಗೆಲುವುಗಳೊಂದಿಗೆ ನೆಟ್ ರನ್ ರೇಟ್ ಹೆಚ್ಚಿಸಿಕೊಂಡಿರುವ ಟೀಮ್ ಇಂಡಿಯಾ ಇದೀಗ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. +0.576 ನೆಟ್ ರನ್ ರೇಟ್ ಹೊಂದಿರುವ ಭಾರತ ತಂಡವು ತನ್ನ ಕೊನೆಯ ಪಂದ್ಯದಲ್ಲೂ ಭರ್ಜರಿ ಜಯ ಸಾಧಿಸಿದರೆ ಮಾತ್ರ ಸೆಮಿಫೈನಲ್ಗೇರಬಹುದು.
ಏಕೆಂದರೆ ಅತ್ತ ಪಾಕಿಸ್ತಾನ್ ( +0.555) ಹಾಗೂ ನ್ಯೂಝಿಲೆಂಡ್ (-0.050) ತಂಡಗಳು ಸೆಮಿಫೈನಲ್ ರೇಸ್ನಲ್ಲಿದೆ. ತಲಾ 2 ಅಂಕಗಳನ್ನು ಹೊಂದಿರುವ ಈ ತಂಡಗಳಿಗೆ ಇನ್ನೂ 2 ಮ್ಯಾಚ್ಗಳಿವೆ. ಆದರೆ ಟೀಮ್ ಇಂಡಿಯಾಗೆ ಇರುವುದು ಕೇವಲ ಒಂದು ಪಂದ್ಯ ಮಾತ್ರ. ಅಂದರೆ ಕೊನೆಯ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ ಒಟ್ಟು 6 ಅಂಕಗಳನ್ನು ಹೊಂದಲಿದೆ.
ಒಂದು ವೇಳೆ ಪಾಕಿಸ್ತಾನ್ ಅಥವಾ ನ್ಯೂಝಿಲೆಂಡ್ ತಂಡಗಳು ಮುಂದಿನ ಎರಡು ಮ್ಯಾಚ್ಗಳಲ್ಲಿ ಭರ್ಜರಿ ಜಯ ಸಾಧಿಸಿದರೆ 6 ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೇರಬಹುದು. ಹೀಗಾಗಿ ಭಾರತ ತಂಡಕ್ಕೆ ತನ್ನ ಕೊನೆಯ ಪಂದ್ಯದಲ್ಲಿ ಭರ್ಜರಿ ಗೆಲುವು ಅನಿವಾರ್ಯ. ಈ ಮೂಲಕ ಅಂಕ ಪಟ್ಟಿಯಲ್ಲಿ ಉತ್ತಮ ನೆಟ್ ರನ್ ರೇಟ್ನೊಂದಿಗೆ ದ್ವಿತೀಯ ಸ್ಥಾನ ಅಲಂಕರಿಸಿ ಸೆಮಿಫೈನಲ್ಗೆ ಪ್ರವೇಶಿಸಬಹುದು.
ಇನ್ನು ಗ್ರೂಪ್ ಎ ಅಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡವು 2 ಗೆಲುವುಗಳೊಂದಿಗೆ ಒಟ್ಟು +2.524 ನೆಟ್ ರನ್ ರೇಟ್ ಹೊಂದಿದೆ. ಇನ್ನುಳಿದ ಎರಡು ಮ್ಯಾಚ್ಗಳಲ್ಲಿ ಒಂದು ಪಂದ್ಯವನ್ನು ಗೆದ್ದರೂ ಉತ್ತಮ ನೆಟ್ ರನ್ ರೇಟ್ ಹೊಂದಿರುವ ಕಾರಣ ಸೆಮಿಫೈನಲ್ ಅರ್ಹತೆಯನ್ನು ಖಚಿತಪಡಿಸಿಕೊಳ್ಳಬಹುದು.
ಇದನ್ನೂ ಓದಿ: PAK vs ENG: 3 ದಿನಗಳಲ್ಲಿ 5 ಶತಕ: ಪಾಕಿಸ್ತಾನದಲ್ಲಿ ಟೆಸ್ಟ್ ಕ್ರಿಕೆಟ್ನ ಕಗ್ಗೊಲೆ..!
ಭಾರತ ತಂಡವು ತನ್ನ ಕೊನೆಯ ಲೀಗ್ ಪಂದ್ಯವನ್ನು ಅಕ್ಟೋಬರ್ 13 ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಈ ಪಂದ್ಯವೇ ಟೀಮ್ ಇಂಡಿಯಾದ ಟಿ20 ವಿಶ್ವಕಪ್ ಭವಿಷ್ಯವನ್ನು ನಿರ್ಧರಿಸಲಿದೆ.
ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ಹೀಗಿದೆ:
- ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಅಮೋಘ ಗೆಲುವು ದಾಖಲಿಸಬೇಕು.
- ನ್ಯೂಝಿಲೆಂಡ್ ತಂಡವು ಪಾಕಿಸ್ತಾನ್ ಅಥವಾ ಶ್ರೀಲಂಕಾ ವಿರುದ್ಧ ಸೋಲಬೇಕು.
- ಪಾಕಿಸ್ತಾನ್ ತಂಡವು ನ್ಯೂಝಿಲೆಂಡ್ ವಿರುದ್ಧ ಗೆದ್ದು, ಆಸ್ಟ್ರೇಲಿಯಾ ವಿರುದ್ಧ ಸೋಲಬೇಕು.
- ಪಾಕಿಸ್ತಾನ್ ಅಥವಾ ನ್ಯೂಝಿಲೆಂಡ್ ಮುಂದಿನ ಪಂದ್ಯಗಳಲ್ಲಿ ಗೆದ್ದರೆ, ನೆಟ್ ರನ್ ರೇಟ್ನಲ್ಲಿ ಹಿಂದೆ ಉಳಿಯಬೇಕು.