ಟೀಮ್ ಇಂಡಿಯಾ ಪರ ಯಾರಿಂದಲೂ ಸಾಧ್ಯವಾಗದ ದಾಖಲೆ ಬರೆದ ನಿತೀಶ್ ರೆಡ್ಡಿ
Nitish Kumar Reddy Record: ಟೀಮ್ ಇಂಡಿಯಾದ ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಭರ್ಜರಿ ಪ್ರದರ್ಶನದೊಂದಿಗೆ ಗಮನ ಸೆಳೆದಿದ್ದಾರೆ. ಮೊದಲ ಮ್ಯಾಚ್ನಲ್ಲಿ ಅಜೇಯ 16 ರನ್ ಬಾರಿಸಿದ್ದ ನಿತೀಶ್ ದ್ವಿತೀಯ ಟಿ20 ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಅಬ್ಬರಿಸಿದ್ದಾರೆ. ಅಲ್ಲದೆ ಬೌಲಿಂಗ್ನಲ್ಲೂ ಮಿಂಚಿ ಹೊಸ ದಾಖಲೆ ಬರೆದಿದ್ದಾರೆ.
Updated on: Oct 10, 2024 | 8:32 AM

ಬಾಂಗ್ಲಾದೇಶ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತೀಯ ಬ್ಯಾಟರ್ಗಳು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅದರಲ್ಲೂ ಯುವ ದಾಂಡಿಗ ನಿತೀಶ್ ಕುಮಾರ್ ರೆಡ್ಡಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಬಾಂಗ್ಲಾ ಬೌಲರ್ಗಳ ಬೆಂಡೆತ್ತಿದ್ದರು. ಈ ಬೆಂಡೆತ್ತುವಿಕೆಯೊಂದಿಗೆ ನಿತೀಶ್ ರೆಡ್ಡಿ ಹೊಸ ದಾಖಲೆಯನ್ನು ಸಹ ಬರೆದಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿತೀಶ್ ರೆಡ್ಡಿ 34 ಎಸೆತಗಳಲ್ಲಿ 74 ರನ್ ಚಚ್ಚಿದ್ದರು. ಈ ವೇಳೆ ಅವರ ಬ್ಯಾಟ್ನಿಂದ 7 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳು ಮೂಡಿಬಂದಿದ್ದವು. ಈ ಮೂಲಕ ಟೀಮ್ ಇಂಡಿಯಾ 20 ಓವರ್ಗಳಲ್ಲಿ 221 ರನ್ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇನ್ನು 222 ರನ್ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ್ ತಂಡಕ್ಕೆ ಬೌಲಿಂಗ್ ಮೂಲಕ ಕೂಡ ಶಾಕ್ ನೀಡಿದರು. ಈ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದ ನಿತೀಶ್ ಕುಮಾರ್ ರೆಡ್ಡಿ ಕೇವಲ 23 ರನ್ ನೀಡಿ 2 ವಿಕೆಟ್ ಕಬಳಿಸಿದರು. ಈ ಆಲ್ರೌಂಡರ್ ಪ್ರದರ್ಶನದೊಂದಿಗೆ ಯುವ ಆಟಗಾರ ಹೊಸ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಟೀಮ್ ಇಂಡಿಯಾದ ಯಾವುದೇ ಆಟಗಾರ 70+ ರನ್ ಬಾರಿಸಿ, 2 ವಿಕೆಟ್ ಕಬಳಿಸಿಲ್ಲ. ಇದೀಗ ಆಡಿದ 2ನೇ ಪಂದ್ಯದ ಮೂಲಕವೇ ನಿತೀಶ್ ಕುಮಾರ್ ರೆಡ್ಡಿ ಯಾರಿಂದಲೂ ಸಾಧ್ಯವಾಗದಿದ್ದ ದಾಖಲೆಯನ್ನು ನಿರ್ಮಿಸಿ ತೋರಿಸಿದ್ದಾರೆ. ಅಲ್ಲದೆ ಆಲ್ರೌಂಡರ್ ಆಟದೊಂದಿಗೆ ಭಾರತ ತಂಡಕ್ಕೆ ಹೊಸ ಭರವಸೆಯನ್ನು ಮೂಡಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 135 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 86 ರನ್ಗಳ ಅಮೋಘ ಗೆಲುವು ದಾಖಲಿಸಿತು. ಹಾಗೆಯೇ ಈ ಪಂದ್ಯದಲ್ಲಿ ಆಲ್ರೌಂಡರ್ ಆಟದೊಂದಿಗೆ ಮಿಂಚಿದ ನಿತೀಶ್ ಕುಮಾರ್ ರೆಡ್ಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
























