15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ರೋಚಕತೆ ಪಡೆಯುತ್ತಿದೆ. ಐಪಿಎಲ್ 2022 ರಲ್ಲಿ (IPL 2022) ಇಂದು ನಡೆಯಲಿರುವ ನಾಲ್ಕನೇ ಪಂದ್ಯದಲ್ಲಿ ಎರಡು ಹೊಸ ತಂಡಗಳಾದ ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ (Lucknow Super Giants) ಮತ್ತು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ (Gujarat Titans) ಪದಾರ್ಪಣೆ ಮಾಡಲಿವೆ. ಕುಚುಕು ಸ್ನೇಹಿತರ ನಡುವಣ ಈ ಕಾಳಗ ಸಾಕಷ್ಟು ಕುತೂಹಲ ಕೆರಳಿಸಿದ್ದು, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಕೆಎಲ್ ರಾಹುಲ್ ಈಗಾಗಲೇ ನಾಯಕನಾಗಿ ಪಂಜಾಬ್ ತಂಡವನ್ನು ಮುನ್ನಡೆಸಿದ್ದರೆ, ಹಾರ್ದಿಕ್ ಪಾಂಡ್ಯಗೆ ಇದು ಮೊದಲ ಕ್ಯಾಪ್ಟನ್ಸಿ. ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರನ್ನ ಕಣಕ್ಕಿಳಿಸಬೇಕು ಎಂಬುದೇ ಉಭಯ ತಂಡಗಳ ನಾಯಕರ ಮುಂದಿರುವ ದೊಡ್ಡ ಸವಾಲು. ಲಖನೌ ಹಾಗೂ ಗುಜರಾತ್ ತಂಡಗಳ ಬ್ಯಾಟಿಂಗ್ ಬಲಾಬಲವನ್ನು ಗಮನಿಸಿದರೆ ಮೇಲ್ನೋಟಕ್ಕೆ ರಾಹುಲ್ ಪಡೆಯೇ ಬಲಿಷ್ಠವಾಗಿದೆ.
ಲಖನೌ ತಂಡದಲ್ಲಿ ಬೌಲರ್ಗಳಿಂತ ಹೆಚ್ಚು ಬ್ಯಾಟರ್ಗಳೇ ಇದ್ದಾರೆ. ನಾಯಕ ಕೆಎಲ್ ರಾಹುಲ್, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ ಅತ್ಯುತ್ತಮ ಆರಂಭಿಕ ಜೋಡಿಯಾಗಿದೆ. ಆಲ್ರೌಂಡರ್‌ಗಳಾದ ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಕನ್ನಡಿಗ ಮನೀಷ್ ಪಾಂಡೆ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿರುವ ಬಹುತೇಕ ಆಟಗಾರರು ತಂಡದಲ್ಲಿರುವ ಕಾರಣ ರಾಹುಲ್ ನಾಯಕತ್ವಕ್ಕೂ ಸುಲಭವಾಗಬಹುದು. ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟರ್ ಎವಿನ್ ಲೆವಿಸ್ ಕೂಡ ಹೆಚ್ಚುವರಿ ಬ್ಯಾಟರ್ ಆಗಿದ್ದಾರೆ. ಆವೇಶ್ ಖಾನ್ ಬೌಲಿಂಗ್ ವಿಭಾಗದ ಸಾರಥ್ಯ ವಹಿಸಲಿದ್ದು, ಇವರಿಗೆ ರವಿ ಬಿಷ್ಣೋಯಿ ಸಾಥ್ ನೀಡಲಿದ್ದಾರೆ. ಕರ್ನಾಟಕ ಕೆ.ಗೌತಮ್ ಕೂಡ ತಂಡದಲ್ಲಿದ್ದಾರೆ.
ಇತ್ತ ಗುಜರಾತ್ ತಂಡದಲ್ಲಿ ಕನ್ನಡಿಗ ಅಭಿನವ್ ಮನೋಹರ್‌ಗೆ ಕಣಕ್ಕಿಳಿಯುವ ಅವಕಾಶ ಸಿಗುವ ಸಾಧ್ಯತೆ ಇದೆ. ಶುಭ್ಮನ್ ಗಿಲ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ಜಯಂತ್ ಯಾದವ್ ಮತ್ತು ಅಫ್ಗಾನಿಸ್ತಾನದ ಆಟಗಾರ ರಶೀದ್ ಖಾನ್ ತಂಡದಲ್ಲಿದ್ದಾರೆ. ರಶೀದ್ ಉಪ ನಾಯಕನಾಗಿ ಕೂಡ ಆಯ್ಕೆಯಾಗಿದ್ದಾರೆ. ಕಳೆದ ಋತುಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡಿದ್ದ ರಶೀದ್ ಯಶಸ್ವಿ ಸ್ಪಿನ್ನರ್ ಆಗಿ ಮಿಂಚಿದ್ದರು.
ಹಾರ್ದಿಕ್ ಮೇಲೆ ಎಲ್ಲರ ಕಣ್ಣು:
ಕಳೆದ ವರ್ಷ ಮುಂಬೈ ಪಾಳಯದಲ್ಲಿದ್ದ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿರಲಿಲ್ಲ. ಬೆನ್ನುನೋವಿನ ಕಾರಣಕ್ಕೆ ಬೌಲಿಂಗ್ ಕೂಡ ಮಾಡಿರಲಿಲ್ಲ. ಭಾರತ ತಂಡದಲ್ಲಿಯೂ ಅವರ ಆಟ ನಡೆಯದೆ ಕೆಲ ಪಂದ್ಯಕ್ಕೆ ಆಯ್ಕೆಯಾಗಿರಲಿಲ್ಲ. ಆದ್ದರಿಂದ ಈಗ ಅವರ ಮುಂದೆ ತಮ್ಮ ಆಲ್‌ರೌಂಡ್ ಆಟ ಮತ್ತು ನಾಯಕತ್ವವನ್ನು ತೋರಿಸುವ ಸವಾಲು ಇದೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಭಾರತ ತಂಡದಲ್ಲಿ ಇವರ ಸ್ಥಾನ ಖಚಿತವಾಗಲಿದೆ. ಇಲ್ಲವಾದರೆ ವೆಂಕಟೇಶ್ ಅಯ್ಯರ್ ಸ್ಥಾನ ಭದ್ರವಾಗಲಿದೆ. ಅಂತೆಯೆ ಹಾರ್ದಿಕ್ ಪಾಂಡ್ಯ 2 ಸಿಕ್ಸರ್ ಸಿಡಿಸಿದರೆ ಐಪಿಎಲ್‌ನಲ್ಲಿ 100 ಸಿಕ್ಸರ್ ಪೂರೈಸಲಿದ್ದಾರೆ.
ಪಿಚ್ ಹೇಗಿದೆ?:
ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣ ಬ್ಯಾಟ್ಸ್‌ಮನ್‌ಗಳ ಸ್ವರ್ಗವಾಗಿದ್ದು, ದಾಂಡಿಗರು ಈ ಪಿಚ್‌ನಲ್ಲಿ ರನ್ ಹೊಳೆಯನ್ನೇ ಹರಿಸಲಿದ್ದಾರೆ. 2ನೇ ಇನ್ನಿಂಗ್ಸ್ ವೇಳೆ ಇಬ್ಬನಿ ಬೀಳುವ ಸಾಧ್ಯತೆ ಇರುವ ಕಾರಣ, ಮೊದಲು ಬ್ಯಾಟ್ ಮಾಡುವ ತಂಡ ಕನಿಷ್ಠ 180-190 ರನ್ ಗಳಿಸಿದರಷ್ಟೇ ಗೆಲ್ಲುವ ನಿರೀಕ್ಷೆ ಇಟ್ಟುಕೊಳ್ಳಬಹುದು. ಈ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳಲ್ಲಿ ಚೇಸ್ ಮಾಡುವ ತಂಡ ಹೆಚ್ಚಿನ ಹಿಡಿತವನ್ನು ಹೊಂದಿರುವುದು ಸಾಮಾನ್ಯವಾಗಿದೆ. ಹೀಗಾಗಿ ಟಾಸ್ ಗೆಲ್ಲುವ ತಂಡ ಮೊದಲು ಬೌಲಿಂಗ್ ಆಯ್ದುಕೊಂಡು, ಚೇಸಿಂಗ್ ಮಾಡಿದರೆ ಪಂದ್ಯ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ. ವೇಗಿಗಳಿಗೆ ಪಿಚ್ ನೆರವು ನೀಡುವ ಸಾಧ್ಯತೆ ಕೂಡ ಹೆಚ್ಚು.
ಗುಜರಾತ್ ಟೈಟನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ಗುರುಕೀರತ್ ಸಿಂಗ್, ಸಾಯಿ ಸುದರ್ಶನ್, ಶುಭಮನ್ ಗಿಲ್, ರಾಹುಲ್ ತೆವಾಟಿಯಾ, ವಿಜಯಶಂಕರ್, ಮ್ಯಾಥ್ಯೂ ವೇಡ್, ರೆಹಮಾನುಲ್ಲಾ ಗುರ್ಬಾಜ್, ವೃದ್ಧಿಮಾನ್ ಸಹಾ, ಅಲ್ಜರಿ ಜೋಸೆಫ್, ದರ್ಶನ್ ನಾಲ್ಕಂಡೆ, ಡಾಮ್ನಿಕ್ ಡ್ರೇಕ್ಸ್, ಜಯಂತ್ ಯಾದವ್, ಲಾಕಿ ಫರ್ಗ್ಯುಸನ್, ಮೊಹಮ್ಮದ್ ಶಮಿ, ನೂರ್ ಅಹಮದ್, ಪ್ರದೀಪ್ ಸಂಗ್ವಾನ್, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ, ವರುಣ್ ಆಯರನ್, ಯಶ್ ದಯಾಳ್.
ಲಖನೌ ಸೂಪರ್ ಜೈಂಟ್ಸ್ ತಂಡ: ಕೆ.ಎಲ್. ರಾಹುಲ್ (ನಾಯಕ), ಮನನ್ ವೊಹ್ರಾ, ಎವಿನ್ ಲೂಯಿಸ್, ಮನೀಷ್ ಪಾಂಡೆ, ಕ್ವಿಂಟನ್ ಡಿಕಾಕ್, ರವಿ ಬಿಷ್ಣೋಯಿ, ದುಷ್ಮಂತಾ ಚಾಮೀರಾ, ಶಾಬಾಜ್ ನದೀಮ್, ಮೊಹಸಿನ್ ಖಾನ್, ಮಯಂಕ್ ಯಾದವ್, ಅಂಕಿತ್ ರಜಪೂತ್, ಆವೇಶ್ ಖಾನ್, ಆಯಂಡ್ರ್ಯೂ ಟೈ, ಮಾರ್ಕಸ್ ಸ್ಟೊಯಿನಿಸ್, ಕೈಲ್ ಮೇಯರ್ಸ್, ಕರಣ್ ಶರ್ಮಾ, ಕೃಷ್ಣಪ್ಪ ಗೌತಮ್, ಆಯುಷ್ ಬದೋನಿ, ದೀಪಕ್ ಹೂಡಾ, ಕೃಣಾಲ್ ಪಾಂಡ್ಯ, ಜೇಸನ್ ಹೋಲ್ಡರ್.
IPL 2022, PBKS vs RCB: ಪಂದ್ಯ ಸೋತರೂ ಎದುರಾಳಿಗರಿಗೆ ದೊಡ್ಡದಾಗಿ ಸಿಗ್ನಲ್ ಕೊಟ್ಟ ಆರ್ಸಿಬಿ: ಏನದು ಗೊತ್ತೇ?